Englishहिन्दीമലയാളംதமிழ்తెలుగు

ಕರ್ನಾಟಕ ತಂಡದಿಂದ ಅಭೂತಪೂರ್ವ ಸಾಧನೆ

Posted by:
Published: Sunday, March 16, 2014, 17:20 [IST]
 

ಕೋಲ್ಕತ್ತಾ, ಮಾ.16: ಆರ್ ವಿನಯ್ ಕುಮಾರ್ ಅವರ ನೇತೃತ್ವದ ಕರ್ನಾಟಕ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಭಾನುವಾರ ಕರ್ನಾಟಕ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಈಡೆನ್ ಗಾರ್ಡನ್ಸ್ ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ರೈಲ್ವೆಸ್ ತಂಡವನ್ನು ಸೋಲಿಸುವ ಮೂಲಕ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿ ಗೆದ್ದು ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದೆ.

ಪ್ರಸಕ್ತ ಋತುವಿನಲ್ಲಿ ಆರ್ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ರಣಜಿ ಟ್ರೋಫಿ, ಇರಾನಿ ಕಪ್ ನಂತರ ಈಡೆನ್ಸ್ ಗಾರ್ಡನ್ಸ್ ನಲ್ಲಿ ರೈಲ್ವೆ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿದೆ. ಬೇರೆ ಯಾವ ತಂಡ ಕೂಡಾ ಈ ಅಪೂರ್ವವಾದ ಸಾಧನೆಯನ್ನು ದೇಶಿ ಕ್ರಿಕೆಟ್ ನಲ್ಲಿ ಇದುವರೆವಿಗೂ ಮಾಡಿಲ್ಲ. ಒಟ್ಟಾರೆ ಈ ಋತುವಿನಲ್ಲಿ ಎಲ್ಲಾ ಮಾದರಿ ಪಂದ್ಯಗಳ ಲೆಕ್ಕ ಹಾಕಿದರೆ 19 ಪಂದ್ಯಗಳನ್ನಾಡಿರುವ ಕರ್ನಾಟಕ 13 ಪಂದ್ಯ ಜಯಿಸಿ, 4 ರಲ್ಲಿ ಡ್ರಾ ಸಾಧಿಸಿ, 1 ಟೈ ಪಂದ್ಯ ಜತೆಗೆ ಒಂದೇ ಒಂದು ಪಂದ್ಯವನ್ನು ಸೋತಿದೆ. ಒಟ್ಟಾರೆ 3 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದು ಅಭೂತಪೂರ್ವ ಸಾಧನೆಯಾಗಿದೆ.

ಕರ್ನಾಟಕ ತಂಡದಿಂದ ಅಭೂತಪೂರ್ವ ಸಾಧನೆ

ಗೆಲ್ಲಲು ಬೇಕಾದ 158 ರನ್ ಗಳನ್ನು ನಿಧಾನಗತಿಯಿಂದ ಚೇಸ್ ಮಾಡಿದ ಕರ್ನಾಟಕ 6 ವಿಕೆಟ್ ಕಳೆದುಕೊಂಡು 43ನೇ ಓವರ್ ನಲ್ಲಿ ದಾಟಿತು. ಕೆಳ ಹಂತದಲ್ಲಿ ಕರಣ್ ನಾಯರ್ ನೆಲಕಚ್ಚಿ ನಿಂತು 53 ರನ್ ಗಳಿಸಿ ಔಟಾಗದೆ ಉಳಿದು ತಂಡಕ್ಕೆ ಜಯ ತಂದಿದ್ದರು. ಕರ್ನಾಟಕದ ಪರ ಕೆಎಲ್ ರಾಹುಲ್ 38ರನ್(72 ಎ, 4x4), ನಾಯರ್ 53 ರನ್ (86 ಎ, 4x4) ಪ್ರಥಮ ಬಾರಿಗೆ ರಾಬಿನ್ ಉತ್ತಪ್ಪ ಅವರು 8 ರನ್ ಗಳಿಸಿ ವಿಫಲರಾದರು. ಕುನಾಲ್ ಕಪೂರ್ 24 ರನ್ ಗಳಿಸಿ ನಾಯರ್ ಗೆ ಸಾಥ್ ನೀಡಿದರು. ರೈಲ್ವೇಸ್ ಪರ ಅನುರೀತ್ ಸಿಂಗ್ 9 ಓವರ್ ಗಳಲ್ಲಿ 41ಕ್ಕೆ 2, ಉಪಾಧ್ಯಾಯ್ 9 ಓವರ್ ಗಳಲ್ಲಿ 30ಕ್ಕೆ 3 ವಿಕೆಟ್ ಗಳಿಸಿ ಕರ್ನಾಟಕಕ್ಕೆ ಆತಂಕ ಮೂಡಿಸಿದ್ದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೆಸ್ ತಂಡ ಕರ್ನಾಟಕದ ಮಾರಕ ಬೌಲಿಂಗ್ ಗೆ ತತ್ತರಿಸಿ 47.4 ಓವರ್ ಗಳಲ್ಲಿ 157 ಸ್ಕೋರ್ ಮಾಡಿ ಆಲೌಟ್ ಆಯಿತು. ಜೊನಾಥನ್ ಅವರು 46, ಎಎನ್ ಘೋಶ್ 33 ರನ್ ಗಳಿಸಿದರು. ಕರ್ನಾಟಕ ಪರ ಮಿಥುನ್ 9.4 ಓವರ್ ಗಳಲ್ಲಿ 19 ರನ್ನಿತ್ತು 4 ವಿಕೆಟ್ ಗಳಿಸಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ರಾಬಿನ್ ಉತ್ತಪ್ಪ, ಅಬ್ರಾರ್ ಖಾಜಿ ತಲಾ 2 ವಿಕೆಟ್ ಗಳಿಸಿದರು, ವಿನಯ್ ಕುಮಾರ್ ಅವರು 1 ವಿಕೆಟ್ ಗಳಿಸಿ ರನ್ ಗತಿಗೆ ಬ್ರೇಕ್ ಹಾಕಿದರು.

ದಟ್ಸ್ ಕ್ರಿಕೆಟ್

English summary
Vinay Kumar led Karnataka team created history today(Mar.16) by winning the Vijay Hazare Trophy one-day tournament here at Eden Gardens.Karnataka defeated Railways by four wickets in the final to complete a hat-trick of titles this season.
ಅಭಿಪ್ರಾಯ ಬರೆಯಿರಿ