Englishहिन्दीമലയാളംதமிழ்తెలుగు

ಬೂಮ್ ಬೂಮ್ ಅಫ್ರಿದಿಗೆ ಆರ್ಭಟಕ್ಕೆ ಟೀಂ ಇಂಡಿಯಾ ಬಲಿ

Posted by:
Updated: Sunday, March 2, 2014, 21:29 [IST]
 

ಮೀರ್ ಪುರ್, ಮಾ.2: ಭಾರತ ಒಡ್ಡಿದ್ದ 246 ರನ್ ಗಳ ಸವಾಲು ಎದುರಿಸಿದ ಪಾಕಿಸ್ತಾನ ಪಡೆ ಹಫೀಜ್ ಸಮಯೋಚಿತ ಆಟ, ಮಕ್ಸೂದ್ -ಹಫೀಜ್ ಜೊತೆಯಾಟ, ಕೊನೆಯಲ್ಲಿ ಅಫ್ರಿದಿ ಬೂಮ್ ಬೂಮ್ ಆಟದಿಂದಾಗಿ ಬದ್ಧವೈರಿಗಳನ್ನು ಸದೆಬಡೆದು ಕೇಕೇ ಹಾಕಿ ಕುಣಿದಾಡಿದೆ. ದೊಡ್ಡ ಮೊತ್ತ ಸವಾಲು ಒಡ್ಡಲಾಗದ ಕೊಹ್ಲಿ ಪಡೆ, ಕೊಟ್ಟ ಗುರಿಯಲ್ಲಿ ಪಾಕಿಗಳನ್ನು ಕಟ್ಟಿ ಹಾಕಲಾಗದೆ ಸಂಕಟದ ಸೋಲು ಅನುಭವಿಸಿ ಫೈನಲ್ ಆಸೆಯನ್ನು ಕೈ ಬಿಟ್ಟಿದೆ. 49.4 ಓವರ್ ಗಳಲ್ಲಿ 249/9 ಸ್ಕೋರ್ ಮಾಡಿ ಪಾಕಿಸ್ತಾನ 1 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ಸ್ಕೋರ್ ಕಾರ್ಡ್ ನೋಡಿ

ಪಾಕಿಸ್ತಾನ ಇನ್ನಿಂಗ್ಸ್: ಶರ್ಜೀಲ್ ಖಾನ್ ಹಾಗೂ ಅಹ್ಮದ್ ಶೆಹ್ಜಾದ್ ಅವರ ಉತ್ತಮ ಆರಂಭದ ಅಡಿಪಾಯದ ಲಾಭ ಪಡೆದುಕೊಂಡಿತು. ಮೊದಲ ವಿಕೆಟ್ ಗೆ ಈ ಜೋಡಿ 71 ರನ್ ಕಲೆ ಹಾಕಿತು. ಭಾರತದ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಪಾಕಿಗಳು ತಲೆನೋವಾದರು.

ಆರ್ ಅಶ್ವಿನ್ ಅವರು ಶರ್ಜೀನ್ ಕ್ಲೀನ್ ಬೋಲ್ಡ್ ಮಾಡುತ್ತಿದ್ದಂತೆ ಕೊಹ್ಲಿ ಪಡೆಯಲ್ಲಿ ಹೊಸ ಹುರುಪು ಕಾಣಿಸಿಕೊಂಡಿತು. ಅಹ್ಮದ್ ಕೂಡಾ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಬಲೆಗೆ ಬಿದ್ದರು. ಆದರೆ, ಇನ್ನೊಂದು ತುದಿಯಲ್ಲಿ ಮಹಮ್ಮದ್ ಹಫೀಜ್ ಸಮಯೋಚಿತ ಆಟ ಪ್ರದರ್ಶಿಸಿ ಇನ್ನಿಂಗ್ಸ್ ಕಟ್ಟಿದರು.

ಪಾಕಿಸ್ತಾನದ ನಾಯಕ ಮಿಸ್ಬಾ ಉಲ್ ಹಕ್ 1, ಉಮರ್ ಉಲ್ ಹಕ್ 4 ಕಳಪೆ ಮೊತ್ತ ಔಟ್ ಆದರು. ಶೋಯಿಬ್ ಮಕ್ಸೂಬ್ 38 ರನ್ ಗಳಿಸಿ ಹಫೀಜ್ ಗೆ ಸಾಥ್ ನೀಡಿದರು. ಹಫೀಜ್ 75 ರನ್ (117 ಎ, 3x4, 2x6) ಪಾಕಿಸ್ತಾನಕ್ಕೆ ಗೆಲುವಿನ ಆಸೆ ಹುಟ್ಟಿಸಿದರು.

ಹಫೀಜ್ ವಿಕೆಟ್ ಅಶ್ವಿನ್ ಪಡೆದರೆ, ಮಕ್ಸೂದ್ ಅನಗತ್ಯ ರನ್ ಕದಿಯಲು ಹೋಗಿ ರನೌಟ್ ಆದರು. 203/6 ಸ್ಕೋರ್ ಆಗಿದ್ದಾಗ ಟೀಂ ಇಂಡಿಯಾಕ್ಕೆ ಗೆಲುವಿನ ಆಸೆ ಮತ್ತೆ ಹುಟ್ಟಿತು. ಆದರೆ, ಬೂಮ್ ಬೂಮ್ ಅಫ್ರಿದಿ 34 ರನ್ 18 ಎಸೆತ ಎರಡು ಬೌಂಡರಿ, 3 ಸಿಕ್ಸ್ ಸಿಡಿಸಿ ಪಾಕಿಸ್ತಾನ ಗೆಲುವಿನ ನಗೆ ಬೀರುವಂತೆ ಮಾಡಿದರು. ಅಫ್ರಿದಿಗೆ ವೇಗಿ ಉಮರ್ ಗುಲ್ ಉತ್ತಮ ಸಾಥ್ ನೀಡಿದರೂ 12 ರನ್ ಗಳಿಸಿ ಔಟಾದರು.

ಭಾರತದ ಪರ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅದ್ಭುತ ಬೌಲಿಂಗ್ ಮಾಡಿ 28 ರನ್ನಿತ್ತು 2 ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರೆ, ಜಡೇಜ 10 ಓವರ್ ಗಳಲ್ಲಿ 61 ರನ್ ಚೆಚ್ಚಿಸಿಕೊಂಡರು. ಅಶ್ವಿನ್ 2 ವಿಕೆಟ್ ಕಿತ್ತಿದ್ದಷ್ಟೇ ಬಂತು. ಕೊನೆ ಓವರ್ ನಲ್ಲಿ ಅಫ್ರಿದಿ ಕೈಗೆ ಸತತ ಸಿಕ್ಸ್ ಹೊಡೆಸಿಕೊಂಡು ತಲೆ ಮೇಲೆ ಕೈ ಹೊತ್ತುಕೊಂಡರು. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಗೆ 'ಸ್ಟಂಪಿಂಗ್ ಮಾಡುವುದು ಹೇಗೆ?' ಎಂಬ ಕೋರ್ಸಿಗೆ ಸೇರುವಂತೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.

ಬೂಮ್ ಬೂಮ್ ಅಫ್ರಿದಿಗೆ ಆರ್ಭಟಕ್ಕೆ ಟೀಂ ಇಂಡಿಯಾ ಬಲಿ


ಭಾರತ ಇನ್ನಿಂಗ್ಸ್:
ಪಂದ್ಯದ ಮೂರನೇ ಓವರ್ ನಲ್ಲೇ ಶಿಖರ್ ಧವನ್ 10 ರನ್ ಗಳಿಸಿ ಹಫೀಜ್ ಗೆ ಎಲ್ ಬಿ ಆಗಿ ಪೆವಿಲಿಯನ್ ಗೆ ತೆರಳಿದರು. ರೋಹಿತ್ ಶರ್ಮ 58 ಎಸೆತದಲ್ಲಿ 56ರನ್(7x4, 2x6) ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿ 5 ರನ್ನಿಗೆ ಔಟಾದರು. ಅಜಿಂಕ್ಯ ರಹಾನೆ ನಿಧಾನಗತಿಯಲ್ಲಿ ಆಡಿ 23 ರನ್(50 ಎಸೆತ, 3‌‍x4, 1x6) ಗಳಿಸಿದರು. ದಿನೇಕ್ ಕಾರ್ತಿಕ್ 23 ಗಳಿಸಿ ಔಟಾದರು.

ಅಂಬಟಿ ರಾಯುಡು 52 ರನ್ (62 ಎ, 4x4, 1x6), ರವೀಂದ್ರ ಜಡೇಜ ಔಟಾಗದೆ 52 ರನ್ (49 ಎ, 4x4, 2x6) ತಂಡದ ಮೊತ್ತವನ್ನು ಹೆಚ್ಚಿಸಿತು. ಪಾಕಿಸ್ತಾನ ಪರ ಅಜ್ಮಲ್ 40ಕ್ಕೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಹಫೀಜ್ , ವೇಗಿ ತಲ್ಹಾ ತಲಾ 2 ವಿಕೆಟ್ ಕಿತ್ತರು. ಗುಲ್ 1 ವಿಕೆಟ್ ಕಿತ್ತು 9 ಓವರ್ ಗಳಲ್ಲಿ 60 ರನ್ ಕೊಟ್ಟು ದುಬಾರಿ ಎನಿಸಿದರು.

ಬೂಮ್ ಬೂಮ್ ಅಫ್ರಿದಿಗೆ ಆರ್ಭಟಕ್ಕೆ ಟೀಂ ಇಂಡಿಯಾ ಬಲಿ

ಟಾಸ್ ವರದಿ: ಏಷ್ಯಾಕಪ್ 2014 ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯ ಆರಂಭವಾಗಿದೆ. ಬದ್ಧ ಎದುರಾಳಿ ಟೀಂ ಇಂಡಿಯಾ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅವರು ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಷೇರ್ ಎ ಬಾಂಗ್ಲಾ ಮೈದಾನದಲ್ಲಿ ಟೀಂ ಇಂಡಿಯಾ ಹೊಸ ಉತ್ಸಾಹದಿಂದ ಕಣಕ್ಕಿಳಿದಿದೆ.

ಏಷ್ಯಾ ಕಪ್ ಟೂರ್ನಿಯ ಸೆಮಿಫೈನಲ್ ಎನ್ನಬಹುದಾದ ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಬದಲಾವಣೆ ಮಾಡಿಕೊಂಡಿದೆ. ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಬದಲಿಗೆ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಸ್ಥಾನ ನೀಡಲಾಗಿದೆ. ಪಾಕಿಸ್ತಾನ ಕೂಡಾ ಕಳೆದ ಪಂದ್ಯದಲ್ಲಿ ಆಡಿದ ಅಂತಿಮ ‍XIನಲ್ಲಿ ಬದಲಾವಣೆ ಮಾಡಿ ಅನ್ವರ್ ಅಲಿ ಬದಲಿಗೆ ಮಹಮ್ಮದ್ ತಾಲ್ಹಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಟೀಂ ಇಂಡಿಯಾದಲ್ಲಿ ನೂರನೇ ಪಂದ್ಯವಾಡುತ್ತಿರುವ ರವೀಂದ್ರ ಜಡೇಜ, ಅಮಿತ್ ಮಿಶ್ರಾ ಹಾಗೂ ಆರ್ ಅಶ್ವಿನ್ ಮೂವರು ಸ್ಪಿನ್ನರ್ ಗಳು ಮಹತ್ವದ ಪಾತ್ರವಹಿಸಲಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆಟ್ ಕಾರ್ತಿಕ್), ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಅಮಿತ್ ಮಿಶ್ರಾ, ಅಂಬಟಿ ರಾಯುಡು.

ಪಾಕಿಸ್ತಾನ: ಮಿಸ್ಬಾ ಉಲ್ ಹಕ್(ನಾಯಕ), ಶರ್ಜೀಲ್ ಖಾನ್, ಅಹ್ಮದ್ ಶೆಹಜಾದ್, ಮಹಮ್ಮದ್ ಹಫೀಜ್, ಶೊಯಬ್ ಮಕ್ಸೂದ್, ಉಮರ್ ಅಕ್ಮಲ್(ವಿಕೆಟ್ ಕೀಪರ್), ಶಹೀದ್ ಅಫ್ರಿಡಿ, ಮಹಮ್ಮದ್ ತಲ್ಹಾ, ಉಮರ್ ಗುಲ್, ಸಯೀದ್ ಅಜ್ಮಲ್, ಜುನೈದ್ ಖಾನ್

Story first published:  Sunday, March 2, 2014, 13:27 [IST]
English summary
Asia Cup 2014 : Boom boom Shahid Afridi did it again, Pakistan beat India by 1 wicket in a crucial match
ಅಭಿಪ್ರಾಯ ಬರೆಯಿರಿ