Englishहिन्दीമലയാളംதமிழ்తెలుగు

ಕರ್ನಾಟಕ ವಿರುದ್ಧ ಸೆಣಸಾಟಕ್ಕೆ ಸೆಹ್ವಾಗ್ ಇಲ್ಲ

Posted by:
Published: Tuesday, February 4, 2014, 15:00 [IST]
 

ನವದೆಹಲಿ, ಅ.4: ಇತ್ತೀಚೆಗೆ ಟಿ20 ಪಂದ್ಯವೊಂದರಲ್ಲಿ ಉತ್ತಮ ಆಟ ಪ್ರದರ್ಶಿಸಿ ಮತ್ತೆ ಲಯಕ್ಕೆ ಮರಳಿದ್ದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಮತ್ತೊಮ್ಮೆ ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದಾರೆ. ರಣಜಿ ಚಾಂಪಿಯನ್ ಕರ್ನಾಟಕದ ವಿರುದ್ಧ ನಡೆಯಲಿರುವ ಇರಾನಿ ಕಪ್ ಗೆ ಶೇಷ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಂಭೀರ್ ಸ್ಥಾನ ಪಡೆದಿದ್ದರೆ ಸೆಹ್ವಾಗ್ ಅವರನ್ನು ಕೈ ಬಿಡಲಾಗಿದೆ.

ಇತರೆ ಭಾರತ ತಂಡವನ್ನು ಹರ್ಭಜನ್ ಸಿಂಗ್ ಮುನ್ನಡೆಸಲಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆ.9 ರಿಂದ 13ರ ತನಕ ಇರಾನಿ ಕಪ್ ನಡೆಯಲಿದೆ. 2012-13ರಲ್ಲಿ ಮುಂಬೈ ವಿರುದ್ಧದ ಇರಾನಿ ಕಪ್ ನಲ್ಲಿ ಶೇಷ ಭಾರತ ತಂಡವನ್ನು ಮುನ್ನಡೆಸಿದ್ದ ಹರ್ಭಜನ್ ಇದೀಗ ಸತತ ಎರಡನೆ ವರ್ಷವೂ ನಾಯಕತ್ವವನ್ನು ವಹಿಸಿಕೊಂಡಿರುವುದು ವಿಶೇಷ.

ಕರ್ನಾಟಕ ವಿರುದ್ಧ ಸೆಣಸಾಟಕ್ಕೆ ಸೆಹ್ವಾಗ್ ಇಲ್ಲ

ತಂಡದಲ್ಲಿ ಗೌತಮ್ ಗಂಭೀರ್, ಜೀವನ್ ಜೋತ್ ಸಿಂಗ್ ಹಾಗೂ ನಟರಾಜ್ ಬೆಹ್ರಾ ಅವರು ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್, ಅಮಿತ್ ಮಿಶ್ರಾ, ಅಶೋಕ್ ದಿಂಡಾ, ವರುಣ್ ಅರೋನ್ ಹಾಗೂ ಪಂಕಜ್ ಸಿಂಗ್ ತಂಡದಲ್ಲಿದ್ದಾರೆ. ಭಾನುವಾರ(ಫೆ.2) ಮಹಾರಾಷ್ಟ್ರ ತಂಡವನ್ನು ಸೋಲಿಸಿ ಕರ್ನಾಟಕ ತಂಡ ಏಳನೇ ಬಾರಿಗೆ ರಣಜಿ ಕಪ್ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವರ್ಷದ ರಣಜಿಯಲ್ಲಿ ಗರಿಷ್ಠ ಸ್ಕೋರರ್ ಎನಿಸಿರುವ ಕೇದಾರ್ ಜಾಧವ್ ಆಯ್ಕೆಯಾಗಿದ್ದರೆ, ಮೂರನೇ ಗರಿಷ್ಠ ಸ್ಕೋರರ್ ಆಗಿರುವ ಹರ್ಷದ್ ಖಡಿವಾಲೆಗೆ ಸ್ಥಾನ ಸಿಕ್ಕಿಲ್ಲ. ಜತೆಗೆ ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿರುವ ರಿಶಿ ಧವನ್(49 ವಿಕೆಟ್) ತಂಡದಲ್ಲಿ ಸ್ಥಾನ ಪಡೆದಿಲ್ಲ. ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿರುವ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಹಾಗೂ ಅನುರೀತ್ ಸಿಂಗ್, ಅಶೋಕ್ ದಿಂಡಾ, ಪಂಕಜ್ ಇರಾನಿ ಕಪ್ ಪಂದ್ಯವಾಡುತ್ತಿದ್ದಾರೆ.

ಇತರೆ ಭಾರತ ತಂಡ ಇಂತಿದೆ: ಹರ್ಭಜನ್ ಸಿಂಗ್(ನಾಯಕ),ಜೀವನ್‌ಜೋತ್ ಸಿಂಗ್, ಗೌತಮ್ ಗಂಭೀರ್, ಬಾಬಾ ಅಪರಾಜಿತ್, ಕೇದಾರ್ ಜಾಧವ್, ಅಂಕಿತ್ ಭಾವ್ನೆ ದಿನೇಶ್ ಕಾರ್ತಿಕ್(ವಿಕೆಟ್ ‌ಕೀಪರ್), ಅಮಿತ್ ಮಿಶ್ರಾ, ಪಂಕಜ್ ಸಿಂಗ್, ಅಶೋಕ್ ದಿಂಡಾ, ವರುಣ್ ಅರೋನ್ , ಪರ್ವೀಝ್ ರಸೂಲ್, ಅನುರೀತ್ ಸಿಂಗ್, ನಟರಾಜ್ ಬೆಹ್ರಾ ಹಾಗೂ ಮನ್ ‌ದೀಪ್ ಸಿಂಗ್.

English summary
Harbhajan Singh has been named the captain of Rest of India (RoI) squad for the Irani Cup match against Ranji Trophy champions Karnataka in Bangalore from February 9 to 13.
ಅಭಿಪ್ರಾಯ ಬರೆಯಿರಿ