Englishहिन्दीമലയാളംதமிழ்తెలుగు

ಸಚಿನ್ ತೆಂಡೂಲ್ಕರ್ ಭಾವಪೂರ್ಣ ವಿದಾಯದ ಭಾಷಣ

Posted by:
Updated: Saturday, November 16, 2013, 17:41 [IST]
 

ಮುಂಬೈ, ನ. 16 : "ಸ್ನೇಹಿತರೆ, ದಯವಿಟ್ಟು ಕುಳಿತುಕೊಳ್ಳಿ, ನನಗೆ ಮಾತಾಡಲು ಅವಕಾಶ ಮಾಡಿಕೊಡಿ. ಹೀಗೆಯೇ ಸಚಿನ್ ಸಚಿನ್ ಅಂತ ಕೂಗುತ್ತಿದ್ದರೆ ನಾನು ಇನ್ನೂ ಭಾವುಕನಾಗುತ್ತೇನೆ. 22 ಯಾರ್ಡ್ ನಡುವಿನ ನನ್ನ 24 ವರ್ಷಗಳ ಕ್ರಿಕೆಟ್ ಪಯಣ ಕೊನೆಗೊಳ್ಳುತ್ತಿರುವುದು ನಂಬಲೇ ಆಗುತ್ತಿಲ್ಲ. ಮೊದಲ ಬಾರಿಗೆ ಇಂಥದೊಂದು ಚೀಟಿ ಇಟ್ಟುಕೊಂಡಿದ್ದೇನೆ. ಯಾರ ಹೆಸರನ್ನಾದರೂ ಸ್ಮರಿಸದಿದ್ದರೆ ದಯವಿಟ್ಟು ಕ್ಷಮಿಸಿ..."

ಇವು, ತಮ್ಮ ಸುದೀರ್ಘ ಕ್ರಿಕೆಟ್ ಪಯಣದ ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದ ಸುದೀರ್ಘ ವಿದಾಯ ಭಾಷಣದ ಆರಂಭದ ನುಡಿಗಳು. ವಿಪರೀತ ಭಾವುಕರಾಗಿದ್ದ ಸಚಿನ್ ಸಹಜ ಸ್ಥಿತಿಗೆ ಬಂದು ಮಾತನಾಡಲು ಕಷ್ಟಪಡುತ್ತಿದ್ದರೆ, ಕ್ರೀಡಾಂಗಣದಲ್ಲಿ 'ಸಚಿನ್ ಸಚಿನ್' ಘೋಷಣೆ ಮುಗಿಲು ಮುಟ್ಟುತ್ತಿತ್ತು. ಅವರು ವಿದಾಯದ ಮಾತುಗಳನ್ನಾಡುತ್ತಿದ್ದರೆ ಹಿರಿಯ ಕ್ರೀಡಾಪಟುಗಳಿಂದ ಹಿಡಿದು ಅಭಿಮಾನಿಗಳ ಕಣ್ಣಂಚಿನಲ್ಲಿ ನೀರು ಒಸರುತ್ತಿತ್ತು.

ನಿವೃತ್ತಿ ಮೊದಲೇ ನಿರ್ಧಾರವಾಗಿದ್ದರಿಂದ ಸಾಕಷ್ಟು ತಯಾರಿ ನಡೆಸಿಯೇ ಬಂದಿದ್ದ ಸಚಿನ್, ತಾವು 11ನೇ ವರ್ಷದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದಂದಿನಿಂದ ಇಂದಿನವರೆಗೆ, ತಂದೆಯಿಂದ ಹಿಡಿದು ಪ್ರೇಕ್ಷಕರವರೆಗೆ, ತಮ್ಮ ಯಶಸ್ಸಿನಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿಕೊಂಡರು. ಭಾವುಕತೆ, ಹಾಸ್ಯ ತುಂಬಿದ ಮಾತುಗಳು ಕೇಳುಗರ ಕೊರಳುಬ್ಬಿಸುವುದರ ಜೊತೆಗೆ ನಗೆಅಲೆಯನ್ನೂ ಎಬ್ಬಿಸಿತು. ಅವರ ವಿದಾಯದ ನುಡಿಗಳು ಮುಂದಿನಂತಿವೆ.

ಪ್ರೋತ್ಸಾಹ ನೀಡಿದ ತಂದೆಯ ನೆನಕೆ

ನನ್ನ ತಂದೆ 1999ರಲ್ಲಿ ಕಣ್ಮರೆಯಾದಂದಿನಿಂದ ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ವೃತ್ತಿಜೀವನಕ್ಕೆ ಆಸರೆಯಾಗಿ ನಿಂತು ಪ್ರೋತ್ಸಾಹಿಸಿದವರೇ ಅವರು. ಅವರು ಕ್ರಿಕೆಟ್ ಆಡಲು ಸ್ವಾತಂತ್ರ್ಯ ನೀಡಿದರು, ಕನಸು ಬೆನ್ನತ್ತಲು ಪ್ರೋತ್ಸಾಹ ನೀಡಿದರು. ಯಶಸ್ಸಿಗೆ ಶಾರ್ಟ್ ಕಟ್ ಎನ್ನುವುದಿಲ್ಲ ಎಂದು ಕಲಿಸಿದ್ದೇ ಅವರು. ಪ್ರತಿಬಾರಿ ನನ್ನ ಬ್ಯಾಟ್ ಮೇಲೆತ್ತಿದಾಗ ಅದು ಅವರಿಗೇ ಸಮರ್ಪಣೆಯಾಗಿರುತ್ತದೆ.

ತಾಯಿಯ ಬಗ್ಗೆ ಸಚಿನ್ ಮಾತುಗಳು

ನನ್ನಂಥ ತುಂಟ ಹುಡುಗನನ್ನು ಅಮ್ಮ ಹೇಗೆ ಸಹಿಸಿಕೊಳ್ಳುತ್ತಿದ್ದಳೋ? ಆಕೆ ಅಪಾರ ಸಹನಾಶೀಲೆ. ನಾನು ಆರೋಗ್ಯದಿಂದಿರಬೇಕೆಂದು ಪ್ರತಿದಿನವೂ ದೇವರಲ್ಲಿ ಬೇಡಿಕೊಳ್ಳುತ್ತಿದ್ದಳು. ನನ್ನ ಪ್ರತಿಯೊಂದು ಅಗತ್ಯಗಳ ಬಗ್ಗೆಯೂ ಕಾಳಜಿ ತೆಗೆದುಕೊಳ್ಳುತ್ತಿದ್ದಳು. ಆಕೆಯ ಕಾಳಜಿ ಮತ್ತು ಆಕೆ ನನಗಾಗಿ ಮಾಡುತ್ತಿದ್ದ ಪ್ರಾರ್ಥನೆಗಳೇ ನನ್ನಲ್ಲಿ ಶಕ್ತಿ ತುಂಬುತ್ತಿತ್ತು.

ಸಹೋದರರು ಮತ್ತು ಸಹೋದರಿ

ನನ್ನ ಹಿರಿಯ ಅಣ್ಣ ನಿತಿನ್ ಹೇಗೆ ಪ್ರತಿಯೊಂದು ಸರಿಯಾಗಿ ಮಾಡುತ್ತಿರಬೇಕೆಂದು ಹೇಳುತ್ತಿದ್ದ, ಹಾಗೆಯೆ ನನ್ನಲ್ಲಿ ಅಪಾರ ವಿಶ್ವಾಸವಿರುವ ಬಗ್ಗೆ ಹೇಳುತ್ತಿದ್ದ. ನನಗೆ ಮೊದಲ ಬ್ಯಾಟ್ ಕೊಟ್ಟಿದ್ದೇ ನನ್ನ ಸಹೋದರಿ. ಅದು ಕಾಶ್ಮೀರಿ ವಿಲ್ಲೋ ಬ್ಯಾಟ್. ನಾನು ಪ್ರತಿಬಾರಿ ಬ್ಯಾಟ್ ಹಿಡಿದಾಗಲೂ ಆಕೆ ನನಗಾಗಿ ಉಪವಾಸ ಮಾಡುತ್ತಿದ್ದಳು.

ಬೆನ್ನೆಲುಬಾಗಿ ನಿಂತ ಸಹೋದರ ಅಜಿತ್

ಆತನ ಬಗ್ಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ನನ್ನ ಕ್ರಿಕೆಟ್ ಕನಸನ್ನು ನಾವಿಬ್ಬರೂ ಜೊತೆಯಾಗಿಯೇ ಕಂಡಿದ್ದೇವೆ. ನಾನು 11 ವರ್ಷದವನಿದ್ದಾಗ ಕೋಚ್ ಅಚ್ರೇಕರ್ ಬಳಿ ಕರೆದುಕೊಂಡು ಹೋಗಿ ನನ್ನ ಕ್ರಿಕೆಟ್ ಬದುಕಿಗೆ ನಾಂದಿ ಹಾಡಿದ್ದೇ ಅಜಿತ್. ಆವಾಗಿನಿಂದ ನನ್ನ ಬದುಕಿನ ದಿಕ್ಕೇ ಬದಲಾಗಿಹೋಯಿತು. ಆತನೊಂದಿಗೆ, ನನ್ನ ಟೆಕ್ನಿಕ್ ಬಗ್ಗೆ, ನಾನು ಔಟಾದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೆ. ಆತನ ಸಹಕಾರವಿಲ್ಲದಿದ್ದರೆ ಇಷ್ಟೊಂದು ಖ್ಯಾತಿ ಖಂಡಿತ ದೊರೆಯುತ್ತಿರಲಿಲ್ಲ.

ಡಾ. ಅಂಜಲಿ ಅತ್ಯುತ್ತಮ ಪಾರ್ಟನರ್ಶಿಪ್

ನನ್ನ ಜೀವನದಲ್ಲಿ ಅತಿ ಮುಖ್ಯವಾದ ಘಳಿಗೆ 1991ರಲ್ಲಿ ನನ್ನ ಹೆಂಡತಿ ಅಂಜಲಿಯನ್ನು ಭೇಟಿಯಾಗಿದ್ದು. ಆಕೆ ವೈದ್ಯೆಯಾಗಿದ್ದರೂ ಅದನ್ನು ಬದಿಗೊತ್ತಿ ಕುಟುಂಬಕ್ಕೆ ಪ್ರಾಧಾನ್ಯತೆ ನೀಡಿದಳು. ನೀನು ಕ್ರಿಕೆಟ್ ಆಡು ನಾನು ಫ್ಯಾಮಿಲಿ ಸಂಭಾಳಿಸುತ್ತೇನೆ ಅನ್ನುತ್ತಿದ್ದಳು. ಆಕೆಯ ಸಹಕಾರವಿಲ್ಲದಿದ್ದರೆ ಇಷ್ಟು ಸುದೀರ್ಘ ವರ್ಷ ನಾನು ಕ್ರಿಕೆಟ್ ಆಡುವುದು ಸಾಧ್ಯವಾಗುತ್ತಿರಲಿಲ್ಲ. ಆಕೆಗೊಂದು ದೊಡ್ಡ ಥ್ಯಾಂಕ್ಸ್. ನನ್ನ ಜೀವನದ ಅತ್ಯುತ್ತಮ ಜೊತೆಯಾಟ ಆಡಿದ್ದು ಆಕೆಯ ಜೊತೆನೆ.

ಮಾಣಿಕ್ಯದಂತಹ ಇಬ್ಬರು ಮಕ್ಕಳು

ಹದಿನಾರು ವರ್ಷದ ಮಗಳು ಸಾರಾ ಮತ್ತು ಹದಿನಾಲ್ಕು ವರ್ಷದ ಅರ್ಜುನ್ ನನ್ನ ಇಬ್ಬರು ಡೈಮಂಡ್ಸ್. ಅವರ ಹುಟ್ಟುಹಬ್ಬ, ಮದುವೆ ಮತ್ತು ಶಾಲೆ ವಾರ್ಷಿಕೋತ್ಸವ ಸಮಯದಲ್ಲಿ ಅವರೊಂದಿಗೆ ಇರಲಾಗುತ್ತಿರಲಿಲ್ಲ. ಆದರೆ ಅವರಿಬ್ಬರು ನನ್ನನ್ನು ಸಾಕಷ್ಟು ಅರ್ಥಮಾಡಿಕೊಂಡಿದ್ದರು. ಅವರು ಕಳೆದ ಹದಿನಾರು ವರ್ಷ ನನ್ನನ್ನು ಮಿಸ್ ಮಾಡಿಕೊಂಡಿದ್ದಾರೆ. ಆದರೆ, ಮುಂದಿನ ಹದಿನಾರು ವರ್ಷ ಮತ್ತೆ ಅದಕ್ಕಿಂತಲೂ ಹೆಚ್ಚು ವರ್ಷ ಅವರಿಗಾಗಿ ಮೀಸಲಿಡುತ್ತೇನೆ.

ಸ್ನೇಹಿತರ ಬಗ್ಗೆ ಅಭಿಮಾನದ ಮಾತು

ಶಾಲಾ ದಿನಗಳಲ್ಲಿ ಹಲವಾರು ಸ್ನೇಹಿತರು ನನ್ನನ್ನು ಬೆಂಬಲಿಸಿದ್ದಾರೆ. ಗಾಯದಿಂದ ಕ್ರಿಕೆಟ್ ಆಡುವುದಕ್ಕೇ ಆಗುವುದಿಲ್ಲ ಅನ್ನುವಂತಹ ಸ್ಥಿತಿಯಲ್ಲಿ, ಬೆಳಗಿನ ಜಾವ 3 ಗಂಟೆಗೆ ಎಬ್ಬಿಸಿ, ನಿನ್ನ ಕ್ರಿಕೆಟ್ ಇನ್ನೂ ಮುಗಿದಿಲ್ಲ ಎಂದು ನನಗೆ ಸ್ಥೈರ್ಯ ತುಂಬಿದವರು ನನ್ನ ಬಾಲ್ಯ ಸ್ನೇಹಿತರು. ಅವರನ್ನು ಖಂಡಿತ ನೆನೆಯಬೇಕು. ಕ್ರಿಕೆಟ್ ಆಡುವಾಗ ಅಥವಾ ಪ್ರವಾಸ ಹೋಗುವಾಗ ಕೂಡ ಅವರು ನನ್ನ ಜೊತೆಗಿರುತ್ತಿದ್ದರು.

ರಮಾಕಾಂತ್ ಅಚ್ರೇಕರ್

ಹನ್ನೊಂದು ವರ್ಷದವನಿದ್ದಾಗ ಅಚ್ರೇಕರ್ ಸರ್ ಜೊತೆ ಅವರ ಸ್ಕೂಟರ್ ಮೇಲೆ ಪ್ರಾಕ್ಟೀಸಿಗೆ ಹೋಗುತ್ತಿದ್ದೆ. ಇಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಿದರೂ ಯಾವತ್ತೂ ಅವರು ಚೆನ್ನಾಗಿ ಆಡಿದ್ದೀ ಎಂದು ಬೆನ್ನು ತಟ್ಟಲಿಲ್ಲ. ಹಾಗೆ ಹೇಳಿದರೆ ನಾನು ಎಲ್ಲಿ ಅಷ್ಟಕ್ಕೇ ಸಂತೃಪ್ತನಾಗಿ ಅಭ್ಯಾಸ ಕಡಿಮೆ ಮಾಡುತ್ತೇನೋ ಎಂಬ ಆತಂಕ ಅವರಿಗಿತ್ತು. ಆದರೆ ನನ್ನ ಕ್ರಿಕೆಟ್ ಆಟ ಈಗ ಮುಗಿದಿದೆ. ಈಗಲಾದರೂ ಅವರು ಚೆನ್ನಾಗಿ ಆಡಿದ್ದಿ ಎಂದು ಹೇಳುತ್ತಾರೆ ಅಂದುಕೊಳ್ಳುತ್ತೇನೆ.

ಬಿಸಿಸಿಐಗೆ ಧನ್ಯವಾದ

ನನ್ನ ಕ್ರಿಕೆಟ್ ಪಯಣ ಆರಂಭವಾಗಿದ್ದೇ ವಾಂಖೆಡೆ ಕ್ರಿಡಾಂಗಣದಿಂದ. ನನ್ನ ಕನಸು ಭಾರತದ ಪರ ಆಡುವುದಾಗಿತ್ತು. ನನ್ನ ಪ್ರತಿಭೆಯಲ್ಲಿ ನಂಬಿಕೆಯಿಟ್ಟು ನನಗೆ 16 ವರ್ಷ ಇದ್ದಾಗಲೇ ನನ್ನನ್ನು ಆಯ್ಕೆ ಮಾಡಿದರು. ನನಗೆ ಸ್ವಾತಂತ್ರ್ಯ ಕೊಡದಿದ್ದರೆ ಇಷ್ಟು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಹಲವಾರು ಹಿರಿಯ ಕ್ರಿಕೆಟ್ ಆಟಗಾರರ ಜೊತೆ ಆಡಲು ಸಾಧ್ಯವಾಗಿಲ್ಲ. ನನ್ನ ಜೊತೆ ಆಡಿದ ರಾಹುಲ್, ಲಕ್ಷ್ಮಣ್, ಸೌರವ್ ಮತ್ತು ಇಲ್ಲಿ ಮುಂದೆ ನಿಂತಿರುವ ಎಲ್ಲ ಆಟಗಾರರು ನನ್ನ ಕುಟುಂಬದವರಿದ್ದಂತೆ. ಡ್ರೆಸ್ಸಿಂಗ್ ರೂಂನಲ್ಲಿ ಕಳೆದ ಆ ವಿಶೇಷ ಕ್ಷಣಗಳನ್ನು ಮರೆಯುವುದು ಸಾಧ್ಯವೇ ಇಲ್ಲ.

200ನೇ ಟೆಸ್ಟ್ ಕ್ಯಾಪ್ ಕೊಟ್ಟ ಧೋನಿ

200ನೇ ಟೆಸ್ಟ್ ಆಡುವ ಮೊದಲು ಧೋನಿ ವಿಶೇಷ ಕ್ಯಾಪ್ ಕೊಟ್ಟ ನಂತರ ಆಟಗಾರರನ್ನುದ್ದೇಶಿಸಿ, ನಿಮ್ಮ ಜೊತೆಗೆ ಆಡುತ್ತಿರುವುದು ನನ್ನ ಭಾಗ್ಯ ಎಂದು ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತೇನೆ. ಮುಂದೆಯೂ ಕೂಡ ಅವರು ಒಂದು ತಂಡವಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿ ಭಾರತದ ಘನತೆಯನ್ನು ಎತ್ತಿಹಿಡಿಯುತ್ತಾರೆ ಎಂದು ನಂಬಿದ್ದೇನೆ. ನಿಮಗೆಲ್ಲ ಶುಭವಾಗಲಿ.

ವೈದ್ಯರು, ಮ್ಯಾನೇಜರ್, ಪೋಟೋಗ್ರಫರ್

ನನ್ನ ಕಠಿಣ ದೇಹವನ್ನು ಆಡುವ ಹಾಗೆ ಮಾಡಿದ ಎಲ್ಲ ವೈದ್ಯರು, ಫಿಜಿಯೋಗಳಿಗೆ ನನ್ನ ಧನ್ಯವಾದಗಳು. ಇಷ್ಟೊಂದು ಫಿಟ್ ಆಗಿರಲು ಅವರೇ ಕಾರಣ. ನನ್ನ ಮೊದಲ ಮ್ಯಾನೇಜರ್ ದಿ. ಮಾರ್ಕ್ ಮಾಸ್ಕರನ್ಹಾಸ್ ಅವರ ಬೆಂಬಲವಿಲ್ಲದಿದ್ದರೆ ನಾನಷ್ಟು ಖ್ಯಾತಿ ಗಳಿಸುತ್ತಿರಲಿಲ್ಲ. ಹಾಗೆಯೆ ನನ್ನ ಈಗಿನ ಮ್ಯಾನೇಜರ್ ವಿನೋದ್ ನಾಯ್ಡು ತಮ್ಮೆಲ್ಲ ವೈಯಕ್ತಿಕ ಜೀವನವನ್ನು ತ್ಯಜಿಸಿ ನನಗಾಗಿ ದುಡಿದಿದ್ದಾರೆ. ಹಾಗೆಯೆ, ನನ್ನ ಬ್ಯಾಟಿಂಗ್ ನ ಅತ್ಯುತ್ತಮ ಕ್ಷಣಗಳನ್ನು ಸೆರೆಹಿಡಿದ ಫೋಟೋಗ್ರಫರುಗಳಿಗೆ ಧನ್ಯವಾದ. ಅವರ ತೆಗೆದ ಚಿತ್ರಗಳು ನನ್ನ ಕೊನೆಯ ಕ್ಷಣದವರೆಗೂ ನನ್ನ ಜೊತೆಗಿರುತ್ತವೆ.

ಸಚಿನ್ ಸಚಿನ್ ಘೋಷಣೆಯ ಪ್ರತಿಧ್ವನಿ

ಕೊನೆಯದಾಗಿ, ಆ 'ಸಚಿನ್... ಸಚಿನ್...' ಘೋಷಣೆ ಇನ್ನೂ ಹಲವಾರು ದಿನಗಳ ಕಾಲ ನನ್ನ ಕಿವಿಯಲ್ಲಿ ಗುಂಗಿಡುತ್ತಿರುತ್ತದೆ. ಥ್ಯಾಂಕ್ಯೂ ವೆರಿ ಮಚ್. ನಾನು ಯಾರ ಹೆಸರು ಹೇಳುವುದು ಮರೆತಿದ್ದರೆ ದಯವಿಟ್ಟು ಕ್ಷಮಿಸಿ. ಗುಡ್ ಬೈ.

Story first published:  Saturday, November 16, 2013, 15:44 [IST]
English summary
Emotional Sachin Tendulkar made a memorable farewell speech at the Wankhede Stadium soon after bowing out of international cricket with a victory against the West Indies on Saturday. He remembered every one from his father to the audience.
ಅಭಿಪ್ರಾಯ ಬರೆಯಿರಿ