Englishहिन्दीമലയാളംதமிழ்తెలుగు

ರೋಹಿತ್ ಶರ್ಮಾ ದ್ವಿಶತಕ: ಭಾರತಕ್ಕೆ ಸರಣಿ

Posted by:
Updated: Saturday, November 2, 2013, 22:20 [IST]
 

ಬೆಂಗಳೂರು, ನ 2: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಪಟಾಕಿಯ ಅಬ್ಬರ, ಇನ್ನೊಂದೆಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಮತ್ತು ಫಾಕ್ನರ್ ಬ್ಯಾಟಿಂಗ್ ಅಬ್ಬರ. ಸರಣಿಯ ಕೊನೆಯ ಪಂದ್ಯದಲ್ಲಿಂದು (ನ 2) ಭಾರತ, ಆಸ್ಟ್ರೇಲಿಯಾ ತಂಡವನ್ನು 57 ರನ್ ಗಳಿಂದ ಸೋಲಿಸಿ 3-2 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ಸ್ಟಾರ್ ಸ್ಪೋರ್ಟ್ಸ್ ಏಕದಿನ ಕ್ರಿಕೆಟ್ ಸರಣಿಯ ನಿರ್ಣಾಯಕ ಏಳನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿಂದು ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಮೋಘ ದ್ವಿಶತಕ (209) ಸಿಡಿಸುವ ಮೂಲಕ ಭಾರತದ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಶಿಖರ್ ಧವನ್ (60) ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭಿಕ ಜೊತೆಯಾಟ (112) ನೀಡಿದರು. ತದನಂತರ ಸರಣಿಯಲ್ಲಿ ಪ್ರಚಂಡ ಫಾರಂನಲ್ಲಿರುವ ವಿರಾಟ್ ಕೊಹ್ಲಿ ಯಾವುದೇ ರನ್ ಗಳಿಸದೆ ರನೌಟ್ ಆಗಿ ನಿರಾಶೆ ಮೂಡಿಸಿದರು.

ರೋಹಿತ್ ಶರ್ಮಾ ದ್ವಿಶತಕ: ಭಾರತಕ್ಕೆ ಸರಣಿ

ಸುರೇಶ್ ರೈನಾ (28) ಮತ್ತು ಯುವರಾಜ್ ಸಿಂಗ್ (12) ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲದೇ ಬೇಗನೇ ಪೆವಲಿಯನ್ ಸೇರಿದರು. ತದನಂತರ ರೋಹಿತ್ ಶರ್ಮಾ ಜೊತೆಗೂಡಿದ ನಾಯಕ ಧೋನಿ 38 ಎಸೆತದಲ್ಲಿ 62 ರನ್ ಬಾರಿಸಿ ಅಜೇಯರಾಗಿ ಉಳಿದರು.

ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಇತಿಹಾಸದ ಎರಡನೇ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿ ( 209 ರನ್, 158 ಎಸೆತ, 12 ಬೌಂಡರಿ, 16 ಸಿಕ್ಸ್) ತಂಡದ ಮೊತ್ತವನ್ನು 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 383 ಪೇರಿಸುವಲ್ಲಿ ಕಾರಣರಾದರು.

ಭಾರತದ ಭಾರೀ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಿರುಗೇಟು ನೀಡುವಲ್ಲಿ ಸಫಲವಾದರೂ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಸರಣಿಯಲ್ಲಿ ಮತ್ತೊಮ್ಮೆ ಭಾರತದ ಬೌಲರ್ ಗಳನ್ನು ಕಾಡಿದ ಫಾಕ್ನರ್ ಬಿರುಸಿನ ಬ್ಯಾಟಿಂಗ್ ನಡೆಸಿ 116 ರನ್ ಗಳಿಸಿ ಔಟಾದರು. ಹಡಿನ್ (40), ಮ್ಯಾಕ್ಸ್ ವೆಲ್ (60), ವ್ಯಾಟ್ಸನ್ (49) ರನ್ ಬಾರಿಸಿ ಪ್ರತಿರೋಧ ತೋರುವಲ್ಲಿ ಯಶಸ್ವಿಯಾದರು. 45.1 ಓವರ್ ನಲ್ಲಿ 326 ರನ್ ಗಳಿಸಿ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಭಾರತದ ಪರ ಜಡೇಜಾ ನಾಲ್ಕು ವಿಕೆಟ್ ಪಡೆದರೆ, ಶಮಿ ಮತ್ತು ಅಶ್ವಿನ್ ತಲಾ ವಿಕೆಟ್ ಪಡೆದರು. ಲೋಕಲ್ ಬಾಯ್ (9 ಓವರ್ ನಲ್ಲಿ 102 ರನ್) ವಿನಯ್ ಕುಮಾರ್ ದುಬಾರಿ ರನ್ ತೆತ್ತು ಒಂದು ವಿಕೆಟ್ ಪಡೆದರು. ಮತ್ತೊಂದು ಬ್ಯಾಟಿಂಗ್ ಮೇಲಾಟದ ಈ ಪಂದ್ಯದಲ್ಲಿ ಒಟ್ಟು 709 ರನ್ ಗಳು ದಾಖಲಾದವು.

ಏಕದಿನ ಕ್ರಿಕೆಟ್ ನಲ್ಲಿ ಇದುವರೆಗೆ ಮೂರು ದ್ವಿಶತಕಗಳು ದಾಖಲಾಗಿವೆ. ಮೂರೂ ದ್ವಿಶತಕ ಬಾರಿಸಿರುವವರು ಭಾರತದವರೇ. ವಿರೇಂದ್ರ ಸೆಹವಾಗ್ (219), ಸಚಿನ್ ತೆಂಡೂಲ್ಕರ್ (200) ಮತ್ತು ಈಗ ರೋಹಿತ್ ಶರ್ಮಾ (209). ಏಕದಿನ ಪಂದ್ಯದಲ್ಲಿ 16 ಸಿಕ್ಸ್ ಸಿಡಿಸುವ ಮೂಲಕ ರೋಹಿತ್ ಶರ್ಮಾ ನೂತನ ದಾಖಲೆ ನಿರ್ಮಿಸಿದರು.

ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ
ಸರಣಿ ಶ್ರೇಷ್ಠ : ರೋಹಿತ್ ಶರ್ಮಾ

Story first published:  Saturday, November 2, 2013, 21:46 [IST]
English summary
India won the Star Sports cricket series against Australia by 3-2. In the seventh and the series decider match in Chinnaswamy Stadium Bangalore, India beat Australia by 57 runs. Opener Rohit Sharma scored double century is the highlight of the match.
ಅಭಿಪ್ರಾಯ ಬರೆಯಿರಿ