Englishहिन्दीമലയാളംதமிழ்తెలుగు

ಇಷ್ಟಕ್ಕೂ ಧೋನಿ ಮನೆಗೆ ಕಲ್ಲು ಹೊಡೆದಿದ್ದು ಯಾರು?

Posted by:
Published: Friday, October 25, 2013, 13:06 [IST]
 

ಇಷ್ಟಕ್ಕೂ ಧೋನಿ ಮನೆಗೆ ಕಲ್ಲು ಹೊಡೆದಿದ್ದು ಯಾರು?
 

ರಾಂಚಿ,ಅ.25: ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮನೆಗೆ ಕೆಲ ದುಷ್ಕರ್ಮಿಗಳು ಕಲ್ಲು ಹೊಡೆದ ಪ್ರಕರಣವನ್ನು ಜಾರ್ಖಂಡ್ ರಾಜ್ಯ ಕ್ರಿಕೆಟ್ ಆಸೋಸಿಯೇಷನ್(ಜೆಎಸ್ ಸಿಎ) ಗಂಭೀರವಾಗಿ ಪರಿಗಣಿಸಿದೆ. ಈ ದುಷ್ಕೃತ್ಯ ಎಸಗಿದವರು ಎಂಬುದನ್ನು ಕಂಡು ಹಿಡಿಯುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದೆ.

'ಇದು ರಾಜ್ಯಕ್ಕೆ ಆದ ಅಪಮಾನ. ರಾಜ್ಯದ ಕ್ರಿಕೆಟ್ ಪಟು ದೇಶದ ತಂಡದ ನಾಯಕರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಆದರೆ, ನಮ್ಮವರ ಮೇಲೆ ನಾವೇ ಹಲ್ಲೆ ನಡೆಸುವುದು ಕಲ್ಲು ತೂರುವುದು ಸಹಿಸಲು ಸಾಧ್ಯವಿಲ್ಲ. ಈ ರೀತಿ ಕೃತ್ಯ ಎಸಗಿದವರು ಅಭಿಮಾನಿಗಳಂತೂ ಅಲ್ಲ. ಜಾರ್ಖಂಡ್ ಕ್ರೀಡಾಭಿಮಾನಿಗಳು ಧೋನಿ ಪರ ಎಂದಿಗೂ ಇದ್ದಾರೆ' ಎಂದು ಜೆಎಸ್ ಸಿಎ ಅಧ್ಯಕ್ಷ ಅಮಿತಾಬ್ ಚೌಧುರಿ ಹೇಳಿದ್ದಾರೆ.

ಬುಧವಾರ ರಾಂಚಿಯಲ್ಲಿ ಮಳೆಯಿಂದಾಗಿ ರದ್ದುಗೊಂಡ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಮೊದಲಿಗೆ ಫೀಲ್ಡಿಂಗ್ ಆಯ್ದು ಮಾಡಿಕೊಂಡಿದ್ದರು. ಈ ನಿರ್ಧಾರಕ್ಕೆ ತವರಿನ ಪ್ರೇಕ್ಷಕರು ಆಕ್ರೋಶಗೊಂಡಿದ್ದರು.

ಬುಧವಾರ ರಾತ್ರಿ ಮಳೆಯಿಂದಾಗಿ ನಾಲ್ಕನೆ ಏಕದಿನ ಪಂದ್ಯ ರದ್ದುಗೊಂಡ ಕಾರಣ ಅಪರಿಚಿತರು ಹರ್ಮು ಹೌಸಿಂಗ್ ಕಾಲೊನಿಯಲ್ಲಿರುವ ಧೋನಿಯ ನಿವಾಸದ ಮೇಲೆ ಕಲ್ಲು ತೂರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲ್ಲೆಸೆತಕ್ಕೆ ಮನೆಯ ಕಿಟಕಿ ಗಾಜು (1.5 ಅಡಿ ‍X 2 ಅಡಿ) ಗಳು ಪುಡಿಯಾಗಿದ್ದವು.

ಧೋನಿಯ ಕುಟುಂಬ ಸದಸ್ಯರು ಜಾರ್ಖಂಡ್ ನ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂಗೆ ಪಂದ್ಯ ವೀಕ್ಷಿಸಲು ತೆರಳಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಈ ಘಟನೆ ಬಗ್ಗೆ ಧೋನಿ ಆಗಲಿ ಅವರ ಮನೆಯವರಾಗಲಿ ಯಾವುದೆ ದೂರು ನೀಡಿಲ್ಲ. ಜೆಎಸ್ ಸಿಎ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದೆ ಎಂದು ರಾಂಚಿ ಹಿರಿಯ ಪೊಲೀಸ್ ಅಧಿಕಾರಿ ಸಾಕೇತ್ ಕುಮಾರ್ ಸಿಂಗ್ ಹೇಳಿದ್ದಾರೆ.

ನಾವು ಧೋನಿ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗನ್ನು ನೋಡಲು ಬಂದಿದ್ದೆವು. ಆದರೆ, ಮಳೆಯಿಂದಾಗಿ ಈ ಇಬ್ಬರು ಬ್ಯಾಟಿಂಗ್ ಮಾಡಿರಲಿಲ್ಲ. ಇದರಿಂದ ನಮಗೆ ತೀರಾ ನಿರಾಸೆಯಾಗಿತ್ತು ಎಂದು ರೋನಿತ್ ಎನ್ನುವ ಅಭಿಮಾನಿ ಹೇಳಿಕೆ ನೀಡಿದ್ದಾರೆ.

ನಾವು ಧೋನಿ, ಕೊಹ್ಲಿ, ಶಿಖರ್ ಧವನ್ ಬ್ಯಾಟಿಂಗನ್ನು ಕಣ್ಣಾರೆ ನೋಡಲು ಹಣವನ್ನು ವ್ಯಯಿಸಿದ್ದೆವು. ಆದರೆ, ಮಳೆಯಿಂದಾಗಿ ನಮ್ಮ ಹಣವೂ ಹೋಯ್ತು, ಕುತೂಹಲಕಾರಿಯಾಗಿದ್ದ ಪಂದ್ಯವನ್ನು ನೋಡಲು ಸಾಧ್ಯವಾಗಲಿಲ್ಲ. ರಾಂಚಿಯಲ್ಲಿ ಮತ್ತೊಮ್ಮೆ ಯಾವಾಗ ಪಂದ್ಯ ನಡೆಯುತ್ತದೆ ಎಂದು ಗೊತ್ತಿಲ್ಲ' ಎಂದು ಅಮೃತ್ ‌ರಾಜ್ ಎಂಬ ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ.

2007ರ ಏಕದಿನ ವಿಶ್ವಕಪ್ ನಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಬೇಗನೆ ಹೊರ ಬಿದ್ದಾಗ ಆಕ್ರೋಶಿತ ಕ್ರಿಕೆಟ್ ಅಭಿಮಾನಿಗಳು ನಿರ್ಮಾಣ ಹಂತದಲ್ಲಿದ್ದ ಧೋನಿಯ ಮನೆಯ ಮೇಲೆ ದಾಳಿ ನಡೆಸಿ ಗೋಡೆಯನ್ನು ಕೆಡವಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)

English summary
A day after police ordered investigation into the breaking of a window pane of India captain MS Dhoni's house here, the Jharkhand State Cricket Association (JSCA) has demanded to know who was behind the 'dirty' work.
ಅಭಿಪ್ರಾಯ ಬರೆಯಿರಿ