Englishहिन्दीമലയാളംதமிழ்తెలుగు

ದೈತ್ಯ ವಿಂಡೀಸ್ ಮಣಿಸಿದ ಕಪಿಲ್ ಡೆವಿಲ್ಸ್ ಗೆ ಮೂವತ್ತು

Posted by:
Updated: Friday, October 4, 2013, 11:51 [IST]
 

ನವದೆಹಲಿ, ಜೂ.25: ಇಂಗ್ಲೆಂಡಿನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ತಂಡದ ಖುಷಿಗೆ ಇಂದು 30ನೇ ವರ್ಷದ ಸಂಭ್ರಮ.

1983 ಜೂನ್ 25ರಂದು ವಿಶ್ವ ಕ್ರಿಕೆಟ್ ನಲ್ಲಿ ಅಂಬೆಗಾಲಿಡುತ್ತಿದ್ದ ಭಾರತ ಯಾರೂ ನಿರೀಕ್ಷಿಸದ ಸಾಧನೆಯನ್ನು ಮಾಡಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತ್ತು. ಕ್ರಿಕೆಟ್ ನ ದೈತ್ಯಗಳ ಮುಂದೆ ಕುಬ್ಜರೆನಿಸಿಕೊಂಡಿದ್ದ ಭಾರತ ವಿಶ್ವ ಚಾಂಪಿಯನ್ ಆಗಿದ್ದರ ಹಿಂದೆ ಸಾಕಷ್ಟು ಪರಿಶ್ರಮವಿತ್ತು.

ಕ್ರಿಕೆಟ್ ನ ಕಾಶಿ ಎಂದೇ ಕರೆಸಿಕೊಂಡಿರುವ ಲಂಡನ್ನಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಅಂದು ಚಾಂಪಿಯನ್ ಆಗಲಿದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ, ಭಾರತಕ್ಕೆ ಎದುರಾಳಿಯಾಗಿ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡ ಕ್ಲೈವ್ ಲಾಯ್ಡ್ ನಾಯಕತ್ವದ ವಿಂಡೀಸ್ ಎದುರು ಭಾರತ ಮಂಡಿಯೂರಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

ಆದರೆ, ಟಾಸ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಹಿಂದೆ ಮುಂದೆ ಯೋಚಿಸದೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಿಗದಿತ 50 ಓವರ್ ಗಳಲ್ಲಿ ಭಾರತ 183 ರನ್ ಗಳಿಸಲಷ್ಟೆ ಶಕ್ತವಾಯಿತು. ಸ್ಕೋರ್ ಕಾರ್ಡ್ ನೋಡಿ

ಕಪಿಲ್ ದೇವ್, ಮೋಹಿಂದರ್ ಅಮರ್ ನಾಥ್, ಮದನ್ ಲಾಲ್, ರವಿಶಾಸ್ತ್ರಿ, ಶ್ರೀಕಾಂತ್, ಕೀರ್ತಿ ಆಜಾದ್, ಸೈಯದ್ ಕಿರ್ಮಾನಿ ತಂಡ 183 ರನ್ ಗಳಿಸಲು ಸಾಧ್ಯವಾಯಿತು. ಇಷ್ಟು ಅಲ್ಪಮೊತ್ತವನ್ನು ವಿಂಡೀಸ್ ಕೆಲವೇ ಓವರ್ ಗಳಲ್ಲಿ ಹೊಡೆದು ಹಾಕಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಹಾಕಿದ್ದರು. ಆದರೆ, ಆಗಿದ್ದೇ ಬೇರೆ...

ಮಂಡಿಯೂರಿದ ದೈತ್ಯ ಬ್ಯಾಟ್ಸ್ ಮನ್

ವಿಂಡೀಸ್ ತಂಡದಲ್ಲಿ ದೈತ್ಯ ಬ್ಯಾಟ್ಸ್ ಮನ್ ಗಳಿದ್ದರು. ಕ್ಲೈವ್ ಲಾಯ್ಡ್, ಡೆಸ್ಮಂಡ್ ಹೇನ್ಸ್, ವಿವಿಎನ್ ರಿಚರ್ಡ್ಸ್ ಸೇರಿದಂತೆ ಘಟಾನುಘಟಿಗಳಿದ್ದರು.

ಇನ್ನೇನು ವೆಸ್ಟ್ ಇಂಡೀಸ್ ಮೂರನೆ ಬಾರಿಗೆ ವಿಶ್ವಕಪ್ ಕ್ರಿಕೆಟ್ ಗೆದ್ದಿ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಮದನ್ ಲಾಲ್ ಎಂಬ ಮಧ್ಯಮ ವೇಗಿ ತೋರಿದ ಕೈ ಚಳಕ ವಿಂಡೀಸ್ ತಂಡವನ್ನೇ ಬುಡಮೇಲು ಮಾಡಿತು.

ಕಪಿಲ್ ಕ್ಯಾಚ್

ಒಂದು ಹಂತದಲ್ಲಿ 50 ರನ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಇನ್ನೇನು ಗೆದ್ದೇಬಿಟ್ಟಿತು ಎಂದು ಸಂಭ್ರಮಿಸಿದರು. ಇದ್ದಕ್ಕಿದ್ದಂತೆ ಕಪಿಲ್ ದೇವ್ ಓಡಿ ಬಂದು ಮದನ್ ಲಾಲ್ ಕೈಗೆ ಬಾಲ್ ನೀಡಿದರು.

ಭಾರತದ ಬೌಲರ್ ಗಳನ್ನು ಧೂಳೀಪಟ ಮಾಡಲು ನಿಂತಿದ್ದ ದೈತ್ಯ ರಿಚರ್ಡ್ಸ್ ಬಾರಿಸಿದ ಆ ಬಾಲ್ ಅನ್ನು ಕಪಿಲ್ ದೇವ್ ಸುಮಾರು ಅಡಿಗಳಷ್ಟು ಹಿಂದೆ ಬಂದು ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು.

ಭಾರತ ತಂಡಕ್ಕೆ 30 ವರ್ಷದ ಸಂಭ್ರಮ.

ವಿಶ್ವ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿ 43 ರನ್ ಗಳ ಅಂತರದಿಂದ ರೋಚಕ ಗೆಲುವು ಕಂಡಿತು. ಮೊದಲ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 30 ವರ್ಷದ ಸಂಭ್ರಮ.

ಕಪಿಲ್ ಹೇಳಿಕೆ

"ನಮ್ಮಲ್ಲಿ ಯುವ ಆಟಗಾರರೇ ತುಂಬಿದ್ದರು. ನಾವು ಸಂತೋಷಕ್ಕಾಗಿ ಆಡಿದೆವು. ಗೆಲ್ಲುವುದಕ್ಕಿಂತ ಮೈದಾನದಲ್ಲಿ ಮನಪೂರ್ವಕವಾಗಿ ಆಡಿ ಎಂದಷ್ಟೇ ನಾನು ಕರೆ ನೀಡಿದ್ದೆ. ವಿಂಡೀಸ್ ಮೇಲೆ ಮೊದಲ ಪಂದ್ಯ ಗೆದ್ದಿದ್ದ ಹುರುಪು ಎಲ್ಲರಲ್ಲೂ ಇತ್ತು. ಮೊದಲ ನಾಲ್ಕು ವಿಕೆಟ್ ಬಿದ್ದ ಮೇಲೆ ಪಂದ್ಯದಲ್ಲಿ ಸಿರೀಯಸ್ ನೆಸ್ ಬಂದಿತು" ಕಪಿಲ್ ಹೇಳಿದ್ದಾರೆ.

ರವಿಶಾಸ್ತ್ರಿ ಹೇಳಿಕೆ

ನಾನು ಆ ತಂಡದ ಅತ್ಯಂತ ಕಿರಿಯ ಆಟಗಾರನಾಗಿದ್ದೆ. ಜೂ.25, 1983 ನನ್ನ ಜೀವನದ ಅತ್ಯಂತ ಅದ್ಭುತ ದಿನ. ಟೀಂ ಇಂಡಿಯಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ಥಾನ ಸಿಕ್ಕಿತು. ಅಸಾಧ್ಯವಾಗಿದ್ದು ಸಾಧ್ಯವಾದ ದಿನ ಆದಾಗಿತ್ತು. ಮಾಧ್ಯಮ, ಕಾರ್ಪೊರೇಟ್ ಕಂಪನಿಗಳು ನಮ್ಮತ್ತ ಮುಗಿಬಿದ್ದವು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ಸಾಧಕರು

ಕಪಿಲ್ ದೇವ್ (ನಾಯಕ), ಕ್ರಿಸ್ ಶ್ರೀಕಾಂತ್, ಮೊಹಿಂದರ್ ಅಮರನಾಥ್, ಸಂದೀಪ್ ಪಾಟೀಲ್, ಯಶಪಾಲ್ ಶರ್ಮ, ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ(ವಿಕೆಟ್ ಕೀಪರ್), ಬಲ್ವಿಂದರ್ ಸಂಧು, ರವಿ ಶಾಸ್ತ್ರಿ, ಕೀರ್ತಿ ಅಜಾದ್, ದಿಲೀಪ್ ವೆಂಗ್ ಸರ್ಕಾರ್, ಮದನ್ ಲಾಲ್, ಸುನಿಲ್ ವಾಲ್ಸನ್(ಟೂರ್ನಿಯಲ್ಲಿ ಒಂದು ಪಂದ್ಯವಾಡದೆ ಕಪ್ ಎತ್ತಿದ್ದು ವಿಶೇಷ)


Story first published:  Tuesday, June 25, 2013, 16:22 [IST]
English summary
1983 World Cup winning captain Kapil Dev went down memory lane on the 30th year of India's greatest moment in cricket. Kapil said that the World Cup victory gave "new dimension" to Indian cricket.
ಅಭಿಪ್ರಾಯ ಬರೆಯಿರಿ