Englishहिन्दीമലയാളംதமிழ்తెలుగు

ಭಾರತದ ಮುಡಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ

Posted by:
Updated: Monday, June 24, 2013, 1:19 [IST]
 

ಲಂಡನ್, ಜೂ.23: ಭಾರತ ಒಡ್ಡಿದ್ದ 130ರನ್ ಗಳ ಗುರಿಯನ್ನು ಅಳುಕಿನಿಂದಲೇ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಕೊನೆಗೆ ಗುರಿ ಸಮೀಪ ಬಂದಿತ್ತು. ಜಯ ಯಾರಿಗೆ ಬೇಕಾದರೂ ದಕ್ಕಬಹುದು ಎಂಬ ಸ್ಥಿತಿಯಲ್ಲಿ ಸಮಯೋಚಿತ ಆಟ ಪ್ರದರ್ಶಿಸಿದ ಧೋನಿ ಪಡೆ ಜಯಭೇರಿ ಬಾರಿಸಿ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡು ಕುಣಿದಾಡಿತು.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಫೈನಲ್ ತಲುಪಿದ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ. ಅತಿಥೇಯ ಇಂಗ್ಲೆಂಡ್ ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಧೋನಿ ಪಡೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದುಕೊಂಡು ಪಂದ್ಯ ಗೆದ್ದಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾಕ್ಕೆ ಸುಮಾರು 2 ಮಿಲಿಯನ್ ಯುಎಸ್ ಡಾಲರ್ ಸಿಗಲಿದೆ. ನಾಯಕ ಧೋನಿ ಮೂರು ಐಸಿಸಿ ಟೂರ್ನಿ ಗೆಲ್ಲಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ನಾಯಕ ಅಲೆಸ್ಟರ್ ಕುಕ್ ಅವರು ಕೇವಲ 2 ರನ್ ಮಾಡಿ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿದರೆ, ಇಯಾನ್ ಬೆಲ್ 13 ರನ್ ಮಾಡಿ ಜಡೇಜ ಸ್ಪಿನ್ ಮೋಡಿಗ್ ಸಿಲುಕಿದರು. ಜೊನಾಥನ್ ಟ್ರಾಟ್ ಬಿರುಸಿನ ಆಟವಾಡಿ 17 ಎಸೆತದಲ್ಲಿ 20 ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.

ಆದರೆ, ಅಶ್ವಿನ್ ಅವರ ಬೌಲಿಂಗ್ ನಲ್ಲಿ ಟ್ರಾಟ್ ಹಾಗೂ ರೂಟ್ ವಿಕೆಟ್ ಬೀಳುತ್ತಿದ್ದಂತೆ ಇಂಗ್ಲೆಂಡಿಗೆ ಆತಂಕ ಶುರುವಾಯಿತು. ಇಯಾನ್ ಮಾರ್ಗನ್ ತಾಳ್ಮೆಯಾಟ, ರವೀಂದ್ರ ಬೋಪಾರಾ ಸಮಯೋಚಿತ ಆಟ ಇಂಗ್ಲೆಂಡ್ ನೆರವಿಗೆ ಬಂತು..

ಆ ಮೂರು ಓವರ್ ಗಳು : ಕೊನೆ ಮೂರು ಓವರ್ ಗಳಲ್ಲಿ 28 ರನ್ ಗಳಿಸಬೇಕಿತ್ತು. 6 ವಿಕೆಟ್ ಉಳಿಸಿಕೊಂಡಿತ್ತು. ಧೋನಿಗೆ ಯಾದವ್ ಬಿಟ್ಟರೆ ಮಿಕ್ಕವರ ಬಳಿ 1 ಓವರ್ ಮಾತ್ರ ಮಾಡಿಸಬಹುದಾಗಿತ್ತು. ಆದರೆ ಚೆಂಡು ಇಶಾಂತ್ ಶರ್ಮ ಕೈ ಸೇರಿತು.1 ಸಿಕ್ಸ್, ಎರಡು ಅನಗತ್ಯ ವೈಡ್ ಗಳ ನಡುವೆ ಇಯಾನ್ ಮಾರ್ಗನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮುಂದಿನ ಎಸೆತದಲ್ಲಿ ಬೋಪಾರಾ ವಿಕೆಟ್ ಕಳೆದುಕೊಂಡ ಇಂಗ್ಲೆಂಡಿಗೆ 14 ಎಸೆತದಲ್ಲಿ 20 ರನ್ ಬೇಕಿತ್ತು. 

ಜಡೇಜ ಅವರು ಜೋ ಬಟ್ಲರ್ ವಿಕೆಟ್ ಉದುರಿಸುತ್ತಿದ್ದಂತೆ ಬ್ರೆಸ್ನನ್ ರನ್ ಕದಿಯಲು ಯತ್ನಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.ಕೊನೆ ಓವರ್ ನಲ್ಲಿ 15 ರನ್ ಬೇಕಿತ್ತು ಇಂಗ್ಲೆಂಡ್ ಬಳಿ 2 ವಿಕೆಟ್ ಉಳಿದಿತ್ತು. 
* ಅಶ್ವಿನ್ ಮೊದಲ ಎಸೆತದಲ್ಲಿ ಬ್ರಾಡ್ ಕೂದಲೆಳೆಯಂತರದಿಂದ ಬಚಾವಾದರು.
* ಎರಡನೇ ಎಸೆತದಲ್ಲಿ ಬೌಂಡರಿ.
* ಮೂರನೇ ಎಸೆತದಲ್ಲಿ ಬ್ರಾಡ್ ಸಿಂಗಲ್
* ನಾಲ್ಕನೇ ಎಸೆತದಲ್ಲಿ ಟ್ರೆಡ್ ವೆಲ್ 2 ರನ್
* ಕೊನೆ ಎಸೆತದಲ್ಲಿ ಸಿಕ್ಸ್ ಹೊಡೆಯಲಿಲ್ಲ, ಆಂಗ್ಲರು ಗೆಲ್ಲಲಿಲ್ಲ.
20 ಓವರ್ ಗಳಲ್ಲಿ 8 ವಿಕೆಟ್ ಕಳೆದು ಕೊಂಡು 124 ರನ್ ಮಾತ್ರ ಗಳಿಸಿ ಶರಣಾದರು. ಜಡೇಜ, ಅಶ್ವಿನ್, ಇಶಾಂತ್ ತಲಾ 2 ವಿಕೆಟ್ ಹಾಗೂ ಯಾದವ್ 1 ವಿಕೆಟ್ ಗಳಿಸಿದರು. ಸ್ಕೋರ್ ಕಾರ್ಡ್ ನೋಡಿ


ಭಾರತದ ಇನ್ನಿಂಗ್ಸ್ : ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 129 ರನ್ ಗಳಿಸಿದೆ. ಇಂಗ್ಲೆಂಡಿಗೆ ಕಪ್ ಗೆಲ್ಲಲು 130 ರನ್ ಗಳ ಗುರಿ ನೀಡಲಾಗಿದೆ.
ಆಗಾಗ ಅಡ್ಡಿಪಡಿಸುವ ಮಳೆ ನಡುವೆ ಉತ್ತಮ ಆರಂಭ ಪಡೆದ ಭಾರತಕ್ಕೆ ಸ್ಟುವರ್ಟ್ ಬ್ರಾಡ್ ಮೊದಲ ಆಘಾತ ನೀಡಿದರು. ರೋಹಿತ್ ಶರ್ಮ ಅವರನ್ನು ಬೋಲ್ಡ್ ಮಾಡಿ ಪೆವಿಲಿಯನ್ ಗೆ ಕಳಿಸಿದರು.

ನಂತರ ಇನ್ನಿಂಗ್ಸ್ ಸಂಭಾಳಿಸಿದ ಶಿಖರ್ ಧವನ್ 24 ಎಸೆತದಲ್ಲಿ 31 ರನ್(2 ಬೌಂಡರಿ, 1 ಸಿಕ್ಸರ್) ಹೊಡೆದರು. ಆದರೆ, ಬೋಪಾರಾ ತಮ್ಮನಿಧಾನಗತಿ ಬೌಲಿಂಗ್ ನಿಂದ ಧವನ್ ಬಲಿ ತೆಗೆದುಕೊಂಡರು.

ಸುರೇಶ್ ರೈನಾ ಹಾಗೂ ನಾಯಕ ಧೋನಿ ವಿಕೆಟ್ ಕೂದಾ ಬೋಪಾರಾ ಪಾಲಾಯಿತು. ದಿನೇಶ್ ಕಾರ್ತಿಕ್ ಅವರು ಟ್ರೆಡ್ ವೆಲ್ ಗೆ ವಿಕೆಟ್ ಒಪ್ಪಿಸಿದರು. ಆದರೆ, ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಗಟ್ಟಿಯಾಗಿ ನಿಂತು ಉಪಯುಕ್ತ 43 ರನ್(34 ಎಸೆತ, 4 ಬೌಂಡರಿ, 1 ಸಿಕ್ಸರ್)ಚೆಚ್ಚಿದರು.

ರವೀಂದ್ರ ಜಡೇಜ ಕೊನೆ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ 25 ಎಸೆತದಲ್ಲಿ 33 ರನ್ ಗಳಿಸಿ ತಂಡದ ಮೊತ್ತವನ್ನು 129/7 ಸ್ಕೋರ್ ಗೆ ಕೊಂಡೊಯ್ದರು. ಇಂಗ್ಲೆಂಡ್ ಪರ ಬೋಪಾರಾ 4 ಓವರ್ ಗಳಲ್ಲಿ 20ಕ್ಕೆ 3 ಪಡೆದರೆ, ಟ್ರೆಡ್ ವೆಲ್, ಆಂಡರ್ಸನ್, ಬ್ರಾಡ್ ತಲಾ 1 ವಿಕೆಟ್ ಪಡೆದರು. 

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಅಂತಿಮ ಹಣಾಹಣಿಗೆ ಮಳೆರಾಯ ಭಾರಿ ಅಡ್ಡಗಾಲು ಹಾಕಿದ್ದ. ಮಳೆ ನಿಲ್ಲದ ಹೊರತೂ ಪಂದ್ಯ ನಡೆಸುವ ಸಾಧ್ಯತೆ ಇಲ್ಲ. ಹೀಗಾಗಿ ಟ್ರೋಫಿಯ ಪ್ರಶಸ್ತಿಯನ್ನು ಭಾರತ ಹಾಗೂ ಇಂಗ್ಲೆಂಡ್ ತಂಡಕ್ಕೆ ಹಂಚುವುದು ಬಹುತೇಕ ಖಚಿತವಾಗಿತ್ತು. ಆದರೆ, 20 ಓವರ್ ಗಳ ಪಂದ್ಯ ನಡೆಯುವ ಸಾಧ್ಯತೆ ಚಿಗುರೊಡೆದಿದೆ. ಪಂದ್ಯ 8.50 PMಕ್ಕೆ ಆರಂಭಗೊಂಡಿತು.

ಹವಾಮಾನ: ಬರ್ಮಿಂಗ್ ಹ್ಯಾಮ್ ನಲ್ಲಿ ಕಳೆದ ರಾತ್ರಿ ಜೋರಾಗಿ ಮಳೆ ಬಿದ್ದಿದೆ. ಹವಾಮಾನ ವರದಿ ಪ್ರಕಾರ ಕ್ರಿಕೆಟ್ ಅಂತಿಮ ಹಣಾಹಣಿಗೆ ಅನುಕೂಲಕರವಾಗಿಲ್ಲ. ಅದರೆ, ಸಂಪೂರ್ಣ ಪಂದ್ಯ ನಡೆಯುವ ಬಗ್ಗೆ ಅಭಿಮಾನಿಗಳು ವಿಶ್ವಾಸ ಹೊಂದಿದ್ದಾರೆ. ಒಂದು ವೇಳೆ ಮಳೆ ಕಾರಣ ಪಂದ್ಯ ರದ್ದಾದರೆ ಉಭಯ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಪಂದ್ಯ ಟೈ ಆದರೆ ಸೂಪರ್ ಓವರ್ ಎದುರಿಸಬೇಕಾಗುತ್ತದೆ.

ಚಾಂಪಿಯನ್ ಟ್ರೋಫಿ ಫೈನಲ್ ಗೆ ಟೀಂ ಇಂಡಿಯಾ ಮೂರನೇ ಬಾರಿ ಪ್ರವೇಶಿಸಿದೆ. ಇಂಗ್ಲೆಂಡ್ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಇದು ಕಟ್ಟ ಕಡೆಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಾಗಿದೆ. ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಅದರೆ, ಇಂಗ್ಲೆಂಡ್ ತಂಡದಲ್ಲಿ ಸ್ಟೀವ್ ಫಿನ್ ಬದಲಿಗೆ ಟಿಮ್ ಬ್ರೆಸ್ನನ್ ಆಯ್ಕೆ ಮಾಡಿಕೊಂಡಿತ್ತು.

ತಂಡಗಳು:ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್) ,ಆರ್ ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಸುರೇಶ್ ರೈನಾ, ಇಶಾಂತ್ ಶರ್ಮ, ರೋಹಿತ್ ಶರ್ಮ, ಉಮೇಶ್ ಯಾದವ್

ಇಂಗ್ಲೆಂಡ್: ಅಲಿಸ್ಟರ್ ಕುಕ್ (ನಾಯಕ), ರವಿ ಬೋಪಾರ, ಸ್ಟುವರ್ಟ್ ಬ್ರಾಡ್, ಜೋ ರೂಟ್, ಜೇಮ್ಸ್ ಟ್ರೆಡ್ ವೆಲ್, ಇಯಾನ್ ಬೆಲ್, ಟೀಮ್ ಬ್ರೆಸ್ನನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಇಯಾನ್ ಮಾರ್ಗನ್, ಜೊನಾಥನ್ ಟ್ರಾಟ್

Story first published:  Sunday, June 23, 2013, 14:55 [IST]
English summary
Virat Kohli and Ravindra Jadeja helped India to 129/7 in 20 overs in the rain-truncated Champions Trophy 2013 final against England here at Edgbaston on Sunday. Later MS Dhoni led team defended the total held their never to edge England by 5 runs to win the Champions Trophy 2013.
ಅಭಿಪ್ರಾಯ ಬರೆಯಿರಿ