Englishहिन्दीമലയാളംதமிழ்తెలుగు

ಐಪಿಎಲ್ : ಏನಿದು ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್?

Posted by:
Published: Thursday, May 16, 2013, 10:50 [IST]
 

ಬೆಂಗಳೂರು, ಮೇ.16: ಇಂಡಿಯನ್ ಪ್ರಿಮಿಯರ್ ಲೀಗ್ 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಭೂತ ಕಾಣಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಂಡಿಲಾ, ಅಂಕಿತ್ ಚೌವ್ಹಾಣ್ ಮತ್ತು ಎಸ್.ಶ್ರೀಶಾಂತ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಫೇರ್ ಪ್ಲೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ರಾಹುಲ್ ದ್ರಾವಿಡ್ ತಂಡಕ್ಕೆ ಇದು ಭಾರಿ ಆಘಾತಕಾರಿಯಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಕೋಟಿಗಟ್ಟಲೇ ಹಣ ಸಾಲ ಹಿಂತಿರುಗಿಸಲು ಆಗದೆ ಒದ್ದಾಡುತ್ತಿದೆ. ಶಿಲ್ಪಾಶೆಟ್ಟಿ, ರಾಜ್ ಕುಂದ್ರಾ ನೋಟಿಸ್ ಪಡೆದು ತತ್ತರಿಸಿದ್ದರು ಈಗ ಫಿಕ್ಸಿಂಗ್ ಭೂತ ತಂಡದ ಯಶಸ್ಸಿಗೆ ಮಾರಕವಾಗಿದೆ.

ಮ್ಯಾಚ್ ಫಿಕ್ಸಿಂಗ್ ಎಂಬ ಕಳ್ಳಾಟ 90 ರ ದಶಕದಲ್ಲಿ ಶಾರ್ಜಾದಲ್ಲಿ ಉಗಮವಾಗಿದ್ದು ಎಂದು ನಂಬಲಾಗಿದೆ. ಆದರೆ, ಸ್ಪಾಟ್ ಫಿಕ್ಸಿಂಗ್ ಗೆ ನಾಂದಿ ಹಾಡಿದ್ದು ಮಾತ್ರ ಟ್ವಿಂಟಿ 20 ಟೂರ್ನಿ. ಸ್ಪಾಟ್ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ತ್ವರಿತಗತಿಯಲ್ಲಿ ದುಷ್ಕರ್ಮಿಗಳ ಜೋಳಿಗೆ ತುಂಬಿಸುವ ವಾಮಮಾರ್ಗ. ಒಂದು ರೀತಿ ಅಂದರ್ ಬಹಾರ್ ಆಟ. ಐಪಿಎಲ್ 5 ರಲ್ಲಿ 5 ಜನ ಆಟಗಾರರು ಕಳ್ಳಾಟವಾಗಿ ನಿಷೇಧಕ್ಕೆ ಒಳಗಾಗಿದ್ದರು ವಿವರ ಇಲ್ಲಿ ಓದಿ

ಮ್ಯಾಚ್ ಫಿಕ್ಸಿಂಗ್ ಎಂದರೆ ಪಂದ್ಯಕ್ಕೆ ಮೊದಲೇ ಯಾರು ಗೆಲ್ಲಬೇಕು ಯಾರು ಸೋಲಬೇಕು ಎಂಬುದನ್ನು ಬುಕ್ಕಿಗಳು ನಿರ್ಣಯಿಸಿ ಕೆಲ ಆಟಗಾರರನ್ನು ಅಥವಾ ನಾಯಕರನ್ನೇ ಜೋಳಿಗೆಗೆ ಹಾಕಿಕೊಂಡು ಕಳ್ಳಾಟ ಆಡುವುದು. ಸ್ಪಾಟ್ ಫಿಕ್ಸಿಂಗ್ ಎಂದರೇನು ಎಂದು ತಿಳಿಯುವ ಮುನ್ನ ಸ್ಪಾಟ್ ಬೆಟ್ಟಿಂಗ್ ಏನು ಎಂದು ತಿಳಿದುಕೊಳ್ಳಬೇಕಾದ್ದು ಅವಶ್ಯ.

ಐಪಿಎಲ್ : ಏನಿದು ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್?

ಕ್ರಿಕೆಟ್ ನಲ್ಲಿನ ಬೆಟ್ಟಿಂಗ್ ಈಗ ಕೇವಲ ಫಲಿತಾಂಶದ ಮೇಲಷ್ಟೇ ನಡೆಯುವುದಲ್ಲ. ಟಾಸ್ ಗೆಲ್ಲುವುದರಿಂದ ಹಿಡಿದು ಆಟಗಾರರ ಮತ್ತು ಬೌಲರುಗಳ ನಿರ್ವಹಣೆಯ ಮೇಲೆ ಪ್ರತಿಯೊಂದು ಓವರಿನ ಆಧಾರದಲ್ಲೂ ಬೆಟ್ಟಿಂಗ್ ನಡೆಯುತ್ತದೆ. ಪಿಚ್, ಮೈದಾನ, ತಂಡದ ಅಂತಿಮ ಆಟಗಾರರು ಹೀಗೆ ಹತ್ತು ಹಲವು ಅಂಶಗಳ ಮೇಲೆ ಬೆಟ್ ಮಾಡಲಾಗುತ್ತದೆ. ಇದು ಸುಲಭ ಹಾಗೂ ತ್ವರಿತ ವಿಧಾನವಾಗಿದೆ.

ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್: ರಾಜಸ್ಥಾನ್ ರಾಯಲ್ಸ್ ಆಟಗಾರರು ಸ್ಪಾಟ್ ಫಿಕ್ಸಿಂಗ್ ಆಯ್ಕೆ ಮಾಡಿದ್ದು ಕೂಡಾ ಇದೇ ಕಾರಣಕ್ಕೆ ಸ್ಮಾರ್ಟ್ ಫೋನ್ ಬಳಸಿ ಮೊಬೈಲ್ ಅಪ್ಲಿಕೇಷನ್ ಮೂಲಕ ಸುರಕ್ಷಿತವಾಗಿ ಮಾಹಿತಿ ರವಾನೆ ಮಾಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಹೊರ ಬಿದ್ದಿದೆ. ಇತ್ತೀಚೆಗೆ ದೆಹಲಿಯ ಬಿಎಸ್ ಪಿ ಮುಖಂಡನ ಕೊಲೆಗೆ ಆತನ ಮಗ ಕೂಡಾ whatsapp ಎಂಬ ಅಪ್ಲಿಕೇಷನ್ ಬಳಸಿ ಕರೆ ಹಾಗೂ ಮೆಸೇಜ್ ಮಾಡಿದ್ದ ಎಂಬುದು ಗಮನಾರ್ಹ.

ಪ್ರತಿ ಓವರಿನಲ್ಲಿ ಎಷ್ಟು ರನ್ ಹೋಗುತ್ತದೆ, ಮೇಡನ್ ಆಗುತ್ತದೋ ಇಲ್ಲವೋ, ವಿಕೆಟ್ ಬೀಳುತ್ತದೋ ಇಲ್ಲವೋ ಎಂದು ಕೂಡ ಬೆಟ್ ಕಟ್ಟಬಹುದು. ಹೊಸದಾಗಿ ಕ್ರೀಸಿಗೆ ಬರುವ ಬ್ಯಾಟ್ಸ್‌ಮನ್ 10 ರನ್ ಗಳಿಸುತ್ತಾನೋ ಇಲ್ಲವೋ ಅಥವಾ ಮುಂದಿನ ಓವರಿನಲ್ಲಿ ಬೌಂಡರಿ ಬಾರಿಸುತ್ತಾನೋ ಇಲ್ಲವೋ ಮುಂಚಿತಾಗಿಯೂ ಬೆಟ್ ಕಟ್ಟಲಾಗುತ್ತದೆ.ಹೀಗಾಗಿ ಸ್ಪಾಟ್ ಬೆಟ್ಟಿಂಗ್ ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ಹಾಗಿದೆ.

ಇವೆಲ್ಲವೂ ಆಯಾ ಕ್ಷಣಗಳಲ್ಲಿ ಕಟ್ಟುವ ಬೆಟ್ ಗಳು. ಇಂಥ ಬೆಟ್ ಸ್ವೀಕರಿಸುವ ಭಾರೀ ದೊಡ್ಡ ಜಾಲವೇ ಇದೆ. ಮುಖ್ಯವಾಗಿ ಮೊಬೈಲ್ ಫೋನ್ ಮುಖಾಂತರವೆ ಈ ಬೆಟ್ ಗಳು ನಡೆಯುತ್ತವೆ. ಇವೇ ಸ್ಪಾಟ್ ಬೆಟ್ಟಿಂಗ್ ಮೂಲ ತಂತ್ರಗಾರಿಕೆ.

ಇಂಥ ಸ್ಪಾಟ್ ಬೆಟ್ಟಿಂಗ್ ನ್ನು ಗೆಲ್ಲಲು ನಡೆಸುವುದೇ ಸ್ಪಾಟ್ ಫಿಕ್ಸಿಂಗ್. ಒಬ್ಬಾತನಿಗೆ ಒಂದು ಓವರಿನಲ್ಲಿ ನೋಬಾಲ್ ಪ್ರಯೋಗಿಸಲ್ಪಡುತ್ತದೆ ಎಂದು ಮುಂಚಿತವಾಗಿಯೆ ಅರಿವಿದ್ದರೆ ಹಾಗೂ ಆ ಕುರಿತಂತೆ ಅವನು ಲಕ್ಷಾಂತರ ರೂಪಾಯಿ ಬೆಟ್ ಕಟ್ಟಿದರೆ ಅದೆಷ್ಟು ಹಣ ಸಂಗ್ರಹಿಸಬಹುದು ಊಹೆಗೆ ನಿಲುಕದ್ದಾಗಿದೆ.

ಈ ಹಿಂದಿನ ಫಿಕ್ಸಿಂಗ್ : ಇಂಗ್ಲೆಂಡಿನಲ್ಲಿ ಪಾಕ್ ವಿರುದ್ಧದ ಟೆಸ್ಟಿನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲಾಗಿತ್ತು. ಬುಕ್ಕಿ ಮಜೀದ್ ನೋಬಾಲ್ ಎಸೆಯಲು ಮೊದಲೇ ಆಟಗಾರರನ್ನು ಫಿಕ್ಸ್ ಮಾಡಿದ್ದ. ಅದಕ್ಕಾಗಿ ಆಟಗಾರರಿಗೆ ದುಡ್ಡನ್ನೂ ಕೊಟ್ಟಿದ್ದ. ಆದರೆ ಆತ ಆ ಓವರಿನಲ್ಲಿ ನೋಬಾಲ್ ಗಳು ಪ್ರಯೋಗಿಸಲ್ಪಡುತ್ತವೆ ಎಂದು ಬುಕ್ಕಿಗಳಲ್ಲಿ ಬೆಟ್ ಕಟ್ಟಿ ಆಟಗಾರರಿಗೆ ಕೊಟ್ಟಿರುವ ಹಣದ ನಾಲ್ಕು ಪಟ್ಟು ಹಣವನ್ನು ಬುಕ್ಕಿಗಳಿಂದ ಗಳಿಸಿದ್ದ. ಪಾಕಿಸ್ತಾನದ ವೇಗಿ ಆಸಿಫ್ ನಂತರ ಜೈಲುವಾಸ ಅನುಭವಿಸಿ ಫಿಕ್ಸಿಂಗ್ ಭೂತಕ್ಕೆ ತನ್ನ ವೃತ್ತಿ ಜೀವನ ಕಳೆದುಕೊಂಡಿದ್ದ. ಈಗ ಐಪಿಎಲ್ ನಲ್ಲಿ ಮತ್ತೊಮ್ಮೆ ಫಿಕ್ಸಿಂಗ್ ರಗಳೆ ಶುರುವಾಗಿದೆ.

English summary
IPL 2013: Spot-fixing involves a player agreeing to perform to order by pre-arrangement. For example, a bowler might deliberately bowl consecutive wides, No ball in his second over or a batsman could make sure he does not reach double figures.
ಅಭಿಪ್ರಾಯ ಬರೆಯಿರಿ