Englishहिन्दीമലയാളംதமிழ்తెలుగు

ಸೆಹ್ವಾಗ್ ಕ್ರಿಕೆಟ್ ಜೀವನಕ್ಕೆ ಬಿಸಿಸಿಐ ಗುದ್ದು

Posted by:
Updated: Sunday, April 7, 2013, 17:12 [IST]
 

ಮುಂಬೈ, ಏ.7: ಇಂಗ್ಲೆಂಡ್‌ನಲ್ಲಿ ಮುಂಬರುವ ಜೂನ್ 6ರಿಂದ 23ರ ತನಕ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿ ಪಂದ್ಯಾವಳಿಗೆ ಸಂಭಾವ್ಯ ತಂಡವನ್ನು ಬಿಸಿಸಿಐ ಘೋಷಿಸಿದೆ. ದೆಹಲಿಯ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮತ್ತು ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇಬ್ಬರನ್ನು ಕಡೆಗಣಿಸಲಾಗಿದೆ. ಈ ಮೂಲಕ ಇಬ್ಬರ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ.

ಐಸಿಸಿ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಗೆ 30 ಮಂದಿಯ ಸಂಭಾವ್ಯ ತಂಡವನ್ನು ಆಯ್ಕೆ ಮಾಡಲಾಗಿದೆ. ಸೆಹ್ವಾಗ್(251 ಪಂದ್ಯ,8273 ರನ್), ಹರ್ಭಜನ್ (229 ಪಂದ್ಯ, 259 ವಿಕೆಟ್) ಇವರ ಜೊತೆಗೆ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ(18 ಪಂದ್ಯ, 21 ವಿಕೆಟ್) ಉತ್ತಮ ಅನುಭವವಿದ್ದರೂ ಸದ್ಯದ ಫಾರ್ಮ್ ಪರಿಗಣಿಸಿ ಆಯ್ಕೆ ಮಾಡಲಾಗಿಲ್ಲ.

ಈ ಮೂವರು ಆಟಗಾರರು ಕಳೆದ ಜನವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದಲ್ಲಿ ಅವಕಾಶ ಪಡೆದಿರಲಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅಂತಿಮ 15 ಮಂದಿಯ ತಂಡವನ್ನು ಮೇ 6ರಂದು ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.

ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯು ಸಂಭಾವ್ಯ ತಂಡವನ್ನು ಆಯ್ಕೆ ಮಾಡಿದ್ದು, ತಂಡದಲ್ಲಿ ವೇಗದ ಬೌಲಿಂಗ್ ವಿಭಾಗಕ್ಕೆ 10 ಮಂದಿ ಮತ್ತು ಸ್ಪಿನ್ ವಿಭಾಗಕ್ಕೆ ಐವರು ಆಟಗಾರರನ್ನು ಅಯ್ಕೆ ಮಾಡಿದೆ.

ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 6 ರಂದು ಆಡಲಿದೆ. ಜೂನ್ 11 ರಂದು ವೆಸ್ಟ್ ಇಂಡೀಸ್ ಹಾಗೂ ಜೂನ್ 15 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಕರ್ನಾಟಕದ ವೇಗಿ ವಿನಯ್ ಕುಮಾರ್ ಜೊತೆಗೆ ಕೇದಾರ್ ಜಾದೇವ್, ಪರ್ವೆಝ್ ರಸೂಲ್, ಜಲಜ್ ಸಕ್ಸೇನಾ ಮುಂತಾದ ಯುವ ಪ್ರತಿಭೆಗೆ ಸ್ಥಾನ ನೀಡಲಾಗಿದೆ.

ಚೇತೇಶ್ವರ ಪೂಜಾರ ಅವರು ಮೊಹಾಲಿ ಮತ್ತು ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರನ್ನು ಕೂಡಾ ಆಯ್ಕೆ ಸಮಿತಿ ಪರಿಗಣಿಸಿಲ್ಲ. ಎಡಗೈ ವೇಗಿ ಜಹೀರ್ ಖಾನ್ ಅವರು ತಂಡದಲ್ಲಿ ಅವಕಾಶ ಪಡೆದಿಲ್ಲ.

ಸಂಭಾವ್ಯ ತಂಡ: ಮುರಳಿ ವಿಜಯ್, ಶಿಖರ್ ಧವನ್, ಗೌತಮ್ ಗಂಭೀರ್, ಉನ್ಮುಕ್ತ್ ಚಂದ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರೋಹಿತ್ ಶರ್ಮ, ಮನೋಜ್ ತಿವಾರಿ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಕೇದಾರ್ ಜಾದೇವ್, ಮಹೇಂದ್ರ ಸಿಂಗ್ ಧೋನಿ, ವೃದ್ಧಿಮಾನ್ ಸಹಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ, ರವೀಂದ್ರ ಜಡೇಜ, ಜಲಜ್ ಸಕ್ಸೇನಾ, ಪರ್ವೆಝ್ ರಸೂಲ್, ಇಶಾಂತ್ ಶರ್ಮ, ಭುವನೇಶ್ವರ ಕುಮಾರ್, ಅಶೋಕ್ ದಿಂಡಾ, ಉಮೇಶ್ ಯಾದವ್, ಮುಹಮ್ಮದ್ ಶಮಿ, ಇರ್ಫಾನ್ ಪಠಾಣ್, ವಿನಯ್ ಕುಮಾರ್, ಪ್ರವೀಣ್ ಕುಮಾರ್, ಈಶ್ವರ್ ಪಾಂಡೆ ಮತ್ತು ಸಿದ್ಧಾರ್ಥ ಕೌಲ್.

Story first published:  Sunday, April 7, 2013, 17:07 [IST]
English summary
Virender Sehwag's future as an international player looked over after the selectors on Saturday did not include the veteran opener in the 30-man probables list for Champions Trophy. Also, Harbhajan Singh and Zaheer Khan were not among the probables.
ಅಭಿಪ್ರಾಯ ಬರೆಯಿರಿ