Englishहिन्दीമലയാളംதமிழ்తెలుగు

ಐಪಿಎಲ್ 6 : ಡೆಲ್ಲಿ ಬಗ್ಗು ಬಡಿದ ಗಂಭೀರ್ ಪಡೆ

Posted by:
Updated: Wednesday, April 3, 2013, 23:42 [IST]
 

ಕೋಲ್ಕತ್ತಾ, ಏ.3: ಡೆಲ್ಲಿ ಡೇರ್ ಡೆವಿಲ್ಸ್ ನೀಡಿದ ಆಲ್ಪ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ತಂಡ ಕೂಡಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಆದರೂ ಛಲಬಿಡದೆ ನಿಧಾನಗತಿಯಿಂದ ಆಡಿದ ಶಾರುಖ್ ಪಡೆ ಆರಂಭಿಕ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ನಾಯಕ ಗಂಭೀರ್ ಆಟದಿಂದ ಯಶಸ್ವಿಯಾಗಿ ಗುರಿ ಮುಟ್ಟಿದ ಕೆಕೆಆರ್ ತಂಡ 6 ವಿಕೆಟ್ ಗಳ ಜಯ ದಾಖಲಿಸಿದೆ.

129 ರನ್ ಗಳ ಗುರಿ ಬೆನ್ನು ಹತ್ತಿದ ಕೆಕೆಆರ್ ಆರಂಭದಲ್ಲೇ ಬಿಸ್ಲಾ(4 ರನ್) ವಿಕೆಟ್ ಕಳೆದುಕೊಂಡಿತು. ನಾಯಕ ಗೌತಮ್ ಗಂಭೀರ್ ಉತ್ತಮ ಆಟವಾಡಿ 29 ಎಸೆತದಲ್ಲಿ 42 ರನ್ (5 ಬೌಂಡರಿ, 1 ಸಿಕ್ಸರ್) ಚೆಚ್ಚಿ ರನ್ ಗತಿ ಹೆಚ್ಚಿಸಿದರು.

ಕಾಲಿಸ್, ತಿವಾರಿ ತಲಾ 23 ರನ್ ಗಳಿಸಿದರು. ಕೊನೆ ಗಳಿಗೆಯಲ್ಲಿ ಇಯಾನ್ ಮಾರ್ಗನ್ ಹಾಗೂ ಯೂಸುಫ್ ಪಠಾಣ್ ಸಮಯೋಚಿತ ಆಟ ಪ್ರದರ್ಶಿಸಿ ಗೆಲುವಿನ ಹಂತ ಮುಟ್ಟಿಸಿದರು. ಎಡಗೈ ಸ್ಪಿನ್ನರ್ ಶಾಬಾಜ್ ನದೀಂ 2 ವಿಕೆಟ್ ಗಳಿಸಿದರೆ, ನೆಹ್ರಾ, ಬೋಥಾ ತಲಾ 1 ವಿಕೆಟ್ ಪಡೆದರು.

ಐಪಿಎಲ್ 6 : ಡೆಲ್ಲಿ ಬಗ್ಗು ಬಡಿದ ಗಂಭೀರ್ ಪಡೆ

ಡೆಲ್ಲಿ ಇನ್ನಿಂಗ್ಸ್ : ಆರನೆ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಮಂಗಳವಾರ ರಾತ್ರಿ 8ಕ್ಕೆ ಭರ್ಜರಿ ಅರಂಭ ಸಿಕ್ಕಿದೆ. ಈಡನ್ ಗಾರ್ಡನ್ಸ್‌ನಲ್ಲಿ ಬುಧವಾರ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ತಂಡ ಉತ್ತಮ ಆರಂಭ ಪಡೆದರೂ ನಂತರ ಕೆಕೆಆರ್ ದಾಳಿಗೆ ತತ್ತರಿಸಿ ಅಲ್ಪಮೊತ್ತ ಗಳಿಸಿ 128ರನ್ ಗಳಿಗೆ ಆಲೌಟ್ ಆಯಿತು.

ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಆರಂಭಿಕ ಆಟಗಾರ ಉನ್ಮುಕ್ತ್ ಚಂದ್ ಮೊದಲ ಎಸೆತದಲ್ಲೇ ಬ್ರೆಟ್ ಲೀಗೆ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ತೆರಳಿದರು.

ಮೊದಲ 6 ಓವರ್ ಗಳಲ್ಲಿ ಡೇವಿಡ್ ವಾರ್ನರ್ 4 ಬೌಂಡರಿ ಸಿಡಿಸಿ 19 ಎಸೆತದಲ್ಲಿ 21 ರನ್ ಗಳಿಸಿ ಔಟಾಗಿದ್ದಾರೆ. ಮಹೇಲ್ ಜಯವರ್ಧನೆ 20 ರನ್ ಗಳಿಸಿದ್ದರು. ಆದರೆ, ಇನ್ನಿಂಗ್ಸ್ ಕುಂಟುತ್ತಾ ಸಾಗಿತು.  ಸ್ಕೋರ್ ಕಾರ್ಡ್ ನೋಡಿ

ಅಂಡರ್ -19 ವಿಶ್ವಕಪ್ ತಂಡದ ನಾಯಕ ಉನ್ಮುಕ್ತ್ ಚಂದ್ ಕಳೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಎರಡು ಶತಕ ಸಿಡಿಸಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಬೆನ್ನು ನೋವಿನ ಕಾರಣದಿಂದಾಗಿ ಮೊದಲ ಪಂದ್ಯದಲ್ಲಿ ಹೊರಗುಳಿದಿರುವುದರಿಂದ ಚಂದ್ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. ಆದರೆ, ಚಂದ್ ಕೈ ಚೆಲ್ಲಿಬಿಟ್ಟರು. ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಜಾಂಡೀಸ್ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ನಂತರ ಇನ್ನಿಂಗ್ಸ್ ಸಂಭಾಳಿಸಿದ ನಾಯಕ ಮಹೇಲ ಜಯವರ್ಧನೆ ಅಮೋಘ ಅರ್ಧಶತಕ ಸಿಡಿಸಿದರು. ವಾರ್ನರ್, ಜಯವರ್ಧನೆ ಬಿಟ್ಟರೆ ಉಳಿದ ಆಟಗಾರರು ಹತ್ತರ ಗಡಿ ದಾಟಲಿಲ್ಲ. ಮಹೇಲ 66 ರನ್ ( 52 ಎಸೆತ, 8 ಬೌಂಡರಿ, 1 ಸಿಕ್ಸರ್ ) ಗಳಿಸಿ ಔಟಾದರು.

ಕೆಕೆಆರ್ ಪರ ನಿಗೂಢ ಸ್ಪಿನ್ನರ್ ಸುನಿಲ್ ನರೇನ್ ಮತ್ತೊಮ್ಮೆ ಮಿಂಚಿ 4 ವಿಕೆಟ್ ಕಿತ್ತರು. ಬ್ರೆಟ್ ಲೀ, ಭಾಟಿಯಾ 2 ವಿಕೆಟ್ ಪಡೆದರೆ, ಬಾಲಾಜಿ 1 ವಿಕೆಟ್ ಗಳಿಸಿದರು. ಕೇವಲ 5 ಇತರೆ ರನ್ ನೀಡಿದ ಕೆಕೆಆರ್ ಬೌಲರ್ ಗಳು ಅಚ್ಚುಕಟ್ಟಾದ ಬೌಲಿಂಗ್ ಪ್ರದರ್ಶಿಸಿದರು. ಅಂತಿಮವಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸಾಧಾರಣ ಮೊತ್ತ ಗಳಿಸಿ 128ರನ್ ಗಳಿಗೆ ಆಲೌಟ್ ಆಯಿತು.

Story first published:  Wednesday, April 3, 2013, 20:37 [IST]
English summary
Indian Premier League 2013 : Defending champion Kolkata Knightriders beat Delhi Daredevils by 6 wickets in their opening encounter played at Eden Gardens on Apr. 3.
ಅಭಿಪ್ರಾಯ ಬರೆಯಿರಿ