Englishहिन्दीമലയാളംதமிழ்తెలుగు

ಲಂಕಾ ಆಟಗಾರರಿಗೆ ತಡೆ ಒಡ್ಡಿದ ಜಯಲಲಿತಾ

Posted by:
Published: Tuesday, March 26, 2013, 17:53 [IST]
 

ಲಂಕಾ ಆಟಗಾರರಿಗೆ ತಡೆ ಒಡ್ಡಿದ ಜಯಲಲಿತಾ
 

ಚೆನ್ನೈ, ಮಾ.26: ಶ್ರೀಲಂಕಾವನ್ನು ಪ್ರತಿನಿಧಿಸುವ ಕ್ರಿಕೆಟ್ ಆಟಗಾರರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅವಕಾಶ ನೀಡಲಾಗುವುದಿಲ್ಲ. ಲಂಕಾ ಆಟಗಾರರು ಚೆನ್ನೈನಲ್ಲಿ ಪಂದ್ಯವಾಡಲು ಬಿಡುವುದಿಲ್ಲ. ಲಂಕಾ ಆಟಗಾರರು ಬರದಿದ್ದರೆ ಮಾತ್ರ ಐಪಿಎಲ್ ಪಂದ್ಯಕ್ಕೆ ಅವಕಾಶ ನೀಡುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.

ಐಪಿಎಲ್ ತಂಡದಲ್ಲಿ ಶ್ರೀಲಂಕಾ ಆಟಗಾರರ ಸೇರ್ಪಡೆ ಹಾಗೂ ಚೆನ್ನೈ ಪಂದ್ಯಗಳ ಬಗ್ಗೆ ವಿವರಣೆ ನೀಡಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮಂಗಳವಾರ(ಮಾ.26) ಪತ್ರ ಬರೆದಿದ್ದಾರೆ.

ಶ್ರೀಲಂಕಾದಲ್ಲಿ ತಮಿಳುನಾಡಿನ ಮೀನುಗಾರರನ್ನು ಹಿಂಸಿಸುತ್ತಿರುವುದರಿಂದ ರೊಚ್ಚಿಗೆದ್ದಿರುವ ತಮಿಳುನಾಡು ಸರ್ಕಾರ, ಶ್ರೀಲಂಕಾ ಆಟಗಾರರ ತಮಿಳುನಾಡು ಭೇಟಿಗೆ ನಿರ್ಬಂಧ ಹೇರಿದೆ. ಇತ್ತೀಚೆಗೆ ಇದೇ ವಿಷಯವಾಗಿ ಡಿಎಂಕೆ ಪಕ್ಷ ಕೂಡಾ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿತ್ತು. ತಮಿಳುನಾಡಿನ ಚಿತ್ರೋದ್ಯಮ ಕೂಡಾ ಒಂದು ದಿನ ಬಂದ್ ಆಚರಿಸಿತ್ತು.

ಶ್ರೀಲಂಕಾದ ಆಟಗಾರರು, ಅಂಪೈರ್ ಸೇರಿದಂತೆ ಇತರೆ ಯಾವುದೇ ಅಧಿಕಾರಿಗಳು ತಮಿಳುನಾಡಿಗೆ ಭೇಟಿ ನೀಡಬಾರದು. ಅವರು ಇಲ್ಲವಾದರೆ ಮಾತ್ರ ಐಪಿಎಲ್ ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿ ನಡೆಯಲು ಅವಕಾಶ ನೀಡಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ.

ಶ್ರೀಲಂಕಾ ಆಟಗಾರರನ್ನು ಪರಿಗಣಿಸದಂತೆ ಬಿಸಿಸಿಐಗೆ ಸೂಚಿಸಬೇಕು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಜಯಲಲಿತಾ ಹೇಳಿದ್ದಾರೆ. ಶ್ರೀಲಂಕಾದಲ್ಲಿನ ತಮಿಳರ ಮೇಲಿನ ದೌರ್ಜನ್ಯವನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ಹೆಚ್ಚಾಗಿವೆ. ಶ್ರೀಲಂಕಾ ಸರ್ಕಾರ ತಮ್ಮ ಯಾವುದೇ ಬೇಡಿಕೆಗೂ ಸ್ಪಂಧಿಸದಿರುವುದರಿಂದ ಜನರ ಆಕ್ರೋಶ ತೀವ್ರಗೊಂಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 3ರಿಂದ ಮೇ 26ರವರೆಗೆ ಚೆನ್ನೈನ ವಿವಿಧ ಭಾಗಗಳಲ್ಲಿ ಐಪಿಎಲ್ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿದೆ. 13 ಶ್ರೀಲಂಕಾ ಆಟಗಾರರು ಐಪಿಎಲ್ 6 ರಲ್ಲಿ ಭಾಗವಹಿಸುತ್ತಿದ್ದಾರೆ. ಶ್ರೀಲಂಕಾ ಆಟಗಾರರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಸ್ಪಷ್ಟಪಡಿಸಿದ್ದರು. ಚೆನ್ನೈನಲ್ಲಿ ಸುಮಾರು 10ಕ್ಕೂ ಅಧಿಕ ಪಂದ್ಯವಾಡಬೇಕಿರುವ 13 ಕ್ಕೂ ಅಧಿಕ ಶ್ರೀಲಂಕಾ ಆಟಗಾರರಿಗೆ ಭಯ ಇನ್ನೂ ಕಡಿಮೆಯಾಗಿಲ್ಲ.

ಅಖಿಲ ಧನಂಜಯ ಹಾಗೂ ನುವಾನ್ ಕುಲಶೇಖರ(ಚೆನ್ನೈ ಸೂಪರ್‌ಕಿಂಗ್ಸ್), ಜೀವನ್ ಮೆಂಡಿಸ್ ಹಾಗೂ ಮಹೇಲ ಜಯವರ್ಧನೆ(ಡೆಲ್ಲಿ ಡೇರ್‌ಡೆವಿಲ್ಸ್), ಸಚಿತ್ರಾ ಸೇನಾನಾಯಕೆ(ಕೋಲ್ಕತಾ ನೈಟ್‌ರೈಡರ್ಸ್), ಲಸಿತ ಮಾಲಿಂಗ(ಮುಂಬೈ ಇಂಡಿಯನ್ಸ್), ಅಜಂತಾ ಮೆಂಡಿಸ್ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(ಪುಣೆ ವಾರಿಯರ್ಸ್), ಕುಶಾಲ್ ಪಿರೇರಾ(ರಾಜಸ್ಥಾನ ರಾಯಲ್ಸ್), ಮುತ್ತಯ್ಯ ಮರಳೀಧರನ್ ಹಾಗೂ ತಿಲಕರತ್ನೆ ದಿಲ್ಶನ್(ಆರ್‌ಸಿಬಿ) ಕುಮಾರ ಸಂಗಕ್ಕರ ಹಾಗೂ ತಿಸ್ಸರ ಪಿರೇರಾ(ಸನ್‌ರೈಸ್ ಹೈದರಾಬಾದ್). [ಐಪಿಎಲ್ 6 : ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ]

English summary
There are doubts over the participation of Sri Lankan players in the sixth edition of the Indian Premier League (IPL 6) with the Tamil Nadu Chief Minister writing a letter to Indian Prime Minister saying they will not to allow them to participate in the Twenty20 tournament.
ಅಭಿಪ್ರಾಯ ಬರೆಯಿರಿ