Englishहिन्दीമലയാളംதமிழ்తెలుగు

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 4-0 ದಿಗ್ವಿಜಯ

Posted by:
Updated: Sunday, March 24, 2013, 16:40 [IST]
 

ನವದೆಹಲಿ, ಮಾ.24: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರ(ಮಾ.24)ಹೊಸ ಇತಿಹಾಸ ನಿರ್ಮಾಣವಾಗಿದೆ. 1970ರ ನಂತರ ಮೊದಲ ಬಾರಿಗೆ ಪ್ರವಾಸಿ ಆಸ್ಟ್ರೇಲಿಯಾ ತಂಡ 0-4 ಅಂತರದಿಂದ ಟೆಸ್ಟ್ ಸರಣಿ ಸೋತಿದೆ.

ಗೆಲ್ಲಲು ಬೇಕಿದ್ದ 155 ರನ್ ಗಳ ಬೆನ್ನು ಹತ್ತಿದ ಧೋನಿ ಪಡೆ 31.2 ಓವರ್ ಗಳಲ್ಲಿ 158/4ರನ್ ಸ್ಕೋರ್ ಮಾಡಿನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದು, ಸರಣಿಯನ್ನು 4-0 ಅಂತರದಿಂದ ತನ್ನದಾಗಿಸಿಕೊಂಡಿತು. ಸ್ಕೋರ್ ಕಾರ್ಡ್ ನೋಡಿ

ಬಾರ್ಡರ್ ಗವಾಸ್ಕರ್ ಏರ್ ಟೆಲ್ ಟೆಸ್ಟ್ ಸರಣಿ ಟ್ರೋಫಿ ಧೋನಿ ನಾಯಕತ್ವದ ಟೀಂ ಇಂಡಿಯಾ ಪಾಲಾಗಿದೆ. 2008ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕಾನ್ಪುರದಲ್ಲಿ ಮೂರೇ ದಿನಕ್ಕೆ ಮಣಿಸಿದ್ದ ಭಾರತ, ಈಗ ಮತ್ತೊಮ್ಮೆ ಅದೇ ಸಾಧನೆ ಮಾಡಿದೆ. ಬಿಲ್ ಲಾರಿ ನೇತೃತ್ವದ ಆಸ್ಟ್ರೇಲಿಯಾ ತಂಡ 1970ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 4-0ರ ಸೋಲು ಕಂಡಿತ್ತು.

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್, ಬ್ಯಾಟ್ಸ್ ಮನ್ ರವೀಂದ್ರ ಜಡೇಜ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಸರಣಿಯಲ್ಲಿ 29 ವಿಕೆಟ್ ಕಿತ್ತ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿತು.

ದಿ ಚೇಸ್: 155 ರನ್ ಬೆನ್ನು ಹತ್ತಿದ ಧೋನಿ ಪಡೆ ಆರಂಭದಲ್ಲೇ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡಿತು. 11 ರನ್ ಮಾಡಿದ್ದ ವಿಜಯ್, ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು. ನಂತರ ವಿರಾಟ್ ಕೊಹ್ಲಿ ಹಾಗೂ ಪೂಜಾರಾ ಎರಡನೇ ವಿಕೆಟ್ ಗೆ 104ರನ್ ಜೊತೆಯಾಟ ಹೊಡೆದು ಆಸೀಸ್ ಆಸೆಗೆ ತಣ್ಣೀರೆರಚಿದರು.

ಚೇತೇಶ್ವರ ಪೂಜಾರಾ ಭರ್ಜರಿ ಆಟ ಪ್ರದರ್ಶಿಸಿ ಪಂದ್ಯದಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು. 92 ಎಸೆತದಲ್ಲಿ 82 ರನ್ (11 ಬೌಂಡರಿ) ಚೆಚ್ಚಿ ಭಾರತವನ್ನು ಗೆಲುವಿನ ದಡಕ್ಕೆ ತಂದರು. ಕೊಹ್ಲಿ 41 ರನ್ ಹೊಡೆದು ಔಟಾದರು. ಸಚಿನ್ ತೆಂಡೂಲ್ಕರ್, ರಹಾನೆ ಕೂಡಾ ಬೇಗ ಔಟಾದಾಗ ಆಸೀಸ್ ತಂಡ ಕೊಂಚ ಮೇಲುಗೈ ಸಾಧಿಸಿತ್ತು.

ಆದರೆ, ಪೂಜಾರಾ ಸತರ ಮೂರು ಬೌಂಡರಿ ಬಾರಿಸಿ ಗೆಲುವಿಗೆ ಟೀಂ ಇಂಡಿಯಾ ಸ್ಕೋರ್ ಹತ್ತಿರ ತಂದರು. ನಾಯಕ ಧೋನಿ ಮ್ಯಾಕ್ಸ್ ವೆಲ್ ಬೌಲಿಂಗ್ ಅನ್ನು ಬೌಂಡರಿಗೆ ಅಟ್ಟಿ ಜಯದ ರನ್ ದಾಖಲಿಸಿದರು.

ಆಸೀಸ್ ಆಲೌಟ್ : ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ 164 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಎಡ್ ಕೋವನ್ 24 ರನ್ ಗಳಿಸಿದ್ದು ಬಿಟ್ಟರೆ ಕೊನೆಯಲ್ಲಿ ಪೀಟರ್ ಸಿಡ್ಲ್ ಅರ್ಧಶತಕ ಮಾತ್ರ ಗಳಿಸಿದರು. ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲುವ ಧೈರ್ಯ ಮಾಡಲಿಲ್ಲ. ಪಂದ್ಯದ ಎರಡು ಇನ್ನಿಂಗ್ಸ್ ನಲ್ಲೂ ಅರ್ಧಶತಕ ಸಿಡಿಸಿದ ಮೊದಲ ನಂ.9ನೇ ಆಟಗಾರ ಎಂಬ ಕೀರ್ತಿಗೆ ಪೀಟರ್ ಸಿಡ್ಲ್ ಪಾತ್ರರಾದರು.

ಭಾರತದ ಪರ ಎಡಗೈ ಸ್ಪಿನ್ನರ್ ಜಡೇಜ 58ಕ್ಕೆ 5, ಓಜಾ, ಅಶ್ವಿನ್ ತಲಾ 2 ವಿಕೆಟ್ ಗಳಿಸಿದರೆ, ಇಶಾಂತ್ ಶರ್ಮ 1 ವಿಕೆಟ್ ಪಡೆದರು. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 10 ರನ್ ಮುನ್ನಡೆ ಪಡೆದಿತ್ತು. ನಾಥನ್ ಲಿಯಾನ್ ಅದ್ಭುತ ಬೌಲಿಂಗ್ ಪಂದ್ಯದ ಹೈಲೇಟ್ ಗಳಲ್ಲಿ ಒಂದಾಗಿದೆ. 94 ರನ್ನಿತ್ತು 7 ವಿಕೆಟ್ ಕಿತ್ತರು. ಭಾರತ 272/10 ಮಾತ್ರ ಗಳಿಸಿತು. ಮುರಳಿ ವಿಜಯ್, ಪೂಜರಾ ಅರ್ಧಶತಕ, ಜಡೇಜ 43 ರನ್ ,ಸಚಿನ್ 32 ರನ್ ಮಾತ್ರ ಗಳಿಸಿದರು. ಒಟ್ಟಾರೆ ಕಡಿಮೆ ಮೊತ್ತದ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯ ಕಂಡಿದೆ.

ಸಂಕ್ಷಿಪ್ತ ಸ್ಕೋರ್ :
ಆಸ್ಟ್ರೇಲಿಯಾ: 262 ಹಾಗೂ 164
ಭಾರತ : 272 ಹಾಗೂ 158/4
ಫಲಿತಾಂಶ: ಭಾರತಕ್ಕೆ 6 ವಿಕೆಟ್ ಗಳ ಜಯ.

Story first published:  Sunday, March 24, 2013, 16:18 [IST]
English summary
India completed a historic 4-0 whitewash over Australia by winning the fourth and final Test by six wickets here at Feroz Shah Kotla on Sunday(Mar.24).
ಅಭಿಪ್ರಾಯ ಬರೆಯಿರಿ