Englishहिन्दीമലയാളംதமிழ்తెలుగు

ರಾಹುಲ್ ಶತಕ, ಉತ್ತರಪ್ರದೇಶ ಢಮಾರ್

Posted by:
Updated: Tuesday, February 26, 2013, 17:59 [IST]
 

ರಾಹುಲ್ ಶತಕ, ಉತ್ತರಪ್ರದೇಶ ಢಮಾರ್
 

ವಿಶಾಖಪಟ್ಟಣ, ಫೆ.26: ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಪ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿ ಕರ್ನಾಟಕ ಕುಣಿದಾಡಿದೆ. ತಾಳ್ಮೆಯುತ ಶತಕ ಗಳಿಸಿದ ಮಂಗಳೂರಿನ ಹುಡುಗ ಕೆಎಲ್ ರಾಹುಲ್ ಔಟಾಗದೆ ಉಳಿದು ತಂಡವನ್ನು ಕ್ವಾಟರ್ ಫೈನಲ್ ಗೆ ತಲುಪಿಸಿದರು.

ದಕ್ಷಿಣ ವಲಯ ಸುಬ್ಬಯ್ಯಪಿಳ್ಳೈ ಟೂರ್ನಿ ಗೆದ್ದ ಕರ್ನಾಟಕ ತಂಡ ತನ್ನ ಉತ್ತಮ ಫಾರ್ಮ್ ಅನ್ನು ಇಲ್ಲೂ ಮುಂದುವರೆಸಿದೆ. ಗೆಲ್ಲಲು ಬೇಕಿದ್ದ 195 ರನ್ ಗಳನ್ನು 3 ವಿಕೆಟ್ ಕಳೆದು ಕೊಂಡು 47.3 ಓವರ್ ಗಳಲ್ಲಿ ಸಾಧಿಸಿ ಗೆಲುವು ಸಂಪಾದಿಸಿದೆ.

ಆರಂಭಿಕ ಆಟಗಾರ ಕೆಎಲ್ ರಾಹುಲ್ 152 ಎಸೆತದಲ್ಲಿ 104 ರನ್ ನಾಟೌಟ್(6 ಬೌಂಡರಿ, 3 ಸಿಕ್ಸರ್) ಹೊಡೆದು ಗೆಲುವಿಗೆ ಕಾರಣರಾದರು. ರಾಹುಲ್ ಗೆ ಜಿ.ಕೆ ಸತೀಶ್ ಉತ್ತಮ ಸಾಥ್ ನೀಡಿ 53 ರನ್(93 ಎಸೆತ, 5 ಬೌಂಡರಿ) ಬಾರಿಸಿದರು. ರಾಬಿನ್ ಉತ್ತಪ್ಪ 12 ರನ್ ಮಾತ್ರ ಗಳಿಸಿ ಔಟಾದರೆ, ಮನೀಶ್ ಪಾಂಡೆ 18 ರನ್ ಗಳಿಸಿದರು. ಉತ್ತರಪ್ರದೇಶ ಪರ ಇಮ್ತಿಯಾಜ್ ಅಹ್ಮದ್ 2 ವಿಕೆಟ್, ಎಎಸ್ ರಜಪೂತ್ 1 ವಿಕೆಟ್ ಗಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ತಂಡ ಉತ್ತಮ ಆರಂಭ ಪಡೆಯಿತು. ಆದರೆ, ಜೊತೆಯಾಟದ ಕೊರತೆ ಹಾಗೂ ಶರತ್ ಉತ್ತಮ ಬೌಲಿಂಗ್ ನಿಂದಾಗಿ ರನ್ ವೇಗ ಹೆಚ್ಚಿಸಲು ಆಗಲಿಲ್ಲ.

ಉತ್ತರ ಪ್ರದೇಶ ಪರ ಗುಪ್ತ 34 ರನ್, ಮಹಮ್ಮದ್ ಕೈಫ್ 37 ರನ್ ಹೊಡೆದರೆ, ಸ್ಟಾರ್ ಆಟಗಾರ ಸುರೇಶ್ ರೈನಾ ಕೇವಲ 13 ರನ್ ಗಳಿಸಿ ಕೆಪಿ ಅಪ್ಪಣ್ಣ ಸ್ಪಿನ್ ಗೆ ಬಲಿಯಾದರು. ಉಳಿದಂತೆ ಯಾರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಕರ್ನಾಟಕ ಪರ ವಿನಯ್ ಕುಮಾರ್ 23ಕ್ಕೆ 1, ಮಿಥುನ್ 34ಕ್ಕೆ 1, ಸ್ಪಿನ್ನರ್ ಕೆಪಿ ಅಪ್ಪಣ್ಣ 42ಕ್ಕೆ 2 ವಿಕೆಟ್ ಗಳಿಸಿದರು. ಶರತ್ ಶಿವಲಿಂಗಯ್ಯ 46 ರನ್ನಿತ್ತು 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ನಾಕೌಟ್ ಹಂತಕ್ಕೆ 20 ಅಂಕಗಳೊಂದಿಗೆ ಕಾಲಿಟ್ಟಿದ ಕರ್ನಾಟಕ ಒಟ್ಟಾರೆ ಸತತ 6 ಜಯದಾಖಲಿಸಿ ಮುನ್ನುಗ್ಗುತ್ತಿದೆ. ಉತ್ತರಪ್ರದೇಶ ಲೀಗ್ ಹಂತದಲ್ಲಿ 12 ಅಂಕ ಗಳಿಸಿತ್ತು.

ತಂಡಗಳು : ಉತ್ತರಪ್ರದೇಶ: ಅಲಿ ಮುರ್ತಜಾ, ಎಎನ್ ಅಲಂ, ಆರ್ ದ್ವಿವೇದಿ, ಮಹಮ್ಮದ್ ಕೈಫ್, ಪಿಎಸ್ ಗುಪ್ತ, ಸುರೇಶ್ ರೈನಾ, ಟಿಎಂ ಶ್ರೀವಾಸ್ತವ್, ಎಎಸ್ ರಜಪೂತ್, ಎಡಿ ನಾಥ್, ಆರ್ ಜಿ ಪಾಲ್

ಕರ್ನಾಟಕ: ಸಿಎಂ ಗೌತಮ್, ಎ ಮಿಥುನ್, ರಾಬಿನ್ ಉತ್ತಪ್ಪ, ಆರ್ ವಿನಯ್ ಕುಮಾರ್, ಮನೀಶ್ ಪಾಂಡೆ, ಅಮಿತ್ ವರ್ಮ, ಕರುಣ್ ನಾಯರ್, ಕೆಎಲ್ ರಾಹುಲ್, ಕೆಪಿ ಅಪ್ಪಣ್ಣ, ಜಿ.ಕೆ ಸತೀಶ್, ಶರತ್ ಶಿವಲಿಂಗಯ್ಯ

Story first published:  Tuesday, February 26, 2013, 17:39 [IST]
English summary
Pre Quarter Final Result : Karnataka beat Uttar Pradesh by 7 wickets in the match played at Visakhapatnam today(Feb.26). Karnataka entered Quater final of Vijay Hazare Trophy 2013.
ಅಭಿಪ್ರಾಯ ಬರೆಯಿರಿ