Englishहिन्दीമലയാളംதமிழ்తెలుగు

ಐಪಿಎಲ್ 6: ಆರ್ ಸಿಬಿಗೆ ವಿರಾಟ್ ಕೊಹ್ಲಿ ನಾಯಕ

Posted by:
Updated: Wednesday, February 20, 2013, 13:52 [IST]
 

ಬೆಂಗಳೂರು, ಫೆ.20: ಪ್ರವಾಸಿ ಆಸ್ಟ್ರೇಲಿಯಾ ಸರಣಿಗೆ ತಯಾರಾಗಿರುವ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ. ಇಂಡಿಯನ್ ಪ್ರಿಮಿಯರ್ ಲೀಗ್ ನ 6ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಅವರನ್ನು ನಾಯಕರನ್ನಾಗಿ ಬುಧವಾರ (ಫೆ.20) ಘೋಷಿಸಲಾಗಿದೆ.

ಆರ್ ಸಿಬಿ ನಾಯಕರಾಗಿದ್ದ ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ ಅವರ ಬದಲಿಗೆ ಬೆಂಗಳೂರು ತಂಡವನ್ನು ಕೊಹ್ಲಿ ಅವರು ಮುನ್ನಡೆಸಲಿದ್ದಾರೆ ಎಂದು ಆರ್ ಸಿಬಿ ವಕ್ತಾರರು ದಟ್ಸ್ ಕ್ರಿಕೆಟ್ ಪ್ರತಿನಿಧಿಗೆ ತಿಳಿಸಿದ್ದಾರೆ.

ಸುದ್ದಿ ತಿಳಿದ ವಿರಾಟ್ ಕೊಹ್ಲಿ ಸಕತ್ ಥ್ರಿಲ್ ಆಗಿದ್ದಾರೆ. 'ಸುದ್ದಿ ಕೇಳಿ ತುಂಬಾ ಸಂತೋಷವಾಯಿತು. 19 ವರ್ಷ ವಯೋಮಿತಿಯೊಳಗಿನ ತಂಡವನ್ನು 2008ರಲ್ಲಿ ಮುನ್ನಡೆಸಿದ ಅನುಭವ ನನ್ನ ಕೈ ಹಿಡಿಯಲಿದೆ. ಕ್ರಿಕೆಟ್ ಕ್ಷೇತ್ರದ ಶ್ರೇಷ್ಠ ಆಟಗಾರರನ್ನು ಸಂಭಾಳಿಸುವುದು ತುಂಬಾ ಚಾಲೆಂಜಿಂಗ್ ಕೆಲಸ, ತಂಡದ ಮಾಲೀಕ ವಿಜಯ್ ಮಲ್ಯ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ನನ್ನ ಜವಾಬ್ದಾರಿಗೆ ತಕ್ಕ ಪ್ರದರ್ಶನ ನೀಡುವ ಭರವಸೆ ನೀಡುತ್ತೇನೆ' ಎಂದು ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಯುವ ಕ್ರಿಕೆಟರ್ ಗಳಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ, ಅನುಭವವಿದೆ. ಆರ್ ಸಿಬಿ ತಂಡದ ಯಶಸ್ಸಿಗೆ ಈ ಆಯ್ಕೆ ಪೂರಕವಾಗಲಿದೆ ಎಂದು ಬೆಂಗಳೂರು ತಂಡದ ಒಡೆಯ ಡಾ. ವಿಜಯ್ ಮಲ್ಯ ಹೇಳಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಕೆಯಲ್ಲಿ ವಿರಾಟ್ ಕೊಹ್ಲೊ 11 ನೇ ಸ್ಥಾನದಲ್ಲಿದ್ದಾರೆ. ಈ ವರೆಗೂ 28.25 ಸರಾಸರಿಯಂತೆ 1639 ರನ್ ಗಳಿಸಿದ್ದಾರೆ. ಇನ್ನೂ ಐಪಿಎಲ್ ನಲ್ಲಿ ಶತಕ ಬಾರಿಸಿಲ್ಲ. 73 ನಾಟೌಟ್ ಅವರ ಅತ್ಯಧಿಕ ರನ್ ಗಳಿಕೆ. ಸ್ಟ್ರೈಕ್ ರೇಟ್ 119.28 ನಷ್ಟಿದ್ದು, ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. 8 ಅರ್ಧ ಶತಕ, 154 ಬೌಂಡರಿ, 49 ಸಿಕ್ಸ್ ಗಳನ್ನು ಈವರೆಗೂ ಸಿಡಿಸಿದ್ದಾರೆ. ಚಾಂಪಿಯನ್ಸ್ ಲೀಗ್ ಟಿ20 ಇತಿಹಾಸದಲ್ಲಿ ಮೂರನೇ ಅತ್ಯಧ್ಕ ರನ್ ಗಳಿಕೆ ಆಟಗಾರನಾಗಿದ್ದರು.

2012 ರಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಆರಂಭಿಕ ಆಟಗಾರ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಸೇರಿಸಿದ 204* ರನ್ ಗಳ ಜೊತೆಯಾಟ ಇನ್ನೂ ದಾಖಲೆಯಾಗಿ ಉಳಿದಿದೆ. ಇದಕ್ಕೂ ಮುನ್ನ ಚಾಂಪಿಯನ್ಸ್ ಲೀಗ್ ಟಿ20ಯಲ್ಲೂ ಈ ಜೋಡಿ 141 ರನ್ ಗಳ ಜೊತೆಯಾಟ ಪ್ರದರ್ಶಿಸಿತ್ತು.

ವಿರಾಟ್ ಸಾಧನೆ:
* 2008 ರಿಂದ 2012 ರ ತನಕ ಸುಮಾರು 28 ಕ್ಯಾಚ್ ಹಿಡಿದಿದ್ದಾರೆ.
* ಚಾಂಪಿಯನ್ಸ್ ಲೀಗ್ ನಲ್ಲಿ 10 ಕ್ಯಾಚ್ ಹಿಡಿದ ಏಕೈಕ ಆಟಗಾರ, 38.54 ರನ್ ಸರಾಸರಿ 4ನೇ ಅತ್ಯಧಿಕ ರನ್ ಸರಾಸರಿ
* ಸುರೇಶ್ ರೈನಾ, ಬದರೀನಾಥ್ ನಂತರ ಅತಿ ಹೆಚ್ಚು ಐಪಿಎಲ್ ಪಂದ್ಯವಾಡಿರುವ ಕೊಹ್ಲಿ 77 ಪಂದ್ಯಗಳಲ್ಲಿ ಆರ್ ಸಿಬಿ ಪ್ರತಿನಿಧಿಸಿದ್ದಾರೆ.
* ಕಿರಾನ್ ಪೋಲ್ಲಾರ್ಡ್ ನಂತರ ಅತಿ ಹೆಚ್ಚು ರನ್ ಉಳಿತಾಯ(ಉತ್ತಮ ಫೀಲ್ಡಿಂಗ್)ಮಾಡಿರುವುದು ವಿರಾಟ್ ಕೊಹ್ಲಿ ಎಂಬುದು ಆರ್ ಸಿಬಿ ಅಭಿಮಾನಿಗಳಿಗೆ ಹೆಮ್ಮೆಯ ವಿಷಯ

ದಟ್ಸ್ ಕ್ರಿಕೆಟ್

Story first published:  Wednesday, February 20, 2013, 13:37 [IST]
English summary
Virat Kohli has been appointed as the captain of Royal Challengers Bangalore (RCB) for the sixth edition of the Indian Premier League (IPL 6). Kohli replaces New Zealand's Daniel Vettori.
ಅಭಿಪ್ರಾಯ ಬರೆಯಿರಿ