Englishहिन्दीമലയാളംதமிழ்తెలుగు

ಮತ್ತೆ ಬ್ಯಾಟ್ ಹಿಡಿದು ನಿಂತ ಸೆಹ್ವಾಗ್

Posted by:
Updated: Wednesday, January 30, 2013, 13:26 [IST]
 

ಮತ್ತೆ ಬ್ಯಾಟ್ ಹಿಡಿದು ನಿಂತ ಸೆಹ್ವಾಗ್
 

ಬೆಂಗಳೂರು, ಜ. 30: ಏಕದಿನ ಕ್ರಿಕೆಟ್‌ನಲ್ಲಿ ಫಾರ್ಮ್ ಇಲ್ಲದೆ ಒದ್ದಾಡುತ್ತಿದ್ದ ವೀರೇಂದ್ರ ಸೆಹ್ವಾಗ್ ಮತ್ತೆ ಬ್ಯಾಟ್ ಹಿಡಿದು ನಿಂತಿದ್ದಾರೆ. 40ನೇ ಬಾರಿಗೆ ರಣಜಿ ಚಾಂಪಿಯನ್ ಆದ ಮುಂಬೈ ವಿರುದ್ಧದ ಏರ್‌ಟೆಲ್ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ ತಂಡವನ್ನು ನಾಯಕನಾಗಿ ಸೆಹ್ವಾಗ್ ಮುನ್ನಡೆಸಲಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಫೆ.6ರಿಂದ 10ರ ತನಕ ನಡೆಯಲಿರುವ ಇರಾನಿ ಕಪ್ ಪಂದ್ಯಕ್ಕೆ 14 ಮಂದಿ ಆಟಗಾರರನ್ನು ಒಳಗೊಂಡ ಶೇಷ ಭಾರತ ತಂಡವನ್ನು ಆಯ್ಕೆ ಮಾಡಿದೆ. ತಂಡದ ನಾಯಕನಾಗಿ ಸೆಹ್ವಾಗರನ್ನು ಆಯ್ಕೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಮಂಡಳಿ ಅಧ್ಯಕ್ಷರ ಇಲೆವೆನ್ ಮತ್ತು ಭಾರತ ‘ಎ' ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಫಾರ್ಮ್ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸೆಹ್ವಾಗ್‌ಗೆ ಟೀಮ್‌ಇಂಡಿಯಾದಲ್ಲಿ ಅವಕಾಶ ನಿರಾಕರಿಸಲಾಗಿತ್ತು.

ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ವೇಗಿ ಎಸ್. ಶ್ರೀಶಾಂತರಿಗೆ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ಫಾರ್ಮ್ ಕಳೆದುಕೊಂಡಿರುವ ದಿಲ್ಲಿಯ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಯಾವುದೇ ತಂಡದಲ್ಲೂ ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ.

ವೇಗಿಗಳಾದ ಜಹೀರ್‌ಖಾನ್ ಮತ್ತು ಉಮೇಶ್ ಯಾದವ್ ಇನ್ನೂ ದೈಹಿಕ ಪರೀಕ್ಷೆಗೆ ಒಳಪಡಬೇಕಿದೆ. ಫಿಟ್ನೆಸ್ ಪ್ರಮಾಣ ಪತ್ರ ಇಲ್ಲದ ಕಾರಣ ಇಬ್ಬರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಮನೋಜ್ ತಿವಾರಿ ಅವರು ಶೇಷ ಭಾರತ ಮತ್ತು ಭಾರತ ‘ಎ' ತಂಡಗಳಲ್ಲಿ ಅವಕಾಶ ಪಡೆದಿದ್ದಾರೆ. ನೂತನ ಶೇಷ ಭಾರತ ತಂಡದಲ್ಲಿ 6 ಬ್ಯಾಟ್ಸ್‌ಮನ್‌ಗಳು, 6 ಬೌಲರ್‌ಗಳು, ಓರ್ವ ಆಲ್‌ರೌಂಡರ್ ಜಲಜ್ ಸಕ್ಸೇನಾ ಮತ್ತೂ ಓರ್ವ ವಿಕೆಟ್‌ಕೀಪರ್‌ವೃದ್ಧಿಮಾನ್ ಸಹಾ ಇದ್ದಾರೆ.

ಪ್ರವಾಸಿ ಆಸ್ಟ್ರೇಲಿಯ ತಂಡದ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಇದೇ ವೇಳೆ ಆಯ್ಕೆ ಮಾಡಲಾಗಿರುವ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡಕ್ಕೆ ತಮಿಳುನಾಡಿನ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಅಭಿನವ್ ಮುಕುಂದ್ ಮತ್ತು ಭಾರತ ‘ಎ' ತಂಡಕ್ಕೆ ಶಿಖರ್‌ಧವನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ರಣಜಿಯಲ್ಲಿ ಐದು ಶತಕ ದಾಖಲಿಸಿರುವ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೀವನ್ಜೋತ್ ಸಿಂಗ್ ಭಾರತ ‘ಎ' ತಂಡದಲ್ಲಿ, ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಮ್ಮು-ಕಾಶ್ಮೀರದ ಆಲ್‌ರೌಂಡರ್ ಪರ್ವೇಜ್ ರಸೂಲ್ ಮಂಡಳಿ ಅಧ್ಯಕ್ಷರ ಇಲೆವೆನ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಿಂದ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯ ಹಾದಿಯಲ್ಲಿರುವ 23ರ ಹರೆಯದ ಪರ್ವೇಜ್ ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಭಾರತ ‘ಎ' ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಕೆಎಸ್ ಸಿಎ ಬಾಂಬ್ ಸ್ಪೋಟ ಸಂಬಂಧ ಬೆಂಗಳೂರು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ ಫೆ.12ರಿಂದ 13ರ ತನಕ ಚೆನ್ನೈಯಲ್ಲಿ ಮತ್ತು ಭಾರತ ‘ಎ' ತಂಡ ಫೆ.16ರಿಂದ 18ರ ತನಕ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಡಗಳ ವಿವರ
ಶೇಷ ಭಾರತ:
ವೀರೇಂದ್ರ ಸೆಹ್ವಾಗ್(ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಮನೋಜ್ ತಿವಾರಿ, ಸುರೇಶ್ ರೈನಾ, ವೃದ್ಧಿಮಾನ್ ಸಹಾ, ಹರ್ಭಜನ್ ಸಿಂಗ್, ಎಸ್.ಶ್ರೀಶಾಂತ್, ಪ್ರಗ್ಯಾನ್ ಓಜಾ, ಈಶ್ವರ್ ಪಾಂಡೈ, ಅಭಿಮನ್ಯು ಮಿಥುನ್, ಅಂಬಟಿ ರಾಯಿಡು, ಶಮಿ ಅಹ್ಮದ್, ಜಲಜ್ ಸಕ್ಸೇನಾ.

ಮಂಡಳಿ ಅಧ್ಯಕ್ಷರ ಇಲೆವೆನ್: ಅಭಿನವ್ ಮುಕುಂದ (ನಾಯಕ), ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮನ್‌ದೀಪ್ ಸಿಂಗ್, ಕೇದಾರ್ ಜಾಧವ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಸರ್ಬಜಿತ್‌ಲಡ್ಡಾ, ಪರ್ವೇಜ್ ರಸೂಲ್, ಮುಹಮ್ಮದ್ ಶಮಿ, ಪರ್ವೇಂದರ್ ಅವಾನ, ಕಮಲೇಶ್ ಮಕ್ವಾನಾ.

ಭಾರತ ‘ಎ': ಶಿಖರ್ ಧವನ್(ನಾಯಕ), ಜೀವನ್ಜೋತ್ ಸಿಂಗ್, ರೋಹಿತ್ ಶರ್ಮ, ಮನೋಜ್ ತಿವಾರಿ, ಅಜಿಂಕ್ಯ ರಹಾನೆ, ಸಿ.ಎಂ. ಗೌತಮ್, ರಾಕೇಶ್ ಧ್ರುವ, ಜಲಜ್ ಸಕ್ಸೇನಾ, ಮನ್‌ಪ್ರೀತ್ ಗೋನಿ, ವಿನಯ್ ಕುಮಾರ್, ಧವಳ್ ಕುಲಕರ್ಣಿ, ಅಶೋಕ್ ಮನೇರಿಯಾ.

Story first published:  Wednesday, January 30, 2013, 13:24 [IST]
English summary
Virender Sehwag has been named captain of Rest of India squad to face Ranji Trophy champions Mumbai in Irani Cup 2013 from February 6 to 10 at Wankhede Stadium.
ಅಭಿಪ್ರಾಯ ಬರೆಯಿರಿ