Englishहिन्दीമലയാളംதமிழ்తెలుగు

ಸಚಿನ್ ರ 'ಅಸಮರ್ಥ' ಮಗ ಅರ್ಜುನ್ ಆಯ್ಕೆ ಕಿರಿಕ್

Posted by:
Updated: Tuesday, January 15, 2013, 21:47 [IST]
 

ಬೆಂಗಳೂರು, ಜ.13: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಯಾಕೋ ಕೆಟ್ಟ ಕಾಲ ಆರಂಭವಾಗಿರುವಂತಿದೆ. ಒಂದರ ಮೇಲೊಂದರಂತೆ ಸಚಿನ್ ಗೆ ಭಾರಿ ಹಿನ್ನಡೆ ಉಂಟಾಗಿದೆ. ಸಚಿನ್ ಮಾತಿಗೆ ಬಿಸಿಸಿಐಗೆ ಬೆಲೆ ಕೊಟ್ಟಿಲ್ಲ, ಇನ್ನೊಂದೆಡೆ ಸಚಿನ್ ಪುತ್ರ ಅರ್ಜುನ್ ಆಯ್ಕೆ ಕಿರಿಕ್ ಶುರುವಾಗಿದೆ.

ಮುಂಬೈ ಹಾಗೂ ಸರ್ವೀಸಸ್ ನಡುವಿನ ರಣಜಿ ಸೆಮಿಫೈನಲ್ ಪಂದ್ಯವನ್ನು ನವದೆಹಲಿಯಿಂದ ಮುಂಬೈಗೆ ವರ್ಗಾಯಿಸುವಂತೆ ಸಚಿನ್ ಮಾಡಿಕೊಂಡಿದ್ದ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ.

ಮುಂಬೈನ 14 ವರ್ಷ ವಯೋಮಿತಿಯೊಳಗಿನ ತಂಡಕ್ಕೆ ಸಚಿನ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಆಯ್ಕೆಗೊಂಡಿದ್ದರು. ಪಶ್ಚಿಮ ವಲಯ ಲೀಗ್ ಪಂದ್ಯದಲ್ಲಿ ಅರ್ಜುನ್ ಆಯ್ಕೆಯಾಗಿರುವುದರಲ್ಲಿ ಸ್ವಜನಪಕ್ಷಪಾತ ಮಾಡಲಾಗಿದೆ. ಕಳಪೆ ಫಾರ್ಮ್ ನಲ್ಲಿದ್ದರೂ ಅರ್ಜುನ್ ಆಯ್ಕೆ ಮಾಡಿ ಇತರೆ ಪ್ರತಿಭಾವಂತರಿಗೆ ಅನ್ಯಾಯ ಮಾಡಲಾಗಿದೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ) ವಿರುದ್ಧ ಇತರೆ ಆಟಗಾರರ ಪೋಷಕರು ತಿರುಗಿಬಿದ್ದಿದ್ದಾರೆ.

ಅರ್ಜುನ್ ಆಯ್ಕೆ ಗೊಂದಲದ ಬಗ್ಗೆ ಟೈಮ್ ಆಫ್ ಇಂಡಿಯಾ ಪತ್ರಿಕೆ ಸವಿಸ್ತಾರವಾಗಿ ವರದಿ ಮಾಡಿದೆ. ಉತ್ತಮ ಪ್ರದರ್ಶನದ ನಡುವೆಯೂ ತಮ್ಮ ಮಕ್ಕಳು ತಂಡಕ್ಕೆ ಆಯ್ಕೆಯಾಗದಿರುವ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭ್ಯಾಸ ಪಂದ್ಯಗಳಲ್ಲಿ ಕೇವಲ ಒಂದು ಶತಕ(124) ಬಾರಿಸಿರುವ ಅರ್ಜುನ್ ತೆಂಡೂಲ್ಕರ್ ಅವರು ಕಳೆದ ಮೇ ನಂತರ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ, ಸಚಿನ್ ತೆಂಡೂಲ್ಕರ್ ಅವರ ಮಗ ಎಂದು ಹೇಳಿ ಆಯ್ಕೆ ಮಾಡಲಾಗಿದೆ. ಶತಕ ಗಳಿಸಿದ್ದು ಬಿಟ್ಟರೆ ಎಡಗೈ ಆಟಗಾರ ಅರ್ಜುನ್ 70 ರನ್ ಗಳಿಸಿದ್ದರು ಅಷ್ಟೇ.

ಈ ಬಗ್ಗೆ ಎಂಸಿಎ ಅಧಿಕಾರಿಯೊಬ್ಬರನ್ನು ದಟ್ಸ್ ಕ್ರಿಕೆಟ್ ಪ್ರತಿನಿಧಿ ಅಪ್ರಮೇಯ ಮಾತನಾಡಿಸಿದಾಗ, ಆಯ್ಕೆದಾರರ ಮೇಲೆ ಗೂಬೆ ಕೂರಿಸಿದ್ದಾರೆ. ಎಂಸಿಎ ಆಯ್ಕೆದಾರರು Tendulkarised ಆಗಿದ್ದಾರೆ. ಸಚಿನ್ ಅವರನ್ನು ಮೆಚ್ಚಿಸಲು ಅರ್ಜುನ್ ಆಯ್ಕೆ ಮಾಡಿದ್ದಾರೆ. ನೊಂದ ಪೋಷಕರ ಬಗ್ಗೆ ಅನುಕಂಪವಿದೆ. ಈ ರೀತಿ ಆಗಬಾರದು ಪ್ರತಿಭೆಗೆ ಮಾತ್ರ ಮಣೆ ಹಾಕಬೇಕು ಎಂದಿದ್ದಾರೆ.

ಐಇಎಸ್ ಮಾರ್ಡ್ರನ್ ಶಾಲೆ ವಿರುದ್ಧ 398 ರನ್ ಹೊಡೆದು ಔಟಾಗದೆ ಉಳಿದಿದ್ದ ಮಾತುಂಗದಲ್ಲಿರುವ ಡಾನ್ ಬಾಸ್ಕೋ ಶಾಲೆಯ ಭೂಪೇನ್ ಲಾಲ್ವನಿ ಎಂಬ ಹುಡುಗ ತಂಡಕ್ಕೆ ಆಯ್ಕೆಗೊಂಡಿಲ್ಲ. ಗೈಲ್ಸ್ ಶೀಲ್ಡ್ (ಎಲೈಟ್ ವಿಭಾಗ) ಪಂದ್ಯಾವಳಿಯ ಶ್ರೇಷ್ಠ ಪ್ರದರ್ಶನ ಇದಾಗಿದೆ.

ಕೇವಲ 277 ಎಸೆತಗಳಲ್ಲಿ 398 ರನ್ (47 ಬೌಂಡರಿ) ಚೆಚ್ಚಿದ ಹುಡಗನನ್ನು ನಿರ್ಲಕ್ಷಿಸಿ, ಸಚಿನ್ ಪುತ್ರನನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ನನ್ನ ಮಗ ಆಯ್ಕೆಯಾಗುತ್ತಾನೆ ಎಂದು ನಂಬಿದ್ದೆ. ಆದರೆ, ತಂಡ ಪ್ರಕಟಗೊಂಡ ಮೇಲೆ ಶಾಕ್ ಆಯಿತು ಎಂದು ಲಾಲ್ವನಿ ತಂದೆ ಹೇಳಿದ್ದಾರೆ.

ಈ ವಿವಾದದ ಬಗ್ಗೆ ಮಾತನಾಡಿದ ಮುಂಬೈನ ಮಾಜಿ ಕೋಚ್ ಪ್ರವೀಣ್ ಆಮ್ರೆ,'ಈಗ ಜೂನಿಯರ್ ಕ್ರಿಕೆಟ್ ನಲ್ಲಿ ಸರಿಯಾದ ದಾಖಲೆ ಇಟ್ಟುಕೊಂಡಿಲ್ಲ. ನಮ್ಮ ಕಾಲದಲ್ಲಿ ಹೀಗೆ ಎಂದಿಗೂ ಆಗಿಲ್ಲ. ನಮ್ಮ ಕಾಲದಲ್ಲಿ ಮಾಜಿ ಕ್ರಿಕೆಟರ್ ಗಳು ಆಯ್ಕೆ ಸಮಿತಿಯಲ್ಲಿದ್ದರು.

ಈಗ ದುಡ್ಡು ಪಡೆದು ಕೆಲಸ ನಿರ್ವಹಿಸುವ ಅಧಿಕಾರಿಗಳೇ ಹೆಚ್ಚಾಗಿದ್ದಾರೆ. ಪ್ರತಿಭೆಗೆ ತಕ್ಕ ಮನ್ನಣೆ ಸಿಗುತ್ತಿಲ್ಲ. ಆಯ್ಕೆದಾರರು ಮೈದಾನಕ್ಕೆ ತೆರಳಿ ಪಂದ್ಯ ನೋಡುವುದಿಲ್ಲ. ಆಯ್ಕೆ ನಡೆಯುವುದೇ ಬೇರೆ ರೀತಿಯಲ್ಲಿ ಎಂದು ಅಮ್ರೆ ಅಭಿಪ್ರಾಯಪಟ್ಟಿದ್ದಾರೆ.

ಟೈಮ್ಸ್ ವರದಿಯಲ್ಲಿ ಇನ್ನೂ ಅನೇಕ ಉದಾಹರಣೆಗಳನ್ನು ನೀಡಲಾಗಿದೆ. ಪ್ರತಿಭೆ ಇದ್ದರೂ ಆಯ್ಕೆಯಾಗದ ಆಟಗಾರರ ವಿವರಗಳನ್ನು ನೀಡಲಾಗಿದೆ.

Story first published:  Sunday, January 13, 2013, 13:12 [IST]
English summary
Sachin Tendulkar's son Arjun Tendulkar's selection in the Mumbai Under-14 team for West Zone league matches has raised questions of nepotism by Mumbai Cricket Association (MCA) selectors, a report published in a leading English daily said on Sunday.
ಅಭಿಪ್ರಾಯ ಬರೆಯಿರಿ