ಬೆಂಗಳೂರು, ಡಿ.21: ನಿದ್ದೆಗೆಟ್ಟು ಕ್ಯೂನಲ್ಲಿ ನಿಂತಿದ್ದಕ್ಕೂ ಸಾರ್ಥಕವಾಯಿತು ಸಾರ್, ಫಸ್ಟ್ ಟೈಂ ಟಿಕೆಟ್ ಸಿಕ್ಕಿರೋದು ಎಂದು ಕಾಲೇಜು ವಿದ್ಯಾರ್ಥಿ ಅಭಿ ತನ್ನ ಗೆಳೆಯ ಗೆಳತಿಯರೊಟ್ಟಿಗೆ ನಿಂತು ಫೋಸ್ ನೀಡುತ್ತಿದ್ದರೆ, ಇನ್ನೂ ಕ್ಯೂ ನಲ್ಲಿ ನಿಂತವರು ತಮ್ಮ ಸರದಿಯಾಗಿ ಕಾಯುತ್ತಾ ಇದ್ದರು. ಹೌದು, ಬೆಂಗಳೂರಿನ ಜನರಿಗೆ ಪ್ರಳಯ ಮರೆತು ಹೋಗಿದೆ. ಈಗ ಟಿ20 ಜ್ವರ ಆವರಿಸಿದೆ.
ಡಿ.25 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಥಮ ಟಿ20 ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಡಿ,22ರಂದು ಉಭಯ ತಂಡದ ಆಟಗಾರರು ಬೆಂಗಳೂರಿಗೆ ಬಂದು ಐಟಿಸಿ ಗಾರ್ಡನಿಯಾದಲ್ಲಿ ತಂಗಲಿದ್ದಾರೆ. [ಭಾರತ - ಪಾಕಿಸ್ತಾನ ಸಮರ ವೇಳಾಪಟ್ಟಿ]
ಟಿಕೆಟ್ ಟಿಕೆಟ್: ಮುಂಜಾನೆಯಿಂದ ಕ್ಯೂನಲ್ಲಿ ನಿಂತರೂ ಟಿಕೆಟ್ ಸಿಗದೆ ಒದ್ದಾಡುತ್ತಾ ಹೊಟ್ಟೆಗೆ ಹಿಟ್ಟಿಲ್ಲದೆ ನಿಂತಿದ್ದ ಯುವಪಡೆಯನ್ನು ನಿಯಂತ್ರಿಸಲು ಪೊಲೀಸರು ಎಂದಿನಂತೆ ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಡಿ.13ರಿಂದಲೇ ಆನ್ ಲೈನ್ ಟಿಕೆಟ್ ಮಾರಾಟವಾಗಿತ್ತು. ರು 1600, ರು 4000 ಹಾಗೂ ರು 15000 ಬೆಲೆಯ ಟಿಕೆಟ್ ನಿರೀಕ್ಷೆಯಂತೆ ಕೆಲ ಸಮಯದಲ್ಲೇ ಸೋಲ್ಡ್ ಔಟ್ ಆಗಿದೆ.
ಲಭ್ಯ ಮಾಹಿತಿ ಪ್ರಕಾರ ಆನ್ ಲೈನ್ ನಲ್ಲಿ 9000 ರು ಹಾಗೂ 12500 ರು ಬೆಲೆ ಟಿಕೆಟ್ ಗಳು ಕೆಲವು ಇನ್ನೂ ಮಾರಾಟವಾಗಿಲ್ಲ. ಬೆಳಗ್ಗೆ 8 ರಿಂದ ಆಫೀಸ್ ಕೌಂಟರ್ ನಲ್ಲಿ ಬಹುಬೇಡಿಕೆಯ 250 ರು ಡಿ ಸ್ಟ್ಯಾಂಡ್ ಟಿಕೆಟ್ ಮಾರಾಟ ಜಾರಿಯಲ್ಲಿದ್ದು ನಾಳೆ ಬೆಳಗ್ಗೆ ಹೊತ್ತಿಗೆ ಸೋಲ್ಡ್ ಔಟ್ ಆಗುವ ನಿರೀಕ್ಷೆ ಇದೆ. ಹೀಗಾಗಿ ಇವತ್ತು ಟಿಕೆಟ್ ಪಡೆದವನೇ ಬಾಸು.





















