Englishहिन्दीമലയാളംதமிழ்తెలుగు

ನಾಗ್ಪುರ ಟೆಸ್ಟ್ ನಂತರ ಸಚಿನ್ ನಿವೃತ್ತಿ?

Posted by:
Published: Monday, December 17, 2012, 11:36 [IST]
 

ನಾಗ್ಪುರ ಟೆಸ್ಟ್ ನಂತರ ಸಚಿನ್ ನಿವೃತ್ತಿ?
 

ನಾಗಪುರ, ಡಿ. 17 : ಸಚಿನ್ ತೆಂಡೂಲ್ಕರ್ ಅವರ ಆಟದ ಮೈದಾನದ ಮೇಲಿನ ಕ್ರಿಕೆಟ್ ಜೀವನ ಅಂತ್ಯಕ್ಕೆ ಬಂದಿದೆಯಾ? ಎಲ್ಲಿಯವರೆಗೆ ಕ್ರಿಕೆಟ್ ಎಂಜಾಯ್ ಮಾಡುತ್ತೇನೋ, ಎಲ್ಲಿಯವರೆಗೆ ನನ್ನ ದೇಹ ಅವಕಾಶ ಮಾಡಿಕೊಡುತ್ತದೋ ಅಲ್ಲಿಯವರೆಗೆ ಕ್ರಿಕೆಟ್ ಆಡುತ್ತೇನೆ ಎಂದಿದ್ದ ಸಚಿನ್ ಈಗ ಕ್ರಿಕೆಟ್ ಎಂಜಾಯ್ ಮಾಡುತ್ತಿಲ್ಲವೆ ಅಥವಾ 39 ವರ್ಷ ಮಾಗಿರುವ ಅವರ ದೇಹ ಅವರನ್ನು ಆಡಲು ಬಿಡುತ್ತಿಲ್ಲವೆ?

ಮೊದಲಿನಂತೆ ಅಧಿಕಾರಯುತವಾಗಿ ಬ್ಯಾಟಿಂಗ್ ಮಾಡಲು ತಿಣುಕಾಡುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಪ್ರಸ್ತುತ ಸರಣಿಯ ಕಡೆಯ ಟೆಸ್ಟ್ ಮುಗಿದ ಘಳಿಗೆ ಗ್ಲೌಸ್, ಪ್ಯಾಡ್ ಕಳಚುವುದು ಖಚಿತ, 23 ವರ್ಷಗಳ ಸುದೀರ್ಘ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದು ಖಚಿತ ಎಂಬಂತಹ ಮಾತುಗಳು ನಾಗಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಕೇಳಿಬರುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಅವರ ಉಪಸ್ಥಿತಿ ಈ ಊಹಾಪೋಹಕ್ಕೆ ಹೆಚ್ಚಿನ ಇಂಬು ನೀಡಿದೆ. ಭಾನುವಾರ ಅಂಜಲಿ ಅವರು ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪ್ರೀತಿ ಅವರೊಂದಿಗೆ ಕ್ರಿಕೆಟ್ ಎಂಜಾಯ್ ಮಾಡುತ್ತಿರುವುದು ಕಂಡುಬಂದಿತು.

ಸೋಮವಾರ, ಬೆಳಗಿನ ಜಾವ ಐದನೇ ದಿನದ ಆಟ ಆರಂಭವಾಗಿ ಒಂದು ಗಂಟೆಯಲ್ಲಿ ಮೈದಾನದಿಂದ ಮಾಯವಾಗಿರುವ ಸಚಿನ್ ಹನ್ನೊಂದು ಗಂಟೆಯಾದರೂ ಕಾಣಿಸಿಕೊಳ್ಳದಿರುವುದು ಅವರ ನಿವೃತ್ತಿಯ ಊಹಾಪೋಹಕ್ಕೆ ಮತ್ತಷ್ಟು ರೆಕ್ಕೆಪುಕ್ಕಗಳನ್ನು ನೀಡಿದೆ.

ಆದರೆ, ಬಿಸಿಸಿಐ ಅಧಿಕಾರಿಗಳು ಸಚಿನ್ ನಿವೃತ್ತಿಯ ಮಾತನ್ನು ತಳ್ಳಿಹಾಕಿದ್ದಾರೆ. ಅಂಜಲಿ ಉಪಸ್ಥಿತಿಗೂ ಸಚಿನ್ ನಿವೃತ್ತಿಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ಅವರು ನಿವೃತ್ತಿಯಾಗುವುದಿದ್ದರೆ ಭಾರತೀಯ ಕ್ರಿಕೆಟ್ ಮಂಡಳಿಗೆ ಮುಂಗಡವಾಗಿ ತಿಳಿಸಿಯೇ ನಿವೃತ್ತರಾಗುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ 194 ಟೆಸ್ಟ್ ಆಡಿ, 51 ಸೆಂಚುರಿ ಬಾರಿಸಿರುವ ಸಚಿನ್ ಉತ್ತುಂಗದಲ್ಲಿದ್ದಾಗ ನಿವೃತ್ತಿಯಾಗಬೇಕೆಂದು ಬಯಸಿದ್ದರು. ಆದರೆ, ಅವರ ಕಳಪೆ ಫಾರಂ ಅದಕ್ಕೆ ಅವಕಾಶವನ್ನೇ ನೀಡಿಲ್ಲ. ಇಂಗ್ಲೆಂಡ್ ವಿರುದ್ಧದ ಇಡೀ ಸರಣಿಯಲ್ಲಿ ಅವರು ಕೇವಲ 1 ಅರ್ಧ ಶತಕ ಮಾತ್ರ ಬಾರಿಸಿದ್ದಾರೆ.

English summary
There has been speculation since Sunday that Sachin Tendulkar might announce his retirement after the Nagpur Test against England. Presence of Sachin's wife Anjali has give way to his retirement talk.
ಅಭಿಪ್ರಾಯ ಬರೆಯಿರಿ