Englishहिन्दीമലയാളംதமிழ்తెలుగు

ರಣಜಿ: ಕರ್ನಾಟಕಕ್ಕೆ ಹೀನಾಯ ಸೋಲು

Posted by:
Updated: Tuesday, November 27, 2012, 18:51 [IST]
 

ರಣಜಿ: ಕರ್ನಾಟಕಕ್ಕೆ ಹೀನಾಯ ಸೋಲು
 

ಬೆಂಗಳೂರು, ನ.27: ಮಾಜಿ ಚಾಂಪಿಯನ್ ಕರ್ನಾಟಕ ತಂಡ ಪ್ರಸಕ್ತ ರಣಜಿ ಋತುವಿನಲ್ಲಿ ಹೀನಾಯ ಸೋಲು ಕಂಡಿದೆ. ದುರ್ಬಲ ಒಡಿಶಾ ತಂಡ, ಕರ್ನಾಟಕದ ಕಲಿಗಳನ್ನು ತವರು ನೆಲಕ್ಕೆ ನುಗ್ಗಿ ಚೆಚ್ಚಿದ್ದಾರೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ(ನ.27) ಮುಕ್ತಾಯವಾದ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 65 ರನ್ ಗಳಿಂದ ಸೋಲಿಸಿ ಒಡಿಶಾ ತಂಡ ಐತಿಹಾಸಿಕ ಜಯ ದಾಖಲಿಸಿದೆ.

ರಣಜಿ ವೇಳಾಪಟ್ಟಿ ನೋಡಿ

ಕರ್ನಾಟಕ ತಂಡಕ್ಕೆ ಗೆಲ್ಲಲು 245 ರನ್ ಗಳ ಗುರಿ ನೀಡಿದ್ದ ಒಡಿಶಾ ತಂಡ ಗೆಲ್ಲುವ ಆಸೆ ಇಟ್ಟುಕೊಂಡಿರಲಿಲ್ಲ. ಮೂರನೇ ದಿನದ ಅಂತ್ಯಕ್ಕೆ ಕರ್ನಾಟಕ 43/1 ಸ್ಕೋರ್ ಮಾಡಿತ್ತು.

ನಾಲ್ಕನೇ ಹಾಗೂ ಕೊನೆಯ ದಿನ ಗೆಲ್ಲಲು 202 ರನ್ ಬೇಕಿತ್ತು. 9 ವಿಕೆಟ್ ಉಳಿಸಿಕೊಂಡಿದ್ದ ಕರ್ನಾಟಕ 72.3 ಓವರ್ ಗಳಲ್ಲಿ 179 ರನ್ ಗಳಿಸಿ ಆಲೌಟ್ ಆಗಿ ಕಳಪೆ ಪ್ರದರ್ಶನ ನೀಡಿದೆ.

ಗ್ರೂಪ್ ಬಿ ಯಲ್ಲಿ ಒಡಿಶಾ ತಂಡಕ್ಕೆ ಇದು ಎರಡನೇ ಜಯವಾಗಿದ್ದು, ಒಟ್ಟು 4 ಪಂದ್ಯಗಳಿಂದ 13 ಅಂಕ ಸಂಪಾದಿಸಿದೆ. ಕರ್ನಾಟಕ ತಂಡ 4 ಪಂದ್ಯಗಳಿಂದ ಕೇವಲ 5 ಅಂಕ ಮಾತ್ರ ಗಳಿಸಿದೆ.

ಇತಿಹಾಸದ ಪುಟ ಕೆದಕಿದರೆ ಒಡಿಶಾ(ಈ ಹಿಂದಿನ ಒರಿಸ್ಸಾ) ಹಾಗೂ ಕರ್ನಾಟಕ(ಈ ಹಿಂದಿನ ಮೈಸೂರು) ನಡುವಿನ ಪಂದ್ಯಗಳಲ್ಲಿ ನಿರೀಕ್ಷೆಯಂತೆ ಕರ್ನಾಟಕ ಗೆಲುವು ಸಾಧಿಸಿತ್ತು. ಆದರೆ, ಐದನೇ ಬಾರಿಗೆ ಒಡಿಶಾ ಪ್ರಪ್ರಥಮ ಜಯ ದಾಖಲಿಸಿ ಜಯಭೇರಿ ಬಾರಿಸಿದೆ.

1997-98 ಹಾಗೂ 2010-11 ಇನ್ನಿಂಗ್ಸ್ ಜಯ ದಾಖಲಿಸಿದ್ದ ಕರ್ನಾಟಕ 1984-85 ರಲ್ಲಿ 243 ರನ್ ಗಳ ಬೃಹತ್ ಜಯ ಹಾಗೂ 2011-12 ರಲ್ಲಿ 139 ರನ್ ಗಳ ಜಯ ದಾಖಲಿಸಿತ್ತು.

ಪ್ರಸಕ್ತ ಪಂದ್ಯದಲ್ಲಿ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ(45), ಸ್ಟುವರ್ಟ್ ಬಿನ್ನಿ(42) ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲಿಲ್ಲ. ಒಡಿಶಾದ ವೇಗಿ ಅಲೋಕ್ ಚಂದ್ರ ಸಾಹೂ 3, ಬಸಂತ್ ಮೊಹಾಂತಿ 2, ದೀಪರ್ ಬೆಹೆರಾ 2 ಹಾಗೂ ಸಮಂತ್ರಾಯ್ 2 ವಿಕೆಟ್ ಕಿತ್ತು ಸಂಭ್ರಮಿಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ಆರ್ ವಿನಯ್ ಕುಮಾರ್ ಅವರ ಭರ್ಜರಿ ಬೌಲಿಂಗ್ ನಂತರ ಪ್ರಸಕ್ತ ಋತುವಿನಲ್ಲಿ ಮೊದಲ ಜಯ ದಾಖಲಿಸುವ ಗುರಿ ಹೊಂದಿದ್ದ ಕರ್ನಾಟಕಕ್ಕೆ ನಿರಾಶೆಯಾಗಿದೆ.

ವಿನಯ್ ಕುಮಾರ್ ಅವರು 58 ರನ್ನಿತ್ತು 7 ವಿಕೆಟ್ ಪಡೆದು ಭರ್ಜರಿ ಪ್ರದರ್ಶನ ನೀಡಿದ್ದರು. ಕರ್ನಾಟಕ 11 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು. ಆದರೆ, ಕೊನೆಗೆ ಎಲ್ಲವೂ ನೀರನಲ್ಲಿ ಹೋಮ ಮಾಡಿದಂತೆ ಆಗಿಬಿಟ್ಟಿತು.

ಸಂಕ್ಷಿಪ್ತ ಸ್ಕೋರ್:
ಒಡಿಶಾ 202 ಹಾಗೂ 255,
ಕರ್ನಾಟಕ 213 ಹಾಗೂ 179 ಆಲೌಟ್ 72.3 ಓವರ್ಸ್

ದಟ್ಸ್ ಕ್ರಿಕೆಟ್

Story first published:  Tuesday, November 27, 2012, 18:37 [IST]
English summary
What could be termed as a huge upset, Odisha stunned former champions Karnataka by 65 runs in Ranji Trophy at M Chinnaswamy Stadium on Tuesday. This is the first time in the history of India's premier domestic competition that minnows Odisha have beaten Karnataka, one of the strongest teams in the championship.
ಅಭಿಪ್ರಾಯ ಬರೆಯಿರಿ