Englishहिन्दीമലയാളംதமிழ்తెలుగు

ಟಿ20 ನಿವೃತ್ತಿ ಸುದ್ದಿಗೆ ಸೆಹ್ವಾಗ್ ಟ್ವಿಟ್ಟರ್ ಗುದ್ದು

Posted by:
Updated: Friday, November 2, 2012, 11:38 [IST]
 

ಬೆಂಗಳೂರು, ಅ.2 : ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದರ್ ಸೆಹ್ವಾಗ್ ಅವರು ಟ್ವೆಂಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ ಎಂಬ ಊಹಾಪೋಹಾ ಸುದ್ದಿ ಗುರುವಾರವಿಡೀ ಗಿರಕಿ ಹೊಡೆಯುತ್ತಲೇ ಇತ್ತು. ಕೊನೆಗೆ ಸೆಹ್ವಾಗ್ ನಿವೃತ್ತಿ ಸುದ್ದಿಗೆ ಟ್ವಿಟ್ಟರ್ ಮೂಲಕ ಉತ್ತರ ನೀಡಿದ್ದಾರೆ.

ಟಿ20 ನಿವೃತ್ತಿ ಸುದ್ದಿಗೆ ಸೆಹ್ವಾಗ್ ಟ್ವಿಟ್ಟರ್ ಗುದ್ದು

ಟ್ವೆಂಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಉದ್ದೇಶವನ್ನು ಭಾರತ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಬಂದಿದ್ದು ಸೆಹ್ವಾಗ್ ತಮ್ಮ ಇಂಗಿತವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೂ ತಿಳಿಸಿದ್ದಾರೆ ಎಂದು ಹೇಳಲಾಗಿತ್ತು.

"baseless story being run! I have not requested to be rested for any match in any format of the game! Fingers crossed, raring to go!" ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಅಂದ ಹಾಗೆ, ರಣಜಿ ಅಂಗಳಕ್ಕೆ ಇಳಿದಿರುವ ಸೆಹ್ವಾಗ್ ದೆಹಲಿ ಪರ ಆಡಿ ಕೇವಲ 23 ರನ್ ಗಳಿಸಿ ಔಟಾಗಿದ್ದಾರೆ.

ಏನಿದು ಗಾಳಿಸುದ್ದಿ: ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಸೆಹ್ವಾಗ್ ಅವರು ಟೆಸ್ಟ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ತಾವು ಆಡಲು ಬಯಸಿದ್ದಾರೆ. ಹೀಗಾಗಿ ಮುಂದಿನ ಟಿ20 ಪಂದ್ಯಗಳಿಗೆ ಆಯ್ಕೆ ಮಾಡುವಾಗ ಪರಿಗಣಿಸಬಾರದು ಎಂದು ಬಿಸಿಸಿಐ ಆಯ್ಕೆ ಮಂಡಳಿಗೆ ಸೆಹ್ವಾಗ್ ಹೇಳಿದ್ದಾರೆ ಎಂದು ದೆಹಲಿ ಮೂಲದ ಪತ್ರಿಕೆ ವರದಿ ಮಾಡಿತ್ತು.

ಸೆಹ್ವಾಗ್ ಹೇಳಿಕೆಯನ್ನು ಬಿಸಿಸಿಐ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ ಈ ಬಗ್ಗೆ ನಮ್ಮ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದಾರೆ ಎಂದು ದೆಹಲಿಯ ಮೇಲ್ ಟುಡೆ ವರದಿ ಮಾಡಿತ್ತು.

ಇದು ಆಧಾರ ರಹಿತ ಸುದ್ದಿ. ನಾನು ವಿಶ್ರಾಂತಿ ಬಯಸಿಲ್ಲ, ಹಾಗೂ ಈ ಬಗ್ಗೆ ಯಾರ ಹತ್ತಿರವೂ ಮಾತನಾಡಿಲ್ಲ.ಯಾವುದೇ ಕ್ರಿಕೆಟ್ ಪ್ರಕಾರದಿಂದ ದೂರಾಗುತ್ತಿಲ್ಲ ಎಂದು ಸೆಹ್ವಾಗ್ ಅವರು ಮಾಧ್ಯಮ ವರದಿಯನ್ನು ಅಲ್ಲಗೆಳೆದಿದ್ದಾರೆ.

ಸೆಹ್ವಾಗ್ ನಿವೃತ್ತಿ ಸುದ್ದಿ ಬಗ್ಗೆ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾದ ರೋಜರ್ ಬಿನ್ನಿ ಹಾಗೂ ವಿಕ್ರಂ ರಾಥೋಡ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಬಿಸಿಸಿಐ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಸೆಹ್ವಾಗ್ ನಿವೃತ್ತಿ ಸುದ್ದಿ ಹಬ್ಬಲು ಕಾರಣ?: ಶ್ರೀಲಂಕಾದ ವಿಶ್ವ ಟಿ20 ಟೂರ್ನಿಯಲ್ಲಿ ಸೆಹ್ವಾಗ್ ಗೆ ಸರಿಯಾದ ಅವಕಾಶ ಲಭ್ಯವಾಗಿರಲಿಲ್ಲ. ತಂಡದ ಆಯ್ಕೆ ಬಗ್ಗೆ ಸೆಹ್ವಾಗ್ ಮೂಗು ತೂರಿಸುತ್ತಾರೆ. ನಾಯಕ ಧೋನಿ ಹಾಗೂ ಸೆಹ್ವಾಗ್ ಗೂ ಹೊಂದಾಣಿಕೆಯಿಲ್ಲ.

ಸೆಹ್ವಾಗ್ ದೈಹಿಕವಾಗಿ ಇನ್ನೂ ಸಮರ್ಥರಾಗಿಲ್ಲ. 2010 ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದನ್ನು ಬಿಟ್ಟರೆ ನಂತರ ಶತಕ ಗಳಿಸಿಲ್ಲ. 2011ರ ವಿಶ್ವಕಪ್ ನಂತರ ಸೆಹ್ವಾಗ್ ಕೇವಲ 13 ಏಕದಿನ ಪಂದ್ಯಗಳು ಆಡಲು ಸಿಕ್ಕಿದೆ. ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಗಳಿಸಿದ್ದು ಬಿಟ್ಟರೆ ಉಳಿದಂತೆ ಸೆಹ್ವಾಗ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿದಿಲ್ಲ.

ಶ್ರೀಲಂಕಾದಲ್ಲಿ ನಡೆದ ವಿಶ್ವ ಟ್ವೆಂಟಿ20 ಕೇವಲ 3 ಪಂದ್ಯದಲ್ಲಿ ಆಡಿ ಗಳಿಸಿದ್ದು 54 ರನ್ ಮಾತ್ರ. 19 ಟ್ವೆಂಟಿ20ಪಂದ್ಯಗಳಲ್ಲಿ ಸೆಹ್ವಾಗ್ ಸ್ತ್ರೈಕ್ ರೇಟ್ ಉತ್ತಮವಾಗಿದ್ದರೂ ರನ್ ಸರಾಸರಿ 21.88 ದಾಟಿಲ್ಲ. ಈ ಎಲ್ಲಾ ಕಾರಣಗಳಿಂದ ಅವರು ಟಿ20 ಕ್ರಿಕೆಟ್ ಗೆ ವಿದಾಯ ಹೇಳಲು ಬಯಸಿದ್ದಾರೆ ಎಂದು ವರದಿ ಮಾಡಲಾಗಿತ್ತು. ಆದರೆ, ಸೆಹ್ವಾಗ್ ತಕ್ಕ ಉತ್ತರ ನೀಡಿ ಪುನಃ ಮೈದಾನಕ್ಕೆ ಇಳಿದಿದ್ದಾರೆ.

Story first published:  Friday, November 2, 2012, 11:20 [IST]
English summary
India's dashing opener Virender Sehwag has denied reports about his T20 retirement and termed it as a 'baseless story'.Sehwag also tweeted on his micro-blogging site, "baseless story being run! I have not requested to be rested for any match in any format of the game! Fingers crossed, raring to go!"
ಅಭಿಪ್ರಾಯ ಬರೆಯಿರಿ