Englishहिन्दीമലയാളംதமிழ்తెలుగు

ನಂ.6 ಸ್ಥಾನಕ್ಕೆ ಯುವಿ, ರೈನಾ, ತಿವಾರಿ ಕಿತ್ತಾಟ

Posted by:
Updated: Wednesday, October 31, 2012, 15:15 [IST]
 

ನಂ.6 ಸ್ಥಾನಕ್ಕೆ ಯುವಿ, ರೈನಾ, ತಿವಾರಿ ಕಿತ್ತಾಟ
ಬೆಂಗಳೂರು, ಅ.31: ಭಾರತ ಎ ಹಾಗೂ ಪ್ರವಾಸಿ ಇಂಗ್ಲೆಂಡ್ ನಡುವಿನ ಕದನ ಜಾರಿಯಲ್ಲಿರುವಂತೆ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.

ಬೆಂಗಾಳ ರಣಜಿ ತಂಡದ ನಾಯಕ ಆಲ್ ರೌಂಡರ್ ಮನೋಜ್ ತಿವಾತಿ, ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ಭಾರತ 'ಎ' ತಂಡದ ನಾಯಕ ಸುರೇಶ್ ರೈನಾ ಅವರ ನಡುವೆ ನಂ.6ನೇ ಸ್ಥಾನಕ್ಕೆ ಪೈಪೋಟಿ ನಡೆದಿದ್ದು, ಆಯ್ಕೆದಾರರ ಕೃಪೆ ಯಾರಿಗೆ ಸಿಗಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಮನೋಜ್ ತಿವಾರಿ ಅವರು ಪ್ರವಾಸಿ ಇಂಗ್ಲೆಂಡ್ ವಿರುದ್ಧ 93 ರನ್ ಚೆಚ್ಚಿದ್ದಾರೆ. ಯುವರಾಜ್ ಸಿಂಗ್ ಅರ್ಧಶತಕ ಬಾರಿಸಿದ್ದಾರೆ.

ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್ ಅವರು ಮನೋಜ್ ಗೆ ಹೋಲಿಸಿದರೆ ಅನುಭವಿಗಳಾದರೂ, ಮನೋಜ್ ಅವರ ಮೇಲೆ ಆಯ್ಕೆದಾರರ ಕಣ್ಣು ಬಿದ್ದಿದೆ.

ಮನೋಜ್ ತಿವಾರಿ 8 ಏಕದಿನ ಪಂದ್ಯಗಳನ್ನು ಆಡಿ 251 ರನ್ ಗಳಿಸಿದ್ದಾರೆ. ಔಟಾಗದೆ 104 ರನ್ ಗರಿಷ್ಠ ಮೊತ್ತದೊಂದಿಗೆ 35.85 ರನ್ ಸರಾಸರಿ ಹೊಂದಿದ್ದಾರೆ.

ಆದರೆ, ಮನೋಜ್ ತಿವಾರಿ ಅವರ ಪ್ರಥಮ ದರ್ಜೆ ಅನುಭವ ಉತ್ತಮವಾಗಿದೆ. 57 ಪಂದ್ಯಗಳಲ್ಲಿ 4335 ರನ್ ಗಳಿಸಿದ್ದು 267 ಗರಿಷ್ಠ ಮೊತ್ತ ದೊಂದಿಗೆ 58.58 ರನ್ ಸರಾಸರಿ ಹೊಂದಿದ್ದಾರೆ.

ಈ ಅಂಕಿ ಅಂಶದಲ್ಲಿ 16 ಶತಕ, 11 ಅರ್ಧ ಶತಕಗಳಿದ್ದು, ತಿವಾರಿ ಅವರನ್ನು ನಂ.6 ಟೆಸ್ಟ್ ಸ್ಥಾನಕ್ಕಾಗಿ ಪ್ರಮುಖ ಸ್ಪರ್ಧಿಯನ್ನಾಗಿಸಿದೆ.

ಸುರೇಶ್ ರೈನಾ ಅವರ ಟೆಸ್ಟ್ ಕ್ರಿಕೆಟ್ ಅಷ್ಟೇನೂ ಉತ್ತಮವಾಗಿಲ್ಲ. 17 ಟೆಸ್ಟ್ ಪಂದ್ಯಗಳಲ್ಲಿ 768 ರನ್ ಮಾತ್ರ ಗಳಿಸಿದ್ದು 28.44 ರನ್ ಸರಾಸರಿ ಹೊಂದಿದ್ದಾರೆ. ಅನೇಕ ಬಾರಿ ಆಯ್ಕೆದಾರರು, ನಾಯಕ ಧೋನಿ ಕೃಪೆಯಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದೂ ಇದೆ.

120 ರನ್ ಅವರ ಗರಿಷ್ಠ ಮೊತ್ತ ಹೊಂದಿರುವ 1 ಶತಕ ಹಾಗೂ 7 ಅರ್ಧಶತಕ ಬಾರಿಸಿದ್ದಾರೆ. ಅದರೆ, ಇತ್ತೀಚಿನ ಫಾರ್ಮ್ ಪರಿಗಣಿಸಿದರೆ ಯುವರಾಜ್ ಸಿಂಗ್ ಎಲ್ಲರಿಗಿಂತ ಮುಂದಿದ್ದಾರೆ.


37 ಟೆಸ್ಟ್ ಗಳಲ್ಲಿ 1775 ರನ್ ಗಳನ್ನು 34.80 ರನ್ ಸರಾಸರಿಯಂತೆ ಗಳಿಸಿರುವ ಯುವರಾಜ್ ಸಿಂಗ್ ಕೂಡಾ ಟೆಸ್ಟ್ ನಲ್ಲಿ ಖಾಯಂ ಸ್ಥಾನ ಪಡೆಯುವಲ್ಲಿ ಸತತವಾಗಿ ವಿಫಲರಾಗಿದ್ದಾರೆ.

ಸುಮಾರು 9 ವರ್ಷಗಳ ಕಾಲಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 3 ಶತಕ ಹಾಗೂ 10 ಅರ್ಧ ಶತಕ ಬಾರಿಸಿರುವ ಯುವರಾಜ್ ಸಿಂಗ್ ಈಗ ಹೆಚ್ಚಿನ ಹುಮ್ಮಸ್ಸಿನಿಂದ ದೀರ್ಘಕಾಲ ಪಂದ್ಯ ಆಡಲು ಸಿದ್ಧ ಎಂದು ಸಾಬೀತು ಮಾಡಿದ್ದಾರೆ.

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅದ್ಭುತವಾಗಿ ಆಡಿ ದ್ವಿಶತಕ ಬಾರಿಸಿದ ಯುವರಾಜ್ ಸಿಂಗ್ ಸಹಜವಾಗಿ ನಂ.6 ಸ್ಥಾನದಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ.

ಈ ನಡುವೆ ಗೌತಮ್ ಗಂಭೀರ್ ಹಾಗೂ ವೀರೆಂದರ್ ಸೆಹ್ವಾಗ್ ಅವರ ಆರಂಭಿಕ ಜೋಡಿ ಕೂಡಾ ಕಳಪೆ ಪ್ರದರ್ಶನ ಮುಂದುವರೆಸಿದ್ದು, ಮನೋಜ್ ತಿವಾರಿಯನ್ನು ಆಯ್ಕೆ ಮಾಡಿ ಆರಂಭಿಕ ಸ್ಥಾನ ತುಂಬುವಂತೆ ಕೇಳಿಕೊಂಡರೂ ಅಚ್ಚರಿಯೇನಿಲ್ಲ.

ಅದರೂ, ನಂ.6ನೇ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರನಿಗಾಗಿ ಹುಡುಕಾಟ ಇನ್ನೂ ಜಾರಿಯಲ್ಲಿದೆ. ನವೆಂಬರ್ 5 ರಂದು ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆಮಾಡಲಿದೆ. ಯಾರಿಗೆ ಅದೃಷ್ಟ ಒಲಿಯುತ್ತದೋ ಕಾದು ನೋಡೋಣ..

Story first published:  Wednesday, October 31, 2012, 14:29 [IST]
English summary
After scoring a magnificent 93 for India A in the first innings of the tour match against England at Mumbai on Tuesday, Bengal all-rounder Manoj Tiwary has also made his intentions clear, as he has also joined the race to grab the No 6 spot in Tests.
ಅಭಿಪ್ರಾಯ ಬರೆಯಿರಿ