Englishहिन्दीമലയാളംதமிழ்తెలుగు

ಭಾರತ ಗೆದ್ರೆ ಹಬ್ಬದೂಟ, ಸೋತ್ರೆ ಮನೆಗೆ ಓಟ

Posted by:
Updated: Monday, October 1, 2012, 22:59 [IST]
 

ಭಾರತ ಗೆದ್ರೆ ಹಬ್ಬದೂಟ, ಸೋತ್ರೆ ಮನೆಗೆ ಓಟ
 

ಕೊಲಂಬೋ, ಅ.1: ಐಸಿಸಿ ವಿಶ್ವ ಟಿ20 ಸೂಪರ್ 8 ನಲ್ಲಿ ಅಸಲಿ ಮಜಾ ನೀಡಿದ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಈಗ ಇತಿಹಾಸ. ರಾವಣನ ನಾಡು ಲಂಕೆಯಲ್ಲಿ ಗಾಂಧಿ ತಾತಾನ ಬರ್ಥ್ ಡೇ ದಿನ ಧೋನಿ ಹುಡುಗರು ಗೆದ್ದರೆ ಬರ್ಥ್ ಡೇ ಪಾರ್ಟಿ ಇಲ್ಲಾಂದ್ರೆ ತಿಪಟೂರಿನ ಚಿಪ್ಪು ಗ್ಯಾರಂಟಿ.

ಸಪ್ಪೆಯಾಗಿದ್ದ ಚೆಂಡನ್ನು ಯಾರೋ ಜೋರಾಗಿ ಗೋಡೆಗೆ ಎಸೆದಾಗ ಪುಟಿದು ಹಿಂದಕ್ಕೆ ಸಿಡಿಯುವಂತೆ ಪಾಕಿಸ್ತಾನದ ಮೇಲೆ ಭಾರತ ಸಿಡಿದು ಪೌರುಷ ತೋರಿಸಿತ್ತು. ಆದರೆ, ದಕ್ಷಿಣ ಆಫ್ರಿಕಾ ಮೇಲೆ ಬೇರೆಯದೆ ರಣತಂತ್ರದ ಅಗತ್ಯವಿದೆ.

ಪಾಕ್ ಪಂದ್ಯದ ಮೇಲೆ ಆಧಾರ: ಧೋನಿ ನಾಳೆ ರಾತ್ರಿ ಟಾಸ್ ಗೆ ಹೋಗುವ ಹೊತ್ತಿಗೆ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪಂದ್ಯದ ಫಲಿತಾಂಶ ಹೊರಬಿದ್ದಿರುತ್ತದೆ. ಆಸ್ಟ್ರೇಲಿಯಾ ಏನಾದರೂ ಪಾಕಿಸ್ತಾನಕ್ಕೆ ಹೊಡೆದರೆ ಭಾರತದ ಪಾಲಿಗೆ ಸೆಮಿಸ್ ಪ್ರವೇಶ ಸುಲಭವಾಗಲಿದೆ.ಆಗ ರನ್ ಸರಾಸರಿ ಲೆಕ್ಕಾಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ದಕ್ಷಿಣ ಆಫ್ರಿಕಾ ಮೇಲೆ ಗೆದ್ದರೆ ಸಾಕು.

ಒಂದು ವೇಳೆ ಆಸ್ಟ್ರೇಲಿಯಾವನ್ನು ಪಾಕಿಸ್ತಾನ ತಂಡ ಸೋಲಿಸಿದರೆ, ಟೀಂ ಇಂಡಿಯಾ ನಾಯಕ ಧೋನಿ, ಕೋಚ್ ಡಂಕನ್ ಫ್ಲಚರ್ ಸೇರಿದಂತೆ ದೊಡ್ಡ ತಲೆಗಳು ಕ್ಯಾಕುಲೇಟರ್ ಹಿಡಿದು ಕೊಂಡು ಸಿಕ್ಕ ಸಮಯದಲ್ಲೇ ಲೆಕ್ಕಾಚಾರ ಹಾಕಿ ರನ್ ಸರಾಸರಿ ಹೆಚ್ಚಿಸಿಕೊಂಡು ಆಫ್ರಿಕನ್ನರ ಮೇಲೆ ಗೆಲ್ಲುವುದು ಹೇಗೆ ಎನ್ನುವ ರಣತಂತ್ರ ರೂಪಿಸಬೇಕಿದೆ.

ಭಾರತಕ್ಕೆ ವೇಗಿಗಳ ಭಯ: ಟೀಂ ಇಂಡಿಯಾಕ್ಕೆ ತನ್ನ ಪಡೆಯ ಜಹೀರ್ ಖಾನ್, ಇರ್ಫಾನ್, ಬಾಲಾಜಿ ಆಟದ ಬಗ್ಗೆ ಇರುವ ಕಾಳಜಿಯಂತೆ ಬ್ಯಾಟ್ಸ್ ಮನ್ ಗಳಿಗೆ ಜಗದೇಕ ವೇಗಿ ಡೇಲ್ ಸ್ಟೈನ್ ಹಾಗೂ ಮಾರ್ನೆ ಮಾರ್ಕೆಲ್ ಬೌಲಿಂಗ್ ಎದುರಿಸುವುದನ್ನು ಕಲಿಯಬೇಕಿದೆ. ಪೀಟರ್ಸನ್, ಬೋಥಾ ಸ್ಪಿನ್ ಕೂಡಾ ಕಾಡಬಲ್ಲುದು.

ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಸ್ಪಿನ್ ದಾಳಿಗೆ ಹೆದರುತ್ತಾರೆ ಎಂಬ ಅಂಶ ಒಂದು ಬಿಟ್ಟರೆ ಯಾವುದೇ ನ್ಯೂನ್ಯತೆ ಕಾಣುತ್ತಿಲ್ಲ. ಎಬಿ ಡಿವೆಲಿಯರ್ಸ್, ಆಲ್ಬಿ ಮಾರ್ಕೆಲ್ ಐಪಿಎಲ್ ನಲ್ಲಿ ಕಲಿತ ಪಾಠ ಇಲ್ಲಿ ಅಳವಡಿಸಿದರೆ ಅಶ್ವಿನ್, ಭಜ್ಜಿ ಎದುರಿಸುವುದು ಅವರಿಗೆ ಕಷ್ಟವಾಗಲಿಕ್ಕಿಲ್ಲ.

2007ರ ನಂತರ ಮತ್ತೊಮ್ಮೆ ಸೆಮಿಫೈನಲ್ ಕನಸು ಕಾಣುತ್ತಿರುವ ಧೋನಿ ಹುಡುಗರಿಗೆ ಯಾವ ಪಾರ್ಟಿ ಮಾಡುವ ಇಚ್ಛೆಯಿದೆಯೋ ಆಯ್ಕೆ ಅವರಿಗೆ ಬಿಟ್ಟಿದ್ದು. ತಂಡದ ಆಯ್ಕೆ ಸರಿಯಾಗಿದ್ದರೆ ಮುಂದಿನದ್ದು ಮೈದಾನದಲ್ಲಿ ಲೈವ್ ನೋಡಬಹುದು.

ಸಂಭಾವ್ಯ ತಂಡ ಭಾರತ: ಎಂಎಸ್ ಧೋನಿ, ವೀರೇಂದರ್ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರೋಹಿತ್ ಶರ್ಮ, ಇರ್ಫಾನ್ ಪಠಾಣ್, ಆರ್ ಅಶ್ವಿನ್, ಹರ್ಭಜನ್ ಸಿಂಗ್, ಜಹೀರ್ ಖಾನ್

ದಕ್ಷಿಣ ಆಫ್ರಿಕಾ: ಎಬಿ ಡಿವೆಲಿಯರ್ಸ್(ನಾಯಕ), ಹಶೀಂ ಅಮ್ಲಾ, ಜೋಹಾನ್ ಬೋಥಾ, ಜೆಪಿ ಡುಮಿನಿ, ರಿಚರ್ಡ್ ಲೆವಿ, ಅಲ್ಬಿ ಮಾರ್ಕೆಲ್, ಮಾರ್ನೆ ಮಾರ್ಕೆಲ್, ರಾಬಿನ್ ಪೀಟರ್ಸನ್, ಲೊನ್ವಾಬೊ ಸೊಸೊಬೆ, ಡೇಲ್ ಸ್ಟೈನ್, ಜಾಕ್ವಿಸ್ ಕಾಲಿಸ್

ಅಂಪೈರ್ : ಕುಮಾರ್ ಧರ್ಮಸೇನ(ಶ್ರೀಲಂಕಾ), ರಾಡ್ ಟಕರ್ (ಆಸ್ಟ್ರೇಲಿಯಾ)
ಮೂರನೇ ಅಂಪೈರ್: ಇಯಾನ್ ಗೌಲ್ಡ್ (ಇಂಗ್ಲೆಂಡ್)

ಪಂದ್ಯ ಮಂಗಳವಾರ (ಅ.2) ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ದಟ್ಸ್ ಕ್ರಿಕೆಟ್ ನಲ್ಲಿ ಲೈವ್ ಸ್ಕೋರ್, ಬಾಲ್ ಬೈ ಬಾಲ್ ಸುದ್ದಿಯನ್ನು ಪಡೆಯಿರಿ. 3.30ಕ್ಕೆ ಆಸ್ಟ್ರೇಲಿಯಾ vs ಪಾಕಿಸ್ತಾನ ಪಂದ್ಯ ಕೂಡಾ ನೋಡಲು ಮರೆಯದಿರಿ.

Story first published:  Monday, October 1, 2012, 17:39 [IST]
English summary
India brace up for another big day at ICC World Twenty20 2012. Tuesday will decide whether MS Dhoni and his men stay in Sri Lanka or pack their bags and head home.
ಅಭಿಪ್ರಾಯ ಬರೆಯಿರಿ