Englishहिन्दीമലയാളംதமிழ்తెలుగు

ಟಿ20: ಬಾಂಗ್ಲಾ ಬಗ್ಗು ಬಡಿದ ಪಾಕ್, ಸೂಪರ್ 8ಕ್ಕೆ

Posted by:
Updated: Wednesday, September 26, 2012, 0:12 [IST]
 

ಟಿ20: ಬಾಂಗ್ಲಾ ಬಗ್ಗು ಬಡಿದ ಪಾಕ್, ಸೂಪರ್ 8ಕ್ಕೆ
 

ಕೊಲಂಬೋ, ಸೆ.25: ಐಸಿಸಿ ವಿಶ್ವ ಟಿ20ಯಲ್ಲಿ ಸೂಪರ್ 8 ಪ್ರವೇಶಿಸುವ ಬಾಂಗ್ಲಾದೇಶದ ಕನಸು ನುಚ್ಚುನೂರಾಗಿದೆ. ಬಾಂಗ್ಲಾ ಒಡ್ಡಿದ್ದ 176 ರನ್ ಗಳನ್ನು ಪಾಕಿಸ್ತಾನ ಕೇವಲ ಎರಡು ವಿಕೆಟ್ ಕಳೆದು ಕೊಂಡು ಚೇಸ್ ಮಾಡಿದೆ. ಬಾಂಗ್ಲಾವನ್ನು 8 ವಿಕೆಟ್ ಗಳಿಂದ ಮಣಿಸಿದ ಪಾಕ್, ಸೂಪರ್ 8 ಹಂತಕ್ಕೇರಿದೆ.

ಪಾಕಿಸ್ತಾನದ ಆರಂಭಿಕ ಆಟಗಾರರಾದ ನಾಯಕ ಮಹಮ್ಮದ್ ಹಫೀಜ್ ಹಾಗೂ ಇಮ್ರಾನ್ ನಜೀರ್ ಭರ್ಜರಿ ಜೊತೆಯಾಟ ಮುರಿಯಲು ಬಾಂಗ್ಲಾ ವಿಫಲವಾಗಿದ್ದು ಪಂದ್ಯ ಸೋಲಲು ಕಾರಣವಾಯಿತು. [ಸೂಪರ್ 8 ಪಂದ್ಯಾವಳಿ ವೇಳಾಪಟ್ಟಿ ನೋಡಿ]

ಆರಂಭಿಕ ಆಟಗಾರ ನಜೀರ್ 36 ಎಸೆತದಲ್ಲಿ 72 ರನ್ ಚೆಚ್ಚಿದರು. ನಜೀರ್ ಮೊತ್ತದಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳಿತ್ತು. ನಾಯಕ ಹಫೀಜ್ ಕೂಡಾ 47 ಎಸೆತದಲ್ಲಿ 45 ರನ್(6 ಬೌಂಡರಿ) ಬಾರಿಸಿ ಜವಾಬ್ದಾರಿಯುತವಾಗಿ ಆಟವಾಡಿದರು. ಮೊದಲ ವಿಕೆಟ್ ಗೆ ಈ ಜೋಡಿ 124 ರನ್ ಕಲೆ ಹಾಕುತ್ತಿದ್ದಂತೆ ಬಾಂಗ್ಲಾ ಪಾಳೆಯದಲ್ಲಿ ನಿರಾಶೆಯ ಕಾರ್ಮೋಡ ಆವರಿಸಿಬಿಟ್ಟಿತ್ತು.

2 ರನ್ ಅಂತರದಲ್ಲಿ 2 ವಿಕೆಟ್ ಕಳೆದು ಕೊಂಡರೂ ಪಾಕಿಸ್ತಾನ ಆಗಲೇ ಗೆಲುವಿನ ಹಾದಿಯಲ್ಲಿತ್ತು. 22 ವರ್ಷದ ಉದಯೋನ್ಮುಖ ಎಡಗೈ ಆಟಗಾರ ನಸೀರ್ ಜಮ್ಶೆಡ್ 14 ಎಸೆತದಲ್ಲಿ 29 ರನ್(2 ಬೌಂಡರಿ, 2 ಸಿಕ್ಸರ್) ಹಾಗೂ ಕಮ್ರಾನ್ ಅಕ್ಮಲ್ 22 ರನ್ (15 ಎಸೆತ, 4 ಬೌಂಡರಿ) ಗಳಿಸಿ ಭರ್ಜರಿ ಗೆಲುವು ದಾಖಲಿಸಿದರು. ಬಾಂಗ್ಲಾ ಪರ ಅಬುಲ್ ಹಸನ್ 2 ವಿಕೆಟ್ ಕಿತ್ತರು. [ಸ್ಕೋರ್ ಕಾರ್ಡ್]

ಬಾಂಗ್ಲಾ ಇನ್ನಿಂಗ್ಸ್: ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ 12 ಎಸೆತದಲ್ಲಿ 24 ರನ್(5 ಬೌಂಡರಿ) ಬಾರಿಸಿ ಉತ್ತಮ ಆರಂಭ ಒದಗಿಸಿದರು. ಮಹಮ್ಮದ್ ಅಶ್ರಫುಲ್ 14 ರನ್ ಗಳಿಸಿ ಔಟಾದ ಮೇಲೆ ಕಣಕ್ಕಿಳಿದ ಶಕೀಬ್ ಅಲ್ ಹಸನ್ ಅದ್ಭುತ ಆಟ ಪ್ರದರ್ಶಿಸಿ ಪಂದ್ಯದ ಗತಿ ಬದಲಿಸಿದರು.

54 ಎಸೆತದಲ್ಲಿ 84 ರನ್ ಗಳಿಸಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಶಕೀಬ್ ತಡೆಯಲು ಪಾಕ್ ಬೌಲರ್ ಗಳು ಅಸಮರ್ಥರಾದರು. ವೇಗಿ ಉಮರ್ ಗುಲ್ 3 ಓವರ್ ಗಳಲ್ಲಿ 43 ರನ್ ಚೆಚ್ಚಿದ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಪಾಕಿಸ್ತಾನಕ್ಕೆ ಆತಂಕ ತಂದಿದ್ದರು.

ಶಕೀಬ್ ಗೆ ನಾಯಕ ಮುಶ್ಫಿಕರ್ ರಹೀಂ(25 ರನ್) ಉತ್ತಮ ಸಾಥ್ ನೀಡಿದರು. ನಂತರ ನಸೀರ್ 13 ಎಸೆತದಲ್ಲಿ 16 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ, ಶಕೀಬ್ ಅಲ್ ಹಸನ್ ಆಟ ಎಲ್ಲರ ಮನ ಸೆಳೆಯಿತು. ಶಕೀಬ್ 11 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಪಾಕಿಸ್ತಾನ ಪರ ಯಾಸಿರ್ ಅರಾಫತ್ 25 ರನ್ ನೀಡಿ 3 ವಿಕೆಟ್ ಗಳಿಸಿದರು. ಅಫ್ರಿದಿ, ತನ್ವೀರ್ ತಲಾ 1 ವಿಕೆಟ್ ಕಬಳಿಸಿದರು.

Story first published:  Tuesday, September 25, 2012, 22:43 [IST]
English summary
Pakistan crushed Bangladesh by eight wickets to ease into the Super Eight stage of ICC World Twenty20 2012 here in final Group D game at the ICC World Twenty20 2012 here on Tuesday(Sept.25) night.
ಅಭಿಪ್ರಾಯ ಬರೆಯಿರಿ