Englishहिन्दीമലയാളംதமிழ்తెలుగు

ಅಂಗ್ಲರನ್ನು 90ರನ್ ಗಳಿಂದ ಮಣಿಸಿದ ಭಾರತ

Posted by:
Updated: Friday, October 12, 2012, 15:24 [IST]
 

ಅಂಗ್ಲರನ್ನು 90ರನ್ ಗಳಿಂದ ಮಣಿಸಿದ ಭಾರತ
 

ಕೊಲಂಬೋ, ಸೆ.23: ಭಾರತ ತಂಡ ಒಡ್ಡಿದ್ದ 171 ರನ್ ಮೊತ್ತದ ಹಿಂದೆ ಬಿದ್ದ ಇಂಗ್ಲೆಂಡ್ ತಂಡ ಹರ್ಭಜನ್ ಸಿಂಗ್ ಹಾಗೂ ಪಿಯೂಷ್ ಚಾವ್ಲಾ ಸ್ಪಿನ್ ಮೋಡಿಗೆ ಸಿಲುಕಿ ವಿಲವಿಲ ಒದ್ದಾಡಿಬಿಟ್ಟಿತು. ಗೆಲ್ಲುವ ಗುರಿ ಹಾಗಿರಲಿ, ವಿಕೆಟ್ ಉಳಿಸಿಕೊಳ್ಳಲು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಸರ್ವಪ್ರಯತ್ನಪಟ್ಟರೂ ಆಗದೆ, ಅಂತಿಮವಾಗಿ 14.4 ಓವರ್ ಗಳಲ್ಲಿ 80 ರನ್ ಗಳಿಗೆ ಆಲೌಟ್ ಆದರು.

ಆರ್ ಅಶ್ವಿನ್ ಅನುಪಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದ ಹರ್ಭಜನ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದರು. ಭಜ್ಜಿ ಎಸೆತಗಳಿಗೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಬಳಿ ಉತ್ತರವಿರಲಿಲ್ಲ. 4 ಓವರ್ ನಲ್ಲಿ 2 ಮೇಡನ್ ಹಾಕಿ 12 ರನ್ನಿತ್ತು 4 ವಿಕೆಟ್ ಪಡೆದ ಹರ್ಭಜನ್ ತಮ್ಮ ಆಯ್ಕೆ ಸಮರ್ಥಿಸಿಕೊಂಡರು. [ಸ್ಕೋರ್ ಕಾರ್ಡ್]

ಪಿಯೂಷ್ ಚಾವ್ಲಾ ಕೂಡಾ ಉತ್ತಮ ಪ್ರದರ್ಶನ ನೀಡಿ 15 ರನ್ ನೀಡಿ 2 ವಿಕೆಟ್ ಗಳಿಸಿದರು. ಇರ್ಫಾನ್ ಕೂಡಾ 2 ವಿಕೆಟ್ ಕಬಳಿಸಿದರು.

ಇಂಗ್ಲೆಂಡ್ ಆರಂಭ ಅತ್ಯಂತ ಕಳಪೆಯಾಗಿತ್ತು. ಅಲೆಕ್ಸ್ ಹಾಲ್ಸ್ ಮೊದಲ ಓವರ್ ನಲ್ಲೇ ಪಠಾಣ್ ಗೆ ಬೋಲ್ಡ್ ಆದರು. ಉತ್ತಮ ಫಾರ್ಮ್ ನಲ್ಲಿರುವ ಲೂಕ್ ರೈಟ್ ಕೂಡಾ ಪಠಾಣ್ ಗೆ ಬಲಿಯಾದಾಗ ಇಂಗ್ಲೆಂಡ್ ತಂಡದ ಮೊತ್ತ 18 ದಾಟಿರಲಿಲ್ಲ.

ಇನ್ನೊಂದೆಡೆ ವಿಕೆಟ್ ಕೀಪರ್ ಕೀಸ್ವೆಟರ್ ಉತ್ತಮ ಹೋರಾಟ ಪ್ರದರ್ಶಿಸಿದರು. ಈ ಸಮಯದಲ್ಲಿ ದಾಳಿಗಿಳಿದ ಹರ್ಭಜನ್ ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿಬಿಟ್ಟರು. ಸಿಕ್ಸ್, ಬೌಂಡರಿ ಸಿಡಿಸುತ್ತಿದ್ದ ಕೀಸ್ವೆಟರ್ ಕೊನೆಗೂ ಚಾವ್ಲಾ ಸ್ಪಿನ್ ಗೆ ತಲೆಬಾಗಿದರು.

ಕೀಸ್ವೆಟರ್ 25 ಎಸೆತದಲ್ಲಿ 35ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು. ಬಟ್ಲರ್ 11ರನ್, ಡೆರ್ನ್ ಬಾಕ್ 12 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು 10 ರನ್ ಗಡಿ ದಾಟಲಿಲ್ಲ. ರವಿ ಬೋಪಾರಾ, ಕೆವಿನ್ ಪೀಟರ್ಸನ್ ಇಲ್ಲದೆ ಸ್ಪಿನ್ ಆಡಬಲ್ಲ ಸಮರ್ಥ ಬ್ಯಾಟ್ಸ್ ಮನ್ ಗಳ ಕೊರತೆ ಇಂಗ್ಲೆಂಡ್ ಕ್ರಮಾಂಕದಲ್ಲಿ ಎದ್ದು ಕಾಣುತ್ತಿತ್ತು.

ಭಾರತದ ಇನ್ನಿಂಗ್ಸ್ : ವೀರೇಂದರ್ ಸೆಹ್ವಾಗ್ ಇಲ್ಲದೆ ಇರ್ಫಾನ್ ಪಠಾಣ್ ಜೊತೆ ಕಣಕ್ಕಿಳಿದ ಗಂಭೀರ್ 38 ಎಸೆತದಲ್ಲಿ 45 ರನ್ (5 ಬೌಂಡರಿ) ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಪಠಾಣ್ ಕೇವಲ 8 ಎಸೆತದಲ್ಲಿ 8 ರನ್ ಗಳಿಸಿ ಪೆವಿಲಿಯನ್ ಮರಳಿದ ಮೇಲೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಭರ್ಜರಿ ಆಟವಾಡಿದರು. 32 ಎಸೆತದಲ್ಲಿ 40 ರನ್ (6 ಬೌಂಡರಿ) ಚೆಚ್ಚಿ ಗಂಭೀರ್ ಜೊತೆಗೂಡಿ ಮೊತ್ತ ಹೆಚ್ಚಿಸಿದರು.

ರೋಹಿತ್ ಶರ್ಮ ಅದ್ಭುತ ಆಟ ಪ್ರದರ್ಶಿಸಿ 33 ಎಸೆತದಲ್ಲಿ 55 ರನ್(5 ಬೌಂಡರಿ, 1ಸಿಕ್ಸ್) ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು.

ಇಂಗ್ಲೆಂಡ್ ಪರ ಫಿನ್ 2 ವಿಕೆಟ್ ಪಡೆದರೆ, ಜೇಡ್ ಡೆರ್ನ್ ಬಾಕ್ ಹಾಗೂ ಸ್ವಾನ್ ತಲಾ 1 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಭಾರತ ತಂಡ 4 ಅಂಕಗಳೊಂದಿಗೆ ವಿಶ್ವ ಟಿ 20 ಎ ಗುಂಪಿನ ಅಗ್ರಸ್ಥಾನ ಪಡೆದಿದೆ. ಇಂಗ್ಲೆಂಡ್ ತಂಡ 2ನೇ ಸ್ಥಾನ ಪಡೆದು ಸೂಪರ್ 8 ಹಂತಕ್ಕೇರಿದೆ.

Story first published:  Sunday, September 23, 2012, 22:33 [IST]
English summary
Harbhajan Singh is back. What a way to make your international return. The offspinner took 4/12 to power India to a commanding 90-run victory over England at the ICC World Twenty20 2012 at the R Premadasa Stadium here on Sunday(Sept 23) night.
ಅಭಿಪ್ರಾಯ ಬರೆಯಿರಿ