Englishहिन्दीമലയാളംதமிழ்తెలుగు

ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ, ಕೆಪಿ ಔಟ್

Posted by:
Published: Tuesday, September 18, 2012, 18:11 [IST]
 

ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ, ಕೆಪಿ ಔಟ್
 

ಲಂಡನ್, ಸೆ.18: ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಮತ್ತೊಮ್ಮೆ ಪ್ರತಿಭಾವಂತ ಆಟಗಾರ ಕೆವಿನ್ ಪೀಟರ್ಸನ್ ಗೆ ಹೊಡೆತ ನೀಡಿದೆ. ಮುಂಬರುವ ಭಾರತ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದ್ದು, ಕೆವಿನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ಕಪ್ತಾನ ಆಂಡ್ರೂ ಸ್ಟ್ರಾಸ್ ಅವರನ್ನು ಟೀಕಿಸಿ ದಕ್ಷಿಣ ಆಫ್ರಿಕಾದ ಆಟಗಾರರಿಗೆ ಕೆಲವು ಸಂದೇಶಗಳನ್ನು ಕೆವಿನ್ ಕಳುಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದ ಇನ್ನೂ ಇತ್ಯರ್ಥವಾಗದ ಕಾರಣ ಕೆವಿನ್ ಅವರಿಗೆ ಆಯ್ಕೆದಾರರ ಕೃಪೆ ಇನ್ನೂ ಸಿಕ್ಕಿಲ್ಲ.

ನಂತರ ನಾಯಕ ಆಂಡ್ರೂ ಸ್ಟ್ರಾಸ್ ನಿವೃತ್ತಿ ಘೋಷಿಸಿದ್ದರು. ಕೆವಿನ್ ಪೀಟರ್ಸನ್ ಸ್ವಾಭಿಮಾನ ಬಲಿ ಕೊಟ್ಟು ಬೋರ್ಡ್ ಮುಂದೆ ನಿಂತು ಕ್ಷಮೆಯಾಚಿಸಿದ್ದರು. ಆದರೆ, ಇದ್ಯಾವುದನ್ನು ಪರಿಗಣಿಸದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಹಠಮಾರಿತನ ಮುಂದುವರೆಸಿ ಕೆಪಿಯನ್ನು ತಂಡದಿಂದ ಹೊರಗಿಟ್ಟಿದೆ.

ಕೆವಿನ್ ಪೀಟರ್ಸನ್ ಹಾಗೂ ಸ್ಟ್ರಾಸ್ ಅನುಪಸ್ಥಿತಿಯಲ್ಲಿ ಭಾರತದ ವಿರುದ್ಧ ಟೆಸ್ಟ್ ಆಡಲಿರುವ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಶಕ್ತಿ ಕುಂದಿದೆ ಎಂದರೆ ತಪ್ಪಾಗಲಾರದು.

ನವೆಂಬರ್ 15, 2012ರಿಂದ ಜನವರಿ 27, 2013ರ ತನಕ ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡ ಈ ಅವಧಿಯಲ್ಲಿ 4 ಟೆಸ್ಟ್, 2 ಟಿ20 ಹಾಗೂ 5 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ರವಿ ಬೋಪಾರಾ, ಜೇಮ್ಸ್ ಟೇಲರ್ ರನ್ನು ಕೂಡಾ ಟೆಸ್ಟ್ ತಂಡದಿಂದ ಹೊರಗಿಡಲಾಗಿದೆ. ಮಾರ್ಗನ್ ಅವರನ್ನು ಕೈ ಬಿಡಲಾಗಿದೆ.

ಇಂಗ್ಲೆಂಡ್ ಟೆಸ್ಟ್ ತಂಡ: ಅಲೆಸ್ಟರ್ ಕುಕ್(ನಾಯಕ) ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೊ, ಇಯಾನ್ ಬೆಲ್, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ನಿಕ್ ಕಾಂಪ್ಟನ್(ಹೊಸ ಮುಖ), ಸ್ಟೀವ್ ಫಿನ್, ಗ್ರಹಾಂ ಓನಿಯನ್ಸ್(ಹೊಸ ಮುಖ), ಮಾಂಟಿ ಪನೇಸರ್, ಸಮಿತ್ ಪಟೇಲ್, ಮ್ಯಾಟ್ ಪ್ರಿಯರ್, ಜೊ ರೂಟ್(ಹೊಸ ಮುಖ), ಗ್ರಹಾಂ ಸ್ವಾನ್, ಜೊನಾಥನ್ ಟ್ರಾಟ್

ಶ್ರೀಲಂಕಾದಲ್ಲಿ ಸೆ. 18 ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡದಿಂದ ಕೆವಿನ್ ಪೀಟರ್ಸನ್ ಕೈಬಿಡಲಾಗಿದ್ದು, ವೀಕ್ಷಕ ವಿವರಣೆಗಾರರಾಗಿ ಕೆಪಿ ಕಾಣಿಸಿಕೊಳ್ಳಲಿದ್ದಾರೆ.

2010ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ-20 ವಿಶ್ವಕಪ್ ನ್ನು ಇಂಗ್ಲೆಂಡ್ ಗೆದ್ದಾಗ ಪೀಟರ್ಸನ್ ಸರಣಿಶ್ರೇಷ್ಠರಾಗಿದ್ದರು.

ಕೆಪಿ ತೆಗೆದು ಹಾಕಿದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟೆಸ್ಟ್ ನ್ನು ಕಳೆದುಕೊಂಡು ಇಂಗ್ಲೆಂಡ್ ಟೆಸ್ಟ ಸರಣಿಯಲ್ಲಿ ಸೋಲುಂಡಿತ್ತು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಕೂಡ ಕೆವಿನ್ ಕೈಬಿಡಲಾಗಿದೆ.

31 ವರ್ಷದ ದಕ್ಷಿಣ ಆಫ್ರಿಕಾ ಮೂಲದ ಕೆವಿನ್ ಪೀಟರ್ಸನ್ 127 ಏಕದಿನ ಕ್ರಿಕೆಟ್ ಹಾಗೂ 36 ಟಿ20 ಪಂದ್ಯಗಳನ್ನಾಡಿದ್ದಾರೆ.

2004ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಕೆಪಿ,. ಏಕದಿನ ಕ್ರಿಕೆಟ್ ನಲ್ಲಿ 42 ರನ್ ಸರಾಸರಿಯಂತೆ 4184 ರನ್ ಗಳಿಸಿದ್ದಾರೆ.

21 ಫೆಬ್ರವರಿ 2012 ರಲ್ಲಿ ಪಾಕಿಸ್ತಾನದ ವಿರುದ್ಧ ಕೊನೆ ಏಕದಿನ ಪಂದ್ಯವಾಡಿದ 24 ನಂಬರ್ ಇರುವ ಜೆರ್ಸಿ ಧರಿಸುವ 6 ಅಡಿ 4 ಇಂಚು ಎತ್ತರದ ಅಜಾನುಬಾಹು ಕೆಪಿ ಇದ್ದರೆ ತಂಡಕ್ಕೆ ಆನೆಬಲ ಇದ್ದಂತೆ.
9 ಶತಕ, 23 ಅರ್ಧಶತಕ ಸಿಡಿಸಿದ್ದಾರೆ. 130 ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ ಕೆಪಿ ಏಕದಿನ ಕ್ರಿಕೆಟ್ ನಲ್ಲಿ ಕೆಲ ದಾಖಲೆಗಳನ್ನು ಹೊಂದಿದ್ದಾರೆ.

English summary
England and Wales Cricket Board continue to ignore Kevin Pietersen as he has not been picked for India tour, while Joe Root and Nick Compton have been included in the Test squad.
ಅಭಿಪ್ರಾಯ ಬರೆಯಿರಿ