Englishहिन्दीമലയാളംதமிழ்తెలుగు

ಸಮರಭ್ಯಾಸ: ಪಾಕಿಗಳ ವಿರುದ್ಧ ಸೋಲುಂಡ ಧೋನಿ ಪಡೆ

Posted by:
Updated: Tuesday, September 18, 2012, 9:09 [IST]
 

ಸಮರಭ್ಯಾಸ: ಪಾಕಿಗಳ ವಿರುದ್ಧ ಸೋಲುಂಡ ಧೋನಿ ಪಡೆ
 

ಕೊಲಂಬೋ, ಸೆ.17:ಟೀಂ ಇಂಡಿಯಾ ಒಡ್ಡಿರುವ 186 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಕಮ್ರಾನ್ ಅಕ್ಮಲ್ ಉತ್ತಮ ಆಟದಿಂದ ಗೆಲುವು ಸಾಧಿಸಿದೆ. ಆರ್ ಅಶ್ವಿನ್ ಸ್ಪಿನ್ ದಾಳಿಗೆ ಪಾಕಿಸ್ತಾನ ತತ್ತರಿಸಿದರೂ ನಂತರ ಚೇತರಿಸಿಕೊಂಡು ರೋಚಕ ಅಂತ್ಯ ಕಂಡಿದೆ. ಟೀಂ ಇಂಡಿಯಾವನ್ನು ಪಾಕಿಸ್ತಾನ 5 ವಿಕೆಟ್ ಗಳಿಂದ ಮಣಿಸಿದೆ.

ನಿರಂತರವಾಗಿ ವಿಕೆಟ್ ಕಳೆದುಕೊಂಡರೂ ಧೃತಿಗೆಡದೆ ಅದ್ಭುತ ಆಟ ಪ್ರದರ್ಶಿಸಿದ ಕಮ್ರಾನ್ ಅಕ್ಮಲ್ 92(50 ಎಸೆತ, 5 ಬೌಂಡರಿ, 6 ಸಿಕ್ಸರ್) ಪಾಕಿಸ್ತಾನವನ್ನು ಗೆಲುವಿನ ದಡದತ್ತ ಮುಟ್ಟಿಸಿದ್ದಾರೆ. ಅಕ್ಮಲ್ ಗೆ ಸಾಥ್ ನೀಡಿದ ಶೋಯಿಬ್ ಮಲ್ಲಿಕ್ 18 ಎಸೆತದಲ್ಲಿ 37 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.

ಆರಂಭಿಕ ಆಟಗಾರ ನಾಯಕ ಮಹಮ್ಮದ್ ಹಫೀಜ್ 29 ಎಸೆತದಲ್ಲಿ 38 ರನ್(4 ಬೌಂಡರಿ, 1 ಸಿಕ್ಸರ್) ಗಳಿಸಿ ಉತ್ತಮ ಆರಂಭ ಒದಗಿಸಿದರು. ಇಮ್ರಾನ್ ನಜೀರ್ ಕೇವಲ 13 ರನ್(11 ಎಸೆತ, 1 ಬೌಂಡರಿ) ಗಳಿಸಿದರು. ತಂಡದ ಮೊತ್ತ 30 ರನ್ ಆಗಿದ್ದಾಗ ಅಶ್ವಿನ್ ಬೌಲಿಂಗ್ ನಲ್ಲಿ ನಜೀರ್ ಔಟಾದರು.

ನಂತರ ಬಂದ ನಸೀರ್ ಅಹ್ಮದ್ ಶೂನ್ಯ ಸುತ್ತಿ ರನೌಟ್ ಆದರೆ, ಮತ್ತೊಮ್ಮೆ ಅಶ್ವಿನ್ ಬಲಗೆ ಹಫೀಜ್ ಬಲಿಯಾದಾಗ ಪಾಕ್ ಮೊತ್ತ 84-3 ರನ್ ಆಗಿತ್ತು.

ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಏಕಾಂಗಿ ಹೋರಾಟ ನಡೆಸಿದರು. ಶಹೀರ್ ಅಫ್ರಿದಿ 0, ಉಮರ್ ಅಕ್ಮಲ್ 2 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು.

ಭಾರತದ ಇನ್ನಿಂಗ್ಸ್ : ವಿಶ್ವ ಟಿ20 ಅರಂಭಕ್ಕೂ ಮುನ್ನ ಸೋಮವಾರ ನಡೆದಿರುವ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 186 ರನ್ ಗಳ ಗುರಿ ನೀಡಲಾಗಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿದೆ.

67 ಎಸೆತದಲ್ಲಿ 100 ರನ್ ಜೊತೆಯಾಟ ಪೂರೈಸಿದ ರೋಹಿತ್ ಹಾಗೂ ವಿರಾಟ್ ಜೋಡಿಯನ್ನು ಮುರಿಯಲು ಪಾಕ್ ಬೌಲರ್ ಗಳು ತಿಣುಕಾಡಿದರೂ 18ನೇ ಓವರ್ ತನಕ ಯಶ ಸಿಗಲಿಲ್ಲ. 40 ಎಸೆತದಲ್ಲಿ 56 ರನ್ (6 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ರೋಹಿತ್ ಶರ್ಮ ಅಜ್ಮಲ್ ಗೆ ಬೋಲ್ಡ್ ಆಗುವ ಮೂಲಕ ಜೊತೆಯಾಟ ಕೊನೆಗೊಂಡಿತು.

ನಂತರ ಬಂದ ಸಿಕ್ಸರ್ ವೀರ ಯುವರಾಜ್ ಸಿಂಗ್ ಗೆ ಸಿಕ್ಕಿದ್ದು 5 ಎಸೆತ ಮಾತ್ರ 4 ರನ್ ಗಳಿಸಿ ಯುವಿ ಔಟಾಗದೆ ಉಳಿದರೆ, ಪಂದ್ಯದ ಉತ್ತಮ ಆಟಗಾರ ಎನಿಸಿದ ಕೊಹ್ಲಿ 47 ಎಸೆತದಲ್ಲಿ 75ರನ್(7ಬೌಂಡರಿ, 2 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು. ಪಾಕ್ ಪರ ಅಜ್ಮಲ್ 2, ಗುಲ್ 1 ವಿಕೆಟ್ ಪಡೆದರು.

ವಿಶ್ವ ಟಿ20 ಅರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಸೋಮವಾರ(ಸೆ.17) ಕಾದಾಟಕ್ಕೆ ಇಳಿದಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಬ್ಯಾಟಿಂಗ್ ಆರಂಭಿಸಿದ ಗೌತಮ್ ಗಂಭೀರ್ ಹಾಗೂ ವೀರೆಂದರ್ ಸೆಹ್ವಾಗ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಗಂಭೀರ್ ಕೇವಲ 10 ರನ್(16 ಎಸೆತ, 2 ಬೌಂಡರಿ) ಗಳಿಸಿ ತಂಡದ ಮೊತ್ತ 41 ರನ್ ಆಗಿದ್ದಾಗ ಔಟಾದರು.

ಇದರ ಬೆನ್ನಲ್ಲೇ 26 ರನ್ (14 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ಸೆಹ್ವಾಗ್ ಅವರು ಕೂಡಾ ತಂಡದ ಮೊತ 45 ಆಗಿದ್ದಾಗ ಔಟಾಗಿ ಪೆವಿಲಿಯನ್ ಗೆ ತೆರಳಿದರು. ಗಂಭೀರ್ ವಿಕೆಟ್ ಗುಲ್ ಪಾಲಾದರೆ, ಸೆಹ್ವಾಗ್ ಅಜ್ಮಲ್ ಗೆ ಬಲಿಯಾದರು.

ವಿಶ್ವ ಟಿ20 ಪಂದ್ಯಗಳು ಹಂಬನ್ಟೋಟಾದಲ್ಲಿ ಸೆ.18 ರಿಂದ ವಿದ್ಯುಕ್ತವಾಗಿ ಆರಂಭವಾಗಲಿದೆ. ಭಾರತ ತಂಡ 'ಎ' ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನದ ಜೊತೆ ಇದೆ. ಪಾಕಿಸ್ತಾನ ತಂಡ ಡಿ ಗುಂಪಿನಲ್ಲಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಜೊತೆ ಇದೆ.

ಭಾರತ : ಎಂಎಸ್ ಧೋನಿ, ವೀರೇಂದರ್ ಸೆಹ್ವಾಗ್, ಗೌತಮ್ ಗಂಭೀರ್, ರೋಹಿತ್ ಶರ್ಮ, ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಜಹೀರ್ ಖಾನ್, ಆರ್ ಅಶ್ವಿನ್, ಲಕ್ಷ್ಮಿಪತಿ ಬಾಲಾಜಿ

ಪಾಕಿಸ್ತಾನ: ಮಹಮ್ಮದ್ ಹಫೀಜ್, ಶಹೀದ್ ಅಫ್ರಿದಿ, ಇಮ್ರಾನ್ ನಜೀರ್, ಉಮರ್ ಅಕ್ಮಲ್, ಕರ್ಮಾನ್ ಅಕ್ಮಲ್, ಶೋಯಿಬ್ ಮಲ್ಲಿಕ್, ನಸಿರ್ ಜಮ್ಶೆಡ್, ಉಮರ್ ಗುಲ್, ಸೋಹೈಲ್ ತನ್ವೀರ್, ಮಹಮ್ಮದ್ ಸಮಿ

Story first published:  Monday, September 17, 2012, 15:10 [IST]
English summary
Fine half centuries from Virat Kohli and Rohit Sharma powered India to 185/3 in 20 overs against Pakistan in a warm-up match here on Monday.
ಅಭಿಪ್ರಾಯ ಬರೆಯಿರಿ