Englishहिन्दीമലയാളംதமிழ்తెలుగు

ಐಸಿಸಿ ಪ್ರಶಸ್ತಿ : ಸಂಗಕ್ಕಾರಗೆ 3, ಕೊಹ್ಲಿಗೆ 1

Posted by:
Updated: Sunday, September 16, 2012, 15:39 [IST]
 

ಕೊಲೊಂಬೊ, ಸೆ.16: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾರತದ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕೊಲಂಬೊದಲ್ಲಿ ಶನಿವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಮಾರ ಸಂಗಕ್ಕಾರ ಒಟ್ಟು 3 ಪ್ರಶಸ್ತಿ ಪಡೆದು ಗಮನ ಸೆಳೆದರು.

ಐಸಿಸಿ ಪ್ರಶಸ್ತಿ : ಸಂಗಕ್ಕಾರಗೆ 3, ಕೊಹ್ಲಿಗೆ 1

ಭಾರತದ ಉದಯೋನ್ಮುಖ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕಳೆದ ಋತುವಿನಲ್ಲಿ ಆಡಿದ 31 ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 66.65 ರನ್ ಸರಾಸರಿಯಂತೆ 1733 ರನ್ ಕಲೆಹಾಕಿದ್ದಾರೆ. ಗೆಲುವಿನ ಗುರಿ ಬೆನ್ನಟ್ಟುವಲ್ಲಿ ಬೇಕಾದ ಬ್ಯಾಟಿಂಗ್ ಚಾಕಚಾಕ್ಯತೆ ಕರಗತ ಮಾಡಿಕೊಂಡಿರುವ ಕೊಹ್ಲಿ ಎಂಟು ಶತಕ ಸಿಡಿಸಿದ್ದಾರೆ.

50 ಓವರ್‌ಗಳ 90 ಪಂದ್ಯಗಳಲ್ಲಿ ಕೊಹ್ಲಿ ಇದುವರೆಗೆ 3886 ರನ್ ಗಳಿಸಿದ್ದಾರೆ. 10 ಟೆಸ್ಟ್ ಪಂದ್ಯಗಳಲ್ಲಿ 703 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಟೆಸ್ಟ್‌ನಲ್ಲಿ 2 ಶತಕ ಹಾಗೂ 5 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. 116 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ವಿರಾಟ್ ಕೊಹ್ಲಿ ತಂಡದ ಒಡನಾಡಿ, ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿರುವುದು ವಿಶೇಷ. ಶ್ರೀಲಂಕಾದ ಲಸಿತ್ ಮಾಲಿಂಗ ಮತ್ತು ಕುಮಾರ ಸಂಗಕ್ಕರ ಕೂಡಾ ಕೊಹ್ಲಿಗೆ ತೀವ್ರ ಪೈಪೋಟಿ ನೀಡಿದ್ದರು.

ವೆಸ್ಟ್ ಇಂಡೀಸ್‌ನ ಸ್ಪಿನ್ ಮಾಂತ್ರಿಕ ಸುನೀಲ್ ನಾರಾಯಣ್ ಐಸಿಸಿಯ ಉದಯೋನ್ಮುಖ ಕ್ರಿಕೆಟಿಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾರಾಯಣ್ ಪ್ರಸ್ತುತ ವರ್ಷ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ 12 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಪ್ರಶಸ್ತಿ ಸ್ಪರ್ಧಾ ಕಣದಲ್ಲಿ ಇದ್ದ ಇತರರು- ನ್ಯೂಜಿಲೆಂಡಿನ ಡೌಗ್ ಬ್ರೇಸ್‌ವೆಲ್, ಶ್ರೀಲಂಕಾ ದ ದಿನೇಶ್ ಚಂಡಿಮಲ್ ಹಾಗೂ ಆಸ್ಟ್ರೇಲಿಯಾದ ಜೇಮ್ಸ್ ಪ್ಯಾಟಿಸನ್.

ಐಸಿಸಿ ಏಕದಿನ ತಂಡಕ್ಕೆ ಧೋನಿ ನಾಯಕ: ಐಸಿಸಿ ಪ್ರಕಟಿಸಿರುವ 2011-12ನೇ ಸಾಲಿನ ವರ್ಷದ ಏಕದಿನ ತಂಡದ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ಆಯ್ಕೆಯಾಗಿದ್ದಾರೆ. ಉಳಿದಂತೆ ತಂಡದಲ್ಲಿ

ಗೌತಮ್ ಗಂಭೀರ್ (ಭಾರತ), ಅಲೆಸ್ಟರ್ ಕುಕ್ (ಇಂಗ್ಲೆಂಡ್), ಕುಮಾರ ಸಂಗಕ್ಕಾರ (ಶ್ರೀಲಂಕಾ), ವಿರಾಟ್ ಕೊಹ್ಲಿ (ಭಾರತ), ಮೈಕಲ್ ಕ್ಲಾರ್ಕ್ (ಶ್ರೀಲಂಕಾ), ಶಹೀದ್ ಅಫ್ರಿದಿ(ಪಾಕಿಸ್ತಾನ), ಮಾರ್ನೆ ಮಾರ್ಕೆಲ್(ದಕ್ಷಿಣ ಆಫ್ರಿಕಾ), ಸ್ಟೀವನ್ ಫಿನ್ (ಇಂಗ್ಲೆಂಡ್), ಲಸಿತ್ ಮಾಲಿಂಗ (ಶ್ರೀಲಂಕಾ), ಸಯೀದ್ ಅಜ್ಮಲ್ (ಪಾಕಿಸ್ತಾನ), 12ನೇ ಆಟಗಾರ ಶೇನ್ ವಾಟ್ಸನ್ (ಆಸ್ಟ್ರೇಲಿಯಾ)

ಐಸಿಸಿ ಪ್ರಶಸ್ತಿ 2012 ವಿಜೇತರ ಪಟ್ಟಿ
* ಐಸಿಸಿ ವರ್ಷದ ಕ್ರಿಕೆಟರ್(ಸರ್ ಗ್ಯಾರಿ ಸೋಬರ್ಸ್ ಟ್ರೋಫಿ) : ಕುಮಾರ್ ಸಂಗಕ್ಕಾರ (ಶ್ರೀಲಂಕಾ)
* ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟರ್ : ಕುಮಾರ್ ಸಂಗಕ್ಕಾರ (ಶ್ರೀಲಂಕಾ)
* ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ : ಸ್ಟಫನಿ ಟೇಲರ್ (ವೆಸ್ಟ್ ಇಂಡೀಸ್)
* ಐಸಿಸಿ ವರ್ಷದ ಏಕದಿನ ಕ್ರಿಕೆಟರ್: ವಿರಾಟ್ ಕೊಹ್ಲಿ (ಭಾರತ)
* ಐಸಿಸಿ ಉದಯೋನ್ಮುಖ ಕ್ರಿಕೆಟರ್ : ಸುನಿಲ್ ನಾರಾಯಣ್ (ವೆಸ್ಟ್ ಇಂಡೀಸ್)
* ಐಸಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟರ್ : ರಿಚರ್ಡ್ ಲೆವಿ (ದಕ್ಷಿಣ ಆಫ್ರಿಕಾ)
* ಐಸಿಸಿ ಕ್ರೀಡಾಸ್ಪೂರ್ತಿ ಕ್ರಿಕೆಟರ್ : ಡೇನಿಯಲ್ ವೆಟ್ಟೋರಿ(ನ್ಯೂಜಿಲೆಂಡ್)
* ಐಸಿಸಿ ಸಾರ್ವಜನಿಕ ಆಯ್ಕೆ ಪ್ರಶಸ್ತಿ: ಕುಮಾರ ಸಂಗಕ್ಕಾರ ( ಶ್ರೀಲಂಕಾ)

ಐಸಿಸಿ ಟೆಸ್ಟ್ ತಂಡ: ಅಲೆಸ್ಟರ್ ಕುಕ್ (ಇಂಗ್ಲೆಂಡ್), ಹಶೀಂ ಆಮ್ಲಾ(ದಕ್ಷಿಣ ಆಫ್ರಿಕಾ), ಕುಮಾರ್ ಸಂಗಕ್ಕಾರ(ಶ್ರೀಲಂಕಾ), ಜಾಕ್ವಸ್ ಕಾಲಿಸ್(ದಕ್ಷಿಣ ಆಫ್ರಿಕಾ), ಮೈಕಲ್ ಕ್ಲಾರ್ಕ್(ಆಸ್ಟ್ರೇಲಿಯಾ- ನಾಯಕ), ಶಿವನಾರಾಯಣ್ ಚಂದ್ರಪಾಲ್(ವೆಸ್ಟ್ ಇಂಡೀಸ್), ಮ್ಯಾಟ್ ಪ್ರಿಯರ್ (ಇಂಗ್ಲೆಂಡ್), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್), ಸಯೀದ್ ಅಜ್ಮಲ್ (ಪಾಕಿಸ್ತಾನ), ವೆರ್ನಾನ್ ಫಿಲೆಂಡರ್ (ದಕ್ಷಿಣ ಆಫ್ರಿಕಾ), ಡೇಲ್ ಸ್ಟೇಯ್ನ್ (ದಕ್ಷಿಣ ಆಫ್ರಿಕಾ) 12ನೇ ಆಟಗಾರ ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ)

ಐಸಿಸಿ ವಾರ್ಷಿಕ ಪ್ರಶಸ್ತಿ ವಿತರಣೆಯ ಅಂಗವಾಗಿ ಈ ತಂಡಗಳನ್ನು ಪ್ರಕಟಿಸಲಾಗಿದೆ. ಮಾಜಿ ಆಟಗಾರರಾದ ಕ್ಲೈವ್ ಲಾಯ್ಡ್, ಹೂಪರ್, ಅಟ್ಟಪಟ್ಟು, ಟಾಮ್ ಮೂಡಿ ಮತ್ತು ಇಂಗ್ಲೆಂಡಿನ ಮಹಿಳಾ ಆಟಗಾರ್ತಿ ಕ್ಲೇರ್ ಕಾನರ್ ತಂಡವನ್ನು ಆಯ್ಕೆ ಮಾಡಿದವರಾಗಿದ್ದಾರೆ. (ದಟ್ಸ್ ಕ್ರಿಕೆಟ್)

Story first published:  Sunday, September 16, 2012, 13:24 [IST]
English summary
Kumar Sangakkara was tonight presented the Sir Garfield Sobers trophy for ICC Cricketer of the Year at the prestigious LG ICC Awards, held at a glittering ceremony in Colombo. Sangakkara was joined on the winners' list by India's Virat Kohli, who took the ICC ODI Cricketer of the Year
ಅಭಿಪ್ರಾಯ ಬರೆಯಿರಿ