Englishहिन्दीമലയാളംதமிழ்తెలుగు

'ಸೋಲಿಗೆ ನಾನೇ ಕಾರಣ' ಅಂತಾ ಒಪ್ಪಿಕ್ಕೊಳ್ಳಣ್ಣ

Posted by:
Updated: Wednesday, September 12, 2012, 21:50 [IST]
 

ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಪ್ರತಿ ಬಾರಿ ತಂಡ ಸೋತಾಗ ಏನಾದರೂ ಒಂದು ಕುಂಟು ನೆಪ ಹೇಳುವುದು ಮಾಮೂಲಿ ಸಂಗತಿ. ನ್ಯೂಜಿಲೆಂಡ್ ವಿರುದ್ಧ ಎರಡನೇ ಟಿ20 ಸೋಲಿಗೆ ನಾನೇ ಕಾರಣ ಎಂದು ಒಪ್ಪಿಕೊಳ್ಳದೇ ಪಿಚ್ ಸರಿಯಿರಲಿಲ್ಲ ಸಕತ್ ಸ್ಲೋ ಆಗಿತ್ತು ಎಂದು ತೇಲಿಸಿದ್ದಾರೆ.

ಧೋನಿಯನ್ನು ಕಂಡರೆ, 'ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.. ಅಂದ', 'ಕಳ್ಳನಿಗೆ ಒಂದು ಪಿಳ್ಳೆ ನೆವ', ' 'ಕುಣಿಯಲಾರದವನು ನೆಲ ಡೊಂಕು ಎಂದನಂತೆ' ಎಂಬ ಗಾದೆಗಳು ನೆನಪಾಗುತ್ತದೆ.

'ಸೋಲಿಗೆ ನಾನೇ ಕಾರಣ' ಅಂತಾ ಒಪ್ಪಿಕ್ಕೊಳ್ಳಣ್ಣ

ಆದರೆ, ಸ್ಲೋ ಆಗಿದ್ದು ಪಿಚ್ ಅಲ್ಲ, ಧೋನಿ ಬ್ಯಾಟಿಂಗ್ ಎಂಬುದು ಕ್ರಿಕೆಟ್ ಬಲ್ಲ ಪಂದ್ಯ ನೋಡಿದ ಎಲ್ಲರಿಗೂ ಗೊತ್ತಿದೆ. ಧೋನಿ ಇದೇ 'ಅಹಂ' ಇಟ್ಟುಕೊಂಡು ಮುಂದುವರೆದರೆ ಟಿ20 ವಿಶ್ವಕಪ್ ನಲ್ಲಿ ಕಷ್ಟ ಕಷ್ಟ.

ಇಷ್ಟಕ್ಕೂ ಹೆಲಿಕಾಪ್ಟರ್ ಹೊಡೆತದ ಶೂರ ಎಂಎಸ್ ಧೋನಿ ಅಂಕಿ ಅಂಶ ತೆಗೆದು ನೋಡಿದರೆ, ಟಿ20 ಮಾದರಿಯಲ್ಲಿ ಅತ್ಯಂತ ಕಳಪೆ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎನಿಸಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಧೋನಿ ಈವರೆಗೂ ಕೇವಲ 109 ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸದ್ಯದ ಟಿ20 ತಂಡದ ಆಟಗಾರರ ಪೈಕಿ ಧೋನಿ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದು, ಒಂದು ಪಂದ್ಯವಾಡಿರುವ ಮನೋಜ್ ತಿವಾರಿ(88) ಬಿಟ್ಟರೆ ಹೊಸ ಬೌಲರ್ ಗಳು ಮಾತ್ರ ಧೋನಿಗಿಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಇನ್ನೂ ಕುತೂಹಲದ ಸಂಗತಿ ಎಂದರೆ, ಹರ್ಭಜನ್ ಸಿಂಗ್(120), ಜಹೀರ್ ಖಾನ್(130), ಇರ್ಫಾನ್ ಪಠಾಣ್ (125), ಆರ್ ಅಶ್ವಿನ್ (124) ಧೋನಿಗಿಂತ ಉತ್ತಮ ಸ್ಟೈಕ್ ರೇಟ್ ಹೊಂದಿದ್ದಾರೆ.

ಬ್ಯಾಟ್ಸ್ ಮನ್ ಗಳ ಪೈಕಿ ಸಮಯ ಬಂದಾಗ ಗಾಯಾಳು ಆಗುವ ವೀರೇಂದರ್ ಸೆಹ್ವಾಗ್ (152), ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್(150), ಟಿ20 ಅತ್ಯಧಿಕ ರನ್ ಸ್ಕೋರರ್ ಸುರೇಶ್ ರೈನಾ(137), ರನ್ ಮೇಕಿಂಗ್ ಮೆಷಿನ್ ವಿರಾಟ್ ಕೊಹ್ಲಿ(134), ಜವಾಬ್ದಾರಿ ಆಟಗಾರ ಗೌತಮ್ ಗಂಭೀರ್ (122) ಉತ್ತಮ ಅಂತರದಲ್ಲಿ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ನೆನಪಿಡಿ ಟಿ20 ಮಾದರಿಯಲ್ಲಿ ರನ್ ಸರಾಸರಿಗಿಂತ ಸ್ಟ್ರೈಟ್ ರೇಟ್ ಬಹು ಮುಖ್ಯವಾಗುತ್ತದೆ. ಎಷ್ಟು ಕಡಿಮೆ ಎಸೆತಗಳಲ್ಲಿ ಎಷ್ಟು ಹೆಚ್ಚು ರನ್ ಹೊಡೆದ ಎಂಬುದು ಗಣನೆಗೆ ಬರುತ್ತದೆ.

ಗೌತಿ ಹೇಳಿದ್ದು ನಿಜ: ಕೊನೆ ಗಳಿಗೆಯಲ್ಲಿ ಭರ್ಜರಿ ಹೊಡೆತದ ಮೂಲಕ ಪಂದ್ಯ ಗೆಲ್ಲಿಸಿಕೊಡಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ ಎಲ್ಲಾ ಕಡೆ ವರ್ಕ್ ಆಗುವುದಿಲ್ಲ ಎಂಬುದು ಇನ್ನಾದರೂ ಧೋನಿ ಮನವರಿಕೆಯಾದರೆ ಒಳ್ಳೆಯದು. ಧೋನಿಯ ಈ ನಡವಳಿಕೆ ಇತರೆ ಬ್ಯಾಟ್ಸ್ ಮನ್ ಮೇಲೆ ಸಕತ್ ಒತ್ತಡ ಹಾಕುತ್ತಿದೆ. ಒಬ್ಬ ಬ್ಯಾಟ್ಸ್ ಮನ್ ಇದೇ ರೀತಿ ಸದಾ ಒತ್ತಡದಲ್ಲಿ ಆಡಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದರು.

ಅಂಕಿ ಅಂಶಗಳ ಮೂಲಕ ಧೋನಿ ಕಳಪೆ ಆಟಗಾರ ಎಂದು ಒಂದೇ ಮಾತಿಗೆ ಹೇಳಿ ಮುಗಿಸಲು ಸಾಧ್ಯವಿಲ್ಲ ಎಂಬುದು ನಿಜವಾದರೂ, ಇದೇ ಅಂಕಿ ಅಂಶ ಅಥವಾ ಧೋನಿಯ ಹೊಡಿ ಬಡಿ ಸ್ಟೈಲ್ ಅವರನ್ನು ಏಕದಿನ ಕ್ರಿಕೆಟ್ ನಲ್ಲಿ ಅಗ್ರಸ್ಥಾನಕ್ಕೇರಿಸಿದ್ದು ಎಂಬುದನ್ನು ಮರೆಯುವಂತಿಲ್ಲ.

ಧೋನಿಯನ್ನು ಎಂದಿಗೂ ಟೆಸ್ಟ್ ಕ್ರಿಕೆಟರ್ ಎಂದು ಆತ್ಮವಿಶ್ವಾಸದಿಂದ ಕರೆಯಲು ಸಾಧ್ಯವಿಲ್ಲ. ಏಕದಿನ ಹಾಗೂ ಟಿ20 ಮಾದರಿಗೆ ಹೇಳಿ ಮಾಡಿಸಿದ ಶೈಲಿ ಹೊಂದಿರುವ ಧೋನಿ ಪಂದ್ಯ ಗೆಲ್ಲಿಸುವಲ್ಲಿ ವೈಫಲ್ಯ ಕಾಣುತ್ತಿರುವುದು ಭಾರತದ ಪಾಲಿಗೆ ಆತಂಕಕಾರಿ ವಿಷಯವಾಗಿದೆ.

ಚೆನ್ನೈ ಪಿಚ್ ನ ಅಂಗುಲ ಅಂಗುಲ ಬಲ್ಲ ಸೂಪರ್ ಕಿಂಗ್ಸ್ ಕ್ಯಾಪ್ಟನ್, ಪಿಚ್ ಸ್ಲೋ ಆಗಿದೆ ಎಂದರೆ ಅವರ ಅಭಿಮಾನಿಗಳು ಕೂಡಾ ನಂಬುವುದು ಕಷ್ಟ. ಇನ್ನಾದರೂ ಪಿಚ್ ಸರಿಯಿಲ್ಲ, ಬೌಲರ್ ಗಳು ಸ್ಲಾಗ್ ಓವರ್ ನಲ್ಲಿ ಹೆಚ್ಚು ರನ್ ಕೊಟ್ಟರು ಎಂಬ ಕುಂಟು ನೆಪ ಹೇಳುವುದನ್ನು ಬಿಟ್ಟು ತನ್ನ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಲಿ.

ಅಂದ ಹಾಗೆ , ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಸೆ.17ರಂದು ಪಾಕಿಸ್ತಾನವನ್ನು ಭಾರತ ಎದುರಿಸಲಿದೆ. ಧೋನಿ ಹಾಗೂ ತಂಡಕ್ಕೆ ಬೆಸ್ಟ್ ಆಫ್ ಲಕ್. .

Story first published:  Wednesday, September 12, 2012, 20:48 [IST]
English summary
Team India skipper MS Dhoni is known for his slow starts as he takes more time to settle down, before going for the shots and the second T20 against New Zealand also showed a similar show, as he should be held responsible for not finishing well and guiding India safe.
ಅಭಿಪ್ರಾಯ ಬರೆಯಿರಿ