Englishहिन्दीമലയാളംதமிழ்తెలుగు

ಟಿ20 : ಕೊಹ್ಲಿ ಆಟ ವ್ಯರ್ಥ, ಕಿವೀಸ್ ಗೆ 1 ರನ್ ಜಯ

Posted by:
Updated: Tuesday, September 11, 2012, 22:53 [IST]
 

ಟಿ20 : ಕೊಹ್ಲಿ ಆಟ ವ್ಯರ್ಥ, ಕಿವೀಸ್ ಗೆ 1 ರನ್ ಜಯ
 

ಚೆನ್ನೈ, ಸೆ.11: 168ರನ್ ಬೆನ್ನು ಹತ್ತಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಭರ್ಜರಿ ಬೌಂಡರಿಗಳ ನೆರವಿನಿಂದ ಉತ್ತಮ ಆರಂಭ ಪಡೆದರೂ ಅಂತಿಮವಾಗಿ ಗೆಲುವಿನ ಗುರಿ ದಾಟುವಲ್ಲಿ ಸ್ವಲ್ಪದರಲ್ಲಿ ಎಡವಿದೆ.

4 ವಿಕೆಟ್ ಕಳೆದು ಕೊಂಡು 166 ರನ್ ಮಾತ್ರ ಗಳಿಸಿದ ಭಾರತ ತಂಡ ಕಿವೀಸ್ ತಂಡದ ಮುಂದೆ ತಲೆ ಬಾಗಿದೆ.  ಈ ಮೂಲಕ 2 ಟಿ20 ಪಂದ್ಯಗಳ ಸರಣಿಯನ್ನು ನ್ಯೂಜಿಲೆಂಡ್ ತಂಡ ಗೆದ್ದು ಕೊಂಡಿದೆ. ವಿಶಾಖ ಪಟ್ಟಣಂನ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು.

ಬಹುದಿನಗಳ ನಂತರ ಖಾತೆ ತೆರೆದ ರೋಹಿತ್ ಶರ್ಮ 2 ಎಸೆತದಲ್ಲಿ 6 ರನ್ ಹೊಡೆಯುವ ಸವಾಲಿನಲ್ಲಿ ಸೋತು ಕೇವಲ 4 ರನ್ ಗಳಿಸಿ ಔಟಾಗದೆ ಉಳಿದರು.

ನ್ಯೂಜಿಲೆಂಡ್ ಪರ ಫ್ರಾಂಕ್ಲಿನ್ ಉತ್ತಮ ಬೌಲಿಂಗ್ ಮಾಡಿ 26 ರನ್ನಿತ್ತು 2 ವಿಕೆಟ್ ಪಡೆದರು. ಮಿಲ್ಸ್ ಕೂಡಾ 17 ರನ್ ನೀಡಿ 2 ವಿಕೆಟ್ ಕಿತ್ತರು. ಆದರೆ, ಕೊಹ್ಲಿ ಹಾಕಿಕೊಂಡ ಬುನಾದಿ ಮೇಲೆ ಗೆಲುವಿನ ಬಾವುಟ ಹಾರಿಸುವಲ್ಲಿ ಧೋನಿ ಸೋತರು.[ಸ್ಕೋರ್ ಕಾರ್ಡ್ ನೋಡಿ]

ಸೆಹ್ವಾಗ್ ಇಲ್ಲದೆ ಗೌತಮ್ ಗಂಭೀರ್ ಮೊದಲ ಬಾರಿಗೆ ಸಿಡಿಲ ಮರಿ ವಿರಾಟ್ ಕೊಹ್ಲಿಯೊಂದಿಗೆ ಕಣಕ್ಕಿಳಿದರು. ಆರಂಭದಿಂದಲೇ ತಿಣುಕಾಡಿದ ಗಂಭೀರ್ ತಂಡದ ಮೊತ್ತ 26 ರನ್ ಆಗಿದ್ದಾಗ ಕೇವಲ 3 ರನ್ ಗಳಿಸಿ ಔಟಾದರು.

ನಂತರ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಉತ್ತಮ ಜೊತೆಯಾಟ ಪ್ರದರ್ಶನ ನೀಡಿದರು.  ಅದರೆ, ರೈನಾ 22 ಎಸೆತದಲ್ಲಿ 27 ರನ್ ಗಳಿಸಿ ಮಿಲ್ಸ್ ಗೆ ಔಟಾದರು. ರೈನಾ 2 ಬೌಂಡರಿ, 1 ಸಿಕ್ಸ ಬಾರಿಸಿದರು.

ಕೊಹ್ಲಿ ಮಸ್ತ್ ಆಟ: ಕ್ರಿಕೆಟ್ ನ ಮೂರು ಪ್ರಕಾರಗಳನ್ನು ಅದ್ಭುತ ಆಟ ಪ್ರದರ್ಶಿಸುತ್ತಿರುವ ಕೊಹ್ಲಿ ಕೇವಲ 41 ಎಸೆತದಲ್ಲಿ 70 ರನ್ ಗಳಿಸಿ ಪ್ರೇಕ್ಷಕರನ್ನು ರಂಜಿಸಿದರು. 10 ಬೌಂಡರಿ, 1 ಸಿಕ್ಸ್ ಬಾರಿಸಿದ ಕೊಹ್ಲಿ ಆಟದಿಂದ ಕಿವೀಸ್ ತಂಡ ಕಂಗೆಟ್ಟು ಹೋಯಿತು. 170.7 ಸ್ಟ್ರೈಕ್ ರೇಟ್ ನಂತೆ ರನ್ ಸಿಡಿಸಿದ ಕೊಹ್ಲಿ ಉತ್ತಮ ಹೊಡೆತಗಳ ಮೂಲಕ ಭಾರತವನ್ನು ಸುಸ್ಥಿತಿಗೆ ತಂದರು.

ಕಣಕ್ಕಿಳಿದ ಯುವರಾಜ: ರೈನಾ ಔಟಾಗುತ್ತಿದ್ದಂತೆ ಟಿ20 ಸಿಕ್ಸರ್ ರಾಜ ಯುವರಾಜ್ ಕಣಕ್ಕಿಳಿಯುತ್ತಿದ್ದಂತೆ ಪ್ರೇಕ್ಷಕರು ಕರತಾಡನದ ಮೂಲಕ ಭರ್ಜರಿಯಾಗಿ ಸ್ವಾಗತಿಸಿದರು. ಯಾವುದೇ ಅಳುಕಿಲ್ಲದೆ ಉತ್ತಮ ಆಟ ಪ್ರದರ್ಶಿಸಿದ ಯುವರಾಜ್ ಒಂದು ಜೀವದಾನವನ್ನು ಪಡೆದರು.

ಕೊನೆ ಓವರ್ ತನಕ ಕಣದಲ್ಲಿದ್ದ ಯುವರಾಜ್ ಸಿಂಗ್ ಗೆಲ್ಲಲು 3 ಎಸೆತದಲ್ಲಿ 6 ರನ್ ಬೇಕಿದ್ದಾಗ ಭರ್ಜರಿ ಹೊಡೆತಕ್ಕೆ ಯತ್ನಿಸಿ ಫ್ರಾಂಕ್ಲಿನ್ ಗೆ ಬೋಲ್ಡ್ ಆದರು.

ಯುವರಾಜ್ ಸಿಂಗ್ 26 ಎಸೆತದಲ್ಲಿ 34 ರನ್ (1 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಎಂಎಸ್ ಧೋನಿ 23 ಎಸೆತದಲ್ಲಿ 22 ರನ್ ಗಳಿಸಿದರು. 2 ಬೌಂಡರಿ ಮಾತ್ರ ಸಿಡಿಸಿದ ಧೋನಿ ಪಂದ್ಯ ಗೆಲ್ಲಿಸಲು ಆಗದೆ ಹ್ಯಾಪು ಮೊರೆ ಹೊತ್ತು ಪೆವಿಲಿಯನ್ ಗೆ ತೆರಳಿದರು.

ನ್ಯೂಜಿಲೆಂಡ್ ಇನ್ನಿಂಗ್ಸ್ : ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ತಂಡ ಬಹುಬೇಗ ಆರಂಭಿಕ ಆಟಗಾರರಾದ ರಾಬ್ ನಿಕೊಲ್ (0) ಹಾಗೂ ಮಾರ್ಟಿನ್ ಗುಪ್ಟಿಲ್(1) ವಿಕೆಟ್ ಕಳೆದುಕೊಂಡರೂ ಮೆಕಲಮ್ ಆಟದ ಬಲದಿಂದ ಭಾರತಕ್ಕೆ 2ನೇ ಟಿ20 ಪಂದ್ಯ ಗೆಲ್ಲಲು 168 ರನ್ ಗುರಿ ನೀಡಿದೆ.

ಮೊದಲ ಓವರ್ ನಲ್ಲೇ ಜಹೀರ್ ಖಾನ್ ಅವರು ನಿಕೋಲ್ ವಿಕೆಟ್ ಪಡೆದರು. ನಂತರ ಗುಫ್ಟಿಲ್ ಪಠಾಣ್ ಗೆ ಬಲಿಯಾದರು.

ನಂತರ ಬ್ರೆಂಡನ್ ಮೆಕಲಮ್ ಹಾಗೂ ಕೇನ್ ವಿಲಿಯಮ್ಸನ್ ಜೋಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೇನ್ ವಿಲಿಯಮ್ಸನ್ 26 ಎಸೆತದಲ್ಲಿ 28 ರನ್(3 ಬೌಂಡರಿ) ಗಳಿಸಿ ತಂಡದ ಮೊತ್ತ 92 ರನ್ ಆಗಿದ್ದಾಗ ಪಠಾಣ್ ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಜೇಮ್ಸ್ ಫ್ರಾಂಕ್ಲಿನ್ ಕೇವಲ 1 ರನ್ ಗಳಿಸಿ ಬಾಲಾಜಿಗೆ ಮೊದಲ ವಿಕೆಟ್ ಕಾಣಿಕೆ ನೀಡಿದರು.

ಮೆಕಲಮ್ ಭರ್ಜರಿ ಆಟ: ಕೇವಲ 55 ಎಸೆತದಲ್ಲಿ 91 ರನ್ ಗಳಿಸಿದ ಬ್ರೆಂದನ್ ಮೆಕಲಮ್ ಭರ್ಜರಿ ಆಟ ಪ್ರೇಕ್ಷಕರನ್ನು ರಂಜಿಸಿತು. ಶತಕ ಗಳಿಸುವ ಭರದಲ್ಲಿ ಮುನ್ನುಗ್ಗುತ್ತಿದ್ದ ಮೆಕಲಮ್ ಕೊನೆಗೂ ಇರ್ಫಾನ್ ಪಠಾಣ್ ಅವರ ಸ್ಲೋ ಬಾಲ್ ಗೆ ಬಲಿಯಾದರು.

ಮೆಕಲಮ್ 165.45 ಸ್ಟ್ರೈಕ್ ರೇಟ್ ನಂತೆ 91 ರನ್ ಗಳಿಸಿದ್ದಲ್ಲದೆ 11 ಆಕರ್ಷಕ ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು. ನ್ಯೂಜಿಲೆಂಡ್ ತಂಡಕ್ಕೆ ಭದ್ರ ಬುನಾದಿ ಒದಗಿಸಿದ ಮೆಕಲಮ್ ತಂಡದ ಮೊತ್ತ 139 ರನ್ ಆಗಿದ್ದಾಗ ಔಟಾಗಿ ಪೆವಿಲಿಯನ್ ಗೆ ಮರಳಿದರು.

ನಂತರ ನಾಯಕ ರಾಸ್ ಟೇಲರ್ ಹಾಗೂ ಜೇಕಬ್ ಓರಮ್ ಜವಾಬ್ದಾರಿಯುತವಾಗಿ ಆಟ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. [ಸ್ಕೋರ್ ಕಾರ್ಡ್ ನೋಡಿ]

ಅಂತಿಮವಾಗಿ ಜೇಕಬ್ ಓರಮ್ 19 ರನ್ (10 ಎಸೆತ, 3 ಬೌಂಡರಿ), ರಾಸ್ ಟೇಲರ್ 25 ರನ್ (19 ಎಸೆತ, 1 ಸಿಕ್ಸರ್) ಹೊಡೆದು ಔಟಾಗದೆ ಉಳಿದರು. ನಿಗದಿತ 20 ಓವರ್ ನಲ್ಲಿ ಕಿವೀಸ್ ತಂಡ 167/5 ರನ್ ಗಳಿಸಿತು.

ಭಾರತದ ಪರ ಇರ್ಫಾನ್ ಪಠಾಣ್ ಅತ್ಯುತ್ತಮ ಪ್ರದರ್ಶನ ನೀಡಿ 31 ರನ್ ನೀಡಿ 3 ವಿಕೆಟ್ ಗಳಿಸಿದರು. ಉಳಿದಂತೆ ಜಹೀರ್ ಖಾನ್, ಲಕ್ಷ್ಮಿಪತಿ ಬಾಲಾಜಿ ತಲಾ 1 ವಿಕೆಟ್ ಪಡೆದರು. ಯುವರಾಜ್ ಸಿಂಗ್ 2 ಓವರ್ ಎಸೆದು 14 ರನ್ ನೀಡಿದರು.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಳೆರಾಯನ ಅಡ್ಡಿ ಇಲ್ಲದೆ ಎರಡನೇ ಟಿ20 ಪಂದ್ಯ ಆರಂಭಗೊಂಡಿತು. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

Story first published:  Tuesday, September 11, 2012, 20:16 [IST]
English summary
It was tense finish here at the MA Chidambaram Stadium on Tuesday night. And New Zealand denied Yuvraj Singh a winning comeback as they clinched a nail-biting one-run win in the Twenty20 International. Chasing 168, India were so near yet so far at 166/4 in 20 overs.
ಅಭಿಪ್ರಾಯ ಬರೆಯಿರಿ