Englishहिन्दीമലയാളംதமிழ்తెలుగు

ವಿಶೇಷ ಸಂದರ್ಶನ : 'ಅಭಿನವ ದ್ರಾವಿಡ್' ಪೂಜಾರಾ

Posted by:
Updated: Wednesday, November 7, 2012, 17:36 [IST]
 

ರಾಹುಲ್ ದ್ರಾವಿಡ್ ನಿರ್ಗಮನದಿಂದ ಟೀಂ ಇಂಡಿಯಾದಲ್ಲಷ್ಟೇ ಅಲ್ಲ ಇಡೀ ಟೆಸ್ಟ್ ಕ್ರಿಕೆಟ್ ನಲ್ಲೇ ಒಂದು ರೀತಿ ಶೂನ್ಯ ಆವರಿಸಿದೆ. 24 ವರ್ಷದ ಚೇತೇಶ್ವರ ಪೂಜಾರಾ ಆಗಮನದಿಂದ ಭಾರತದ ನಂ.3 ಕ್ರಮಾಂಕಕ್ಕೆ ಮತ್ತೆ ಕಳೆ ಬಂದಿದೆ.

ಈ ನಡುವೆ ಪೂಜಾರಾ ಅವರನ್ನು ಅಭಿನವ ದ್ರಾವಿಡ್ ಎಂದು ಮಾಧ್ಯಮಗಳು ಸಂಬೋಧಿಸುವುದರ ಬಗ್ಗೆ ಪೂಜಾರಾ ಏನು ಹೇಳುತ್ತಾರೆ? ರಾಹುಲ್ ದ್ರಾವಿಡ್ ರಂತೆ ಕ್ಲಿಷ್ಟಕರ ಸನ್ನಿವೇಶ ಎದುರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಕ್ರಿಕೆಟ್ ಕೀರ್ತಿ ಹೆಚ್ಚಿಸಲು ಪೂಜಾರಾ ಸಮರ್ಥರೇ? ಉತ್ತರ ಈ ಸಂದರ್ಶನದಲ್ಲಿ ನಿಮಗೆ ಸಿಗಲಿದೆ. ಸೌರಾಷ್ಟ್ರದ ಮಿತುಭಾಷಿ ಚೇತೇಶ್ವರ ಪೂಜಾರಾ ನಮ್ಮ ಪ್ರತಿನಿಧಿ ಅಪ್ರಮೇಯ ಅವರು ಗುರುವಾರ(ಸೆ.6) ನಡೆಸಿದ ವಿಶೇಷ ಸಂದರ್ಶನದ ಸಾರಾಂಶ ಇಲ್ಲಿದೆ.

ವಿಶೇಷ ಸಂದರ್ಶನ : 'ಅಭಿನವ ದ್ರಾವಿಡ್' ಪೂಜಾರಾ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಹೈದರಾಬಾದಿನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಶತಕ ಬಾರಿಸಿದ್ದು 'ಕನಸು ನನಸಾದ ದಿನ' ವಾಗಿತ್ತು. ಬೆಂಗಳೂರಿನ ಟೆಸ್ಟ್ ನಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆ ಆಡುವಾಗ ಅವರಿಂದ ಸಿಕ್ಕ ಸಲಹೆ, ಸೂಚನೆಗಳು ನನ್ನ ಮನಸ್ಸಿನಲ್ಲಿ ಸದಾ ಜಾಗೃತವಾಗಿರುತ್ತದೆ ಎಂದು ಚೇತೇಶ್ವರ ಪೂಜಾರಾ ಹರ್ಷದಿಂದ ಹೇಳಿದರು.

ಭಾರತದ ಟೆಸ್ಟ್ ಕ್ರಿಕೆಟ್ ಗೆ ಸದ್ಯ ಬ್ರೇಕ್ ಸಿಕ್ಕಿದೆ. ನವೆಂಬರ್ 15 ರಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಲು ಪೂಜಾರಾ ಸಜ್ಜಾಗುತ್ತಿದ್ದಾರೆ.

ಅಪ್ರಮೇಯ: ಟೀಂ ಇಂಡಿಯಾಗೆ ಪುನಃ ಆಯ್ಕೆಯಾದ ನಂತರ ಭರ್ಜರಿಯಾಗಿ 159 ರನ್ ಬಾರಿಸಿ ನಿಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದೀರಾ ಇದು ಹೇಗೆ ಸಾಧ್ಯವಾಯಿತು?

ಚೇತೇಶ್ವರ್ ಪೂಜಾರ: ಗಾಯದ ಸಮಸ್ಯೆಯಿಂದ ತಂಡದಿಂದ ಬಹುಕಾಲ ಹೊರಗುಳಿಯಬೇಕಾಯಿತು. ತಂಡಕ್ಕೆ ಪುನರ್ ಪ್ರವೇಶವಾದ ಕೂಡಲೇ ಉತ್ತಮ ಪ್ರದರ್ಶನ ನೀಡಿ ಮೊದಲ ಶತಕ ಬಾರಿಸಿದ್ದು ನನ್ನ ಬಹುದಿನದ ಕನಸು ನನಸಾದಂತೆ ಆಗಿದೆ. ಒಟ್ಟಾರೆ ಸರಣಿ ನನಗೆ ಖುಷಿ ಕೊಟ್ಟಿದೆ.

ಅ: ರಾಹುಲ್ ದ್ರಾವಿಡ್ ಅವರ ನಿರ್ಗಮನದ ನಂತರ, ನೀವು ಮೂರನೇ ಕ್ರಮಾಂಕ ತುಂಬಬಲ್ಲ ಸಮರ್ಥ ಆಟಗಾರ ಎಂದು ಅಡಿತರು ಅಭಿಪ್ರಾಯಪಟ್ಟಿದ್ದಾರೆ. ನಿಮಗೆ ಎಂದಾದರೂ ಇದು ಒತ್ತಡ ತಂದಿದೆಯೇ? ನಿಮ್ಮಲ್ಲಿ ಈ ಬಗೆ ಉಂಟಾದ ಭಾವನೆಗಳೇನು?

ಚೇಪೂ: ರಾಹುಲ್ ದ್ರಾವಿಡ್ ಸ್ಥಾನದಲ್ಲಿ ಆಡುವ ಬಗ್ಗೆ ನನಗೆ ಮೊದಲೇ ಹೇಳಲಾಗಿತ್ತು. ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ದ್ರಾವಿಡ್ 10,000 ರನ್ ಬಾರಿಸಿದ್ದಾರೆ. ದ್ರಾವಿಡ್ ಜೊತೆ ಹೋಲಿಕೆ ಖುಷಿ ಕೊಟ್ಟರೂ ನನ್ನ ಸಾಮರ್ಥ್ಯದ ಅರಿವು ನನಗಿದೆ. ನಾನು ಕಲಿಯುವುದು ಇನ್ನೂ ಸಾಕಷ್ಟಿದೆ.

ಇನ್ನು ಮೂರನೇ ಕ್ರಮಾಂಕದಲ್ಲಿ ಆಡುವುದು ನನಗೆ ಹೊಸದೇನಲ್ಲ. ಸೌರಾಷ್ಟ್ರ ಪರ ಮೂರನೇ ಕ್ರಮಾಂಕ್ದಲ್ಲಿ ಆಡಿದ್ದೇನೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ (IOC) ಪರ ಆರಂಭಿಕ ಆಟಗಾರನಾಗಿ ಆಡಿದ್ದೇನೆ. ಇಂಡಿಯಾ 'ಎ' ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಅಡಿದ್ದೆ. ಪದೇ ಪದೇ ಅಗ್ರ ಕ್ರಮಾಂಕದ ವಿಕೆಟ್ ಬೀಳುತ್ತಿದ್ದರಿಂದ ಮತ್ತೆ ಆರಂಭ ಆಟಗಾರನಾಗಿ ಕಣಕ್ಕಿಳಿದೆ. ಹೀಗಾಗಿ ಕ್ರಮಾಂಕದಲ್ಲಿ ಬದಲಾವಣೆ ನನಗೆ ಅಭ್ಯಾಸವಾಗಿಬಿಟ್ಟಿದೆ.

ಅ: ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ ನಾಲ್ಕು ದಿನವೂ ಉಪಸ್ಥಿತರಿದ್ದರು. ಅವರೊಟ್ಟಿಗೆ ನೀವು ಮಾತುಕತೆ ನಡೆಸಿದ್ದುಂಟಾ?

ಚೇಪೂ: ಹೌದು, ದ್ರಾವಿಡ್ ಜೊತೆ ಮಾತಾಡುವ ಸಮಯ ಸಿಕ್ಕಿತ್ತು. ಆದರೆ, ಬ್ಯಾಟಿಂಗ್ ಬಗ್ಗೆ ಹೆಚ್ಚು ಸಮಯ ಚರ್ಚೆ ಮಾಡಲು ಆಗಲಿಲ್ಲ. ನಾನು ನನ್ನ ಮೊದಲ ಟೆಸ್ಟ್ ಶತಕ ಬಾರಿಸಿದ ಮೇಲೆ ರಾಹುಲ್ ದ್ರಾವಿಡ್ ಅವರು ಶುಭ ಹಾರೈಸಿ ಬಂದ ಎಸ್ ಎಂಎಸ್ ಕಳಿಸಿದ್ದರು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ.

ಅ: ಬೆಂಗಳೂರು ಟೆಸ್ಟ್ ನಲ್ಲಿ ನಿಮ್ಮ ಜೊತೆ ಆಡುತ್ತಿದ್ದಾಗ ಸಚಿನ್ ತೆಂಡೂಲ್ಕರ್ ಏನು ಸಲಹೆ ನೀಡಿದರು?

ಚೇಪೂ: ಬೆಂಗಳೂರು ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಬೌಲರ್ ಗಳು ಪದೇ ಪದೇ ಬೌನ್ಸರ್ ಎಸೆಯುತ್ತಿದರು. ಹೀಗಾಗಿ ಪುಲ್ ಹಾಗೂ ಹುಕ್ ಶಾಟ್ ಹೊಡೆಯುವಾಗ ಕೊಂಚ ಜಾಗ್ರತೆ ವಹಿಸುವಂತೆ ಸೂಚಿಸಿದರು. ಔಟ್ ಸೈಡ್ ದ ಆಫ್ ಸೈಡ್ ಬಾಲ್ ಕೆಣಕದಂತೆ ಹೇಳಿದರು. ಇನ್ನು ಕೆಲವು ಉಪಯುಕ್ತ ಸಲಹೆಗಳು ಸಿಕ್ಕವು.

ಅ: ಬೆಂಗಳೂರು ಟೆಸ್ಟ್ ನಲ್ಲಿ ಹುಕ್ ಶಾಟ್ ಹೊಡೆಯಲು ಹೋಗಿ ಔಟಾಗಿದ್ದೀರಾ? ಮತ್ತೆ ಹುಕ್ ಶಾಟ್ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಾ? ಮತ್ತೆ ಹುಕ್, ಪುಲ್ ಪ್ರಯತ್ನಿಸ್ತೀರಾ?

ಚೇಪೂ: ಹುಕ್ ಹಾಗೂ ಪುಲ್ ಶಾಟ್ ಹೊಡೆಯುವ ಇನ್ನಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಶಾಟ್ ಯತ್ನಿಸದೆ ಎಸೆತವನ್ನು ಹಾಗೆ ಕೀಪರ್ ಗೆ ಬಿಡುವುದು ಒಳ್ಳೆಯದು ಎನ್ನಿಸುತ್ತದೆ. ಆದರೆ, ಬೇರೆ ಬೇರೆ ಬೌಲರ್ ಗಳು ಬೇರೆ ಬೇರೆ ರೀತಿ ಬೌನ್ಸರ್ ಎಸೆಯುತ್ತಾರೆ.

ಅದಕ್ಕೆ ತಕ್ಕಂತೆ ತಯಾರಾಗಬೇಕು. ಹೈದರಾಬಾದ್ ಪಿಚ್ ನಲ್ಲಿ ಶಾಟ್ ಹೊಡೆದಂತೆ, ಬೆಂಗಳೂರಿನಲ್ಲಿ ಹೊಡೆಯಲಾಗದು. ಈ ಬಗ್ಗೆ ಇನ್ನಷ್ಟು ತರಬೇತಿ ಅಗತ್ಯವಿದೆ. ಅನಗತ್ಯವಾಗಿ ಬೌಲರ್ ಬಲೆಗೆ ಬೀಳದಂತೆ ಆಡುವುದೂ ಮುಖ್ಯವಾಗುತ್ತದೆ.

ಅ: ತಂಡದ ಹಿರಿಯ ಆಟಗಾರರು ಯಾವ ರೀತಿ ನಡೆಸಿಕೊಂಡರು. ಏನಾದರೂ ವಿಶೇಷ ಸಲಹೆ ಸೂಚನೆ ನೀಡುತ್ತಿದ್ದರಾ?

ಚೇಪೂ: ಹಿರಿಯ ಆಟಗಾರರೆಲ್ಲ ನನ್ನ ಆಟವನ್ನು ಮೆಚ್ಚಿದರು. ಕೋಚ್ ಡಂಕನ್ ಫ್ಲೆಚರ್ ಕೂಡಾ ನೆಟ್ ಅಭ್ಯಾಸದ ವೇಳೆ ಕೆಲವು ಸೂಕ್ಷ್ಮ ಸಲಹೆಗಳನ್ನು ನೀಡಿ ನನ್ನ ನೂನ್ಯತೆಗಳನ್ನು ಸರಿಪಡಿಸಿದರು. ಟೀಂ ಇಂಡಿಯಾ ಪರ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ಇಚ್ಛೆ ಇದೆ ಎಂದು ಪೂಜಾರಾ ಆತ್ಮವಿಶ್ವಾಸದಿಂದ ಹೇಳಿದರು.

Story first published:  Thursday, September 6, 2012, 22:09 [IST]
English summary
The soft-spoken right-handed batsman Cheteshwar Pujara, in an exclusive interview with ThatsCricket, stated that playing at number three was not new to him and he was very happy to compare with legend Rahul Dravid and said enjoyed the way he batted in the series.
ಅಭಿಪ್ರಾಯ ಬರೆಯಿರಿ