Englishहिन्दीമലയാളംதமிழ்తెలుగు

ಕರ್ನಾಟಕವೇ ಇಂಡಿಯಾ ಟೀಂ ಆಗಿತ್ತು: ತಿಲಕ್

Posted by:
Published: Thursday, August 30, 2012, 12:38 [IST]
 

ಬೆಂಗಳೂರು, ಆ.30: ನನಗೆ ರಾಷ್ಟ್ರೀಯ ತಂಡದಲ್ಲಿ ಆಡಲಿಲ್ಲ ಎಂಬ ಕೊರಗಿಲ್ಲ. ಉತ್ತಮ ಕ್ರಿಕೆಟ್ ಆಡುವುದು ನನ್ನ ಗುರಿಯಾಗಿತ್ತು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಜೊತೆ ಕ್ರಿಕೆಟ್ ಆಡಿದ ಹೆಮ್ಮೆ ಇದೆ. ಕರ್ನಾಟಕ ತಂಡವೇ ಟೀಂ ಇಂಡಿಯಾವಾಗಿತ್ತು ಎಂದು ಪ್ರತಿಭಾವಂತ ವಿಕೆಟ್ ಕ್ರಿಕೆಟ್ ಬ್ಯಾಟ್ಸ್ ಮನ್ ತಿಲಕ್ ನಾಯ್ಡು ಹೇಳಿದರು.

ಬುಧವಾರ(ಆ.29) ಸಂಜೆ ಕೆಎಸ್ ಸಿಎ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 34 ವರ್ಷ ವಯಸ್ಸಿನ ತಿಲಕ್ ನಾಯ್ಡು ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದರು.

ಕರ್ನಾಟಕವೇ ಇಂಡಿಯಾ ಟೀಂ ಆಗಿತ್ತು: ತಿಲಕ್

ತಿಲಕ್ ನಾಯ್ಡು ಅವರ ಜೊತೆಯಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸುನಿಲ್ ಜೋಶಿ, ದೊಡ್ಡ ಗಣೇಶ್, ವೆಂಕಟೇಶ್ ಪ್ರಸಾದ್, ರೋಜರ್ ಬಿನ್ನಿ ಮುಂತಾದ ಖ್ಯಾತ ಕ್ರಿಕೆಟರ್ ಗಳು ಉಪಸ್ಥಿತರಿದ್ದರು.

ದ್ರಾವಿಡ್ ಆಟ ಸ್ಪೂರ್ತಿ: ರಾಹುಲ್ ದ್ರಾವಿಡ್ ಹಾಗೂ ವಿಜಯ್ ಭಾರಧ್ವಾಜ್ ಅವರ ಆಟದಿಂದ ಸಾಕಷ್ಟು ಕಲಿತಿದ್ದೇನೆ. ದ್ರಾವಿಡ್ ಜೊತೆ ಆಡುವುದೆಂದರೆ ಅತ್ಯಂತ ಖುಷಿಯ ವಿಚಾರ. ಕುಂಬ್ಳೆ ಅವರಿಂದಲೂ ಅನೇಕ ಪಾಠ ಕಲಿತ್ತಿದ್ದೇನೆ.

ನಾನು ಕರ್ನಾಟಕ ಪರ ಆಡಿದ್ದಷ್ಟು ಕಾಲ ನನಗೆ ಉತ್ತಮ ಜೊತೆಗಾರರು ಸಿಕ್ಕಿದ್ದರು. ಕೋಚಿಂಗ್ ಬಗ್ಗೆ ಸದ್ಯಕ್ಕೆ ಆಸಕ್ತಿಯಿಲ್ಲ. ಅನಿಲ್ ಬಯಸಿದರೆ ಆಡಳಿತ ಮಂಡಳಿಯಲ್ಲಿ ಸೇರ್ಪಡೆಗೊಳ್ಳುತ್ತೇನೆ ಎಂದು ತಿಲಕ್ ನಾಯ್ಡು ಹೇಳಿದರು.

1998 ಹಾಗೂ 2002-03ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಿಲಕ್, ಸ್ವಲ್ಪದರಲ್ಲೇ ಭಾರತ ತಂಡಕ್ಕೆ ಆಯ್ಕೆಯಾಗುವುದರಲ್ಲಿ ಅವಕಾಶ ವಂಚಿತರಾಗಿದ್ದು ದುರದೃಷ್ಟ. ತಂಡದಲ್ಲಿ ಸಕತ್ ಲೈವ್ ಲಿಯಾಗಿ ಎಲ್ಲೆರೊಡನೆ ಬೆರೆಯುತ್ತಿದ್ದ ಪಕ್ಕಾ ಟೀಂ ಮ್ಯಾನ್ ಎಂದು ತಿಲಕ್ ರನ್ನು ರಾಹುಲ್ ದ್ರಾವಿಡ್ ಹೊಗಳಿದರು.

1998-99ರ ಋತುವಿನಲ್ಲಿ ಪಾದಾರ್ಪಣೆ ಮಾಡಿದ ತಿಲಕ್ ನಾಯ್ಡು 93 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ರಣಜಿ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದ ತಿಲಕ್ ಉತ್ತಮ ಆಕ್ರಮಣಕಾರಿ ಬ್ಯಾಟ್ಸ್ ಮನ್ ಆಗಿದ್ದರು. 81 ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ. 10 ದುಲೀಪ್ ಟ್ರೋಫಿ ಹಾಗೂ 1 ಇರಾನಿ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ.

ಭಾರತ U-19 ತಂಡದಲ್ಲೂ ಒಮ್ಮೆ ಆಡಿದ್ದ ತಿಲಕ್ ನಾಯ್ಡು, ರಾಹುಲ್ ದ್ರಾವಿಡ್ ನೇತೃತ್ವದ ಭಾರತ ಬಿ ತಂಡದಲ್ಲಿ ಎನ್ ಕೆಪಿ ಸಾಳ್ವೆ ಚಾಲೆಂಜರ್ ಸರಣಿಯಲ್ಲಿ ಆಡಿದ್ದರು. ಒಟ್ಟಾರೆ 4,386 ರನ್ ಗಳನ್ನು ಬಾರಿಸಿದ್ದ ನಾಯ್ಡು, 220 ಕ್ಯಾಚ್ ಹಾಗೂ 17 ಸ್ಟಂಪ್ ಪಡೆದಿದ್ದರು. 24 ಅರ್ಧ ಶತಕ ಹಾಗೂ 8 ಶತಕಗಳನ್ನು ಹೊಡೆದಿದ್ದಾರೆ. 167ರನ್ ಗರಿಷ್ಠ ಮೊತ್ತದೊಂದಿಗೆ 34.80 ರನ್ ಸರಾಸರಿ ಹೊಂದಿದ್ದಾರೆ.

53 ಏಕದಿನ ಪಂದ್ಯಗಳಲ್ಲಿ 1,108 ರನ್ ಹಾಗೂ 7 ಅರ್ಧ ಶತಕ ಬಾರಿಸಿದ್ದು 59 ಕ್ಯಾಚ್ ಹಾಗೂ 14 ಸ್ಟಂಪ್ ಪಡೆದಿದ್ದಾರೆ.

ನನ್ನ ಸಾಧನೆಗೆ ನನ್ನ ತಂದೆ ಹಾಗೂ ಚಿಕ್ಕಪ್ಪ ರಾಮಮೂರ್ತಿ ನಾಯ್ಡು ಅವರೇ ಸ್ಪೂರ್ತಿ. ಕರ್ನಾಟಕ ಪರ ಕ್ರಿಕೆಟ್ ಆಡಿದ್ದು ನನಗೆ ಅತ್ಯಂತ ಖುಷಿಕೊಟ್ಟಿದೆ. ನನ್ನ ನಿವೃತ್ತಿ ನಿರ್ಧಾರಕ್ಕೆ ಪತ್ನಿ ಸುನೀತಾ ಹಾಗೂ ಪುತ್ರಿ ರಮ್ಯಶ್ರೀ ಹಾಗೂ ಆಪ್ತರ ಬೆಂಬಲವಿದೆ ಎಂದು ತಿಲಕ್ ಹೇಳಿದರು.

ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲೂ ಉತ್ತಮ ಆಟ ಪ್ರದರ್ಶಿಸಿದ್ದ ತಿಲಕ್ ನಾಯ್ಡು ಪ್ರಾವಿಡೆಂಟ್ ಬೆಂಗಳೂರು ತಂಡದ ಪರ ಆಡಿ ಕಪ್ ಎತ್ತಿದ್ದರು.

English summary
Karnataka wicketkeeper VS Thilak Naidu, who was once close to making to Indian team, bid adieu to first class cricket at this home ground M Chinnaswamy Stadium on Wednesday(Aug.29) evening.
ಅಭಿಪ್ರಾಯ ಬರೆಯಿರಿ