Englishहिन्दीമലയാളംதமிழ்తెలుగు

ದ್ರಾವಿಡ್, ಧೋನಿ, ಉನ್ಮುಕ್ತ್ ವರ್ಷದ ಕ್ರಿಕೆಟರ್ಸ್

Posted by:
Published: Thursday, August 30, 2012, 14:59 [IST]
 

ಬೆಂಗಳೂರು, ಆ.30: ಭಾರತದ ತಂಡದ ನಾಯಕ ಎಂಎಸ್ ಧೋನಿ ಅವರು 2011ನೇ ಸಾಲಿನ ಕ್ಯಾಸ್ಟ್ರಾಲ್ ವರ್ಷದ ಭಾರತೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಬುಧವಾರ (ಆ.29) ರಾತ್ರಿ ನಡೆದ ಸಮಾರಂಭಕ್ಕೆ ಧೋನಿ ಗೈರು ಹಾಜರಾಗಿದ್ದು ಮಾತ್ರ ಕುತೂಹಲ ಕೆರಳಿಸಿದೆ. ಸಮಾರಂಭ ನಡೆದ ಸಂದರ್ಭದಲ್ಲಿ ಧೋನಿ ಅವರು ಸಮೀಪದ ಹೋಟೆಲ್ ನಲ್ಲೇ ತಂಗಿದ್ದರು ಎನ್ನಲಾಗಿದೆ.

ಎಂಎಸ್ ಧೋನಿ ಬದಲಿಗೆ ಸುರೇಶ್ ರೈನಾ ಅವರು ಪ್ರಶಸ್ತಿ ಸ್ವೀಕರಿಸಿದರು. ಉಳಿದಂತೆ ಹಿರಿಯ-ಕಿರಿಯ ಆಟಗಾರರ ಸಮ್ಮಿಲನವಾಗಿದ್ದ ಸಮಾರಂಭ ಆಟಗಾರರ ಸಂತಸವನ್ನು ಹೆಚ್ಚಿಸಿತು.

ದ್ರಾವಿಡ್, ಧೋನಿ, ಉನ್ಮುಕ್ತ್ ವರ್ಷದ ಕ್ರಿಕೆಟರ್ಸ್

ಏಕದಿನ, ಟೆಸ್ಟ್‌ ಪಂದ್ಯಗಳಲ್ಲಿನ ಪ್ರದರ್ಶನ ಹಿನ್ನೆಲೆಯಲ್ಲಿ ಭಾರತ ತಂಡದ ಅನುಭವಿ ಆಟಗಾರ ಸಚಿನ್‌ ತೆಂಡೂಲ್ಕರ್‌ ವರ್ಷದ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ಪ್ರಶಸ್ತಿ ಸ್ವೀಕರಿಸಿದರು ಹಾಗೂ ಶತಕಗಳ ಶತಕದ ಸಾಧನೆ ಮಾಡಿದ್ದಕ್ಕಾಗಿ ವಿಶೇಷ ಪ್ರಶಸ್ತಿಯನ್ನು ಪಡೆದರು.

19 ವರ್ಷದೊಳಗಿನವರ ವಿಶ್ವಕಪ್‌ ಗೆದ್ದ ಭಾರತ ತಂಡದ ನಾಯಕ ಉನ್ಮುಕ್ತ್ ಚಾಂದ್‌ ಅವರಿಗೆ ವರ್ಷದ ಕಿರಿಯ ಆಟಗಾರ ಪ್ರಶಸ್ತಿ ಪಡೆದರೆ, ಜೀವಮಾನದ ಸಾಧನೆಗಾಗಿ ಮಾಜಿ ಕ್ರಿಕೆಟಿಗ ಹಾಗೂ ಕೋಚ್‌ ಅಜಿತ್‌ ವಾಡೆಕರ್‌ ಪ್ರಶಸ್ತಿ ಗಳಿಸಿದರು.

ವರ್ಷದ ಶ್ರೇಷ್ಠ ಟೆಸ್ಟ್‌ ಬ್ಯಾಟ್ಸ್‌ಮನ್‌ ಪ್ರಶಸ್ತಿ ದ್ರಾವಿಡ್‌ ಪಾಲಾಗಿದೆ. ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್‌ ಸಿಂಗ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ವಕಪ್‌ ಫೈನಲ್‌ನಲ್ಲಿ ಶತಕ ವಂಚಿತರಾದ ಆರಂಭಿಕ ಗೌತಮ್‌ ಗಂಭೀರ್‌ಗೆ ಒತ್ತಡದ ನಡುವೆಯೂ ಅಮೋಘ ಪ್ರದರ್ಶನ ನೀಡಿದ್ದಕ್ಕಾಗಿ ಪ್ರಶಸ್ತಿ ಗಳಿಸಿದರು. ಇದೇ ವಿಭಾಗದಲ್ಲಿ ವಿರಾಟ್ ಕೊಹ್ಲಿ ಕೂಡಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2011ರ ಸಾಲಿನ ಪ್ರದರ್ಶನ ಆಧರಿಸಿ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್‌ ಪ್ರಶಸ್ತಿ ಸುರೇಶ್‌ ರೈನಾ ಮತ್ತು ಬೌಲರ್‌ ಆಗಿ ಆರ್‌. ಅಶ್ವಿ‌ನ್‌ ಪ್ರಶಸ್ತಿ ಗಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದ್ರಾವಿಡ್, ಕಳೆದ 13 ವರ್ಷಗಳಿಂದ ಕ್ಯಾಸ್ಟ್ರಾಲ್ ಪ್ರಶಸ್ತಿ ಸ್ವೀಕರಿಸುತ್ತಾ ಬಂದಿದ್ದೇನೆ. ಈ ಪ್ರಶಸ್ತಿ ನನಗೆ ಸಾಕಷ್ಟು ಸ್ಫೂರ್ತಿನೀಡಿದೆ ಎಂದರು. ಸ್ಪಿನ್ ದಂತ ಕತೆ ಇಎಎಸ್ ಪ್ರಸನ್ನ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಆರ್ ಅಶ್ವಿನ್, ಇದು ನನ್ನ ವೃತ್ತಿ ಜೀವನದ ಅತ್ಯಂತ ಸಂತಸದ ಕ್ಷಣವಾಗಿದೆ ಎಂದರು.

ಕ್ರಿಕೆಟ್ ಜಗತ್ತಿನ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಲು ಕ್ಯಾಸ್ಟ್ರಾಲ್ ಸಂಸ್ಥೆ 1997ರಿಂದ ಪ್ರಶಸ್ತಿ ನೀಡುತ್ತಿದೆ. ಈ ಪ್ರತಿಷ್ಠಿತ ಸಮಾರಂಭಕ್ಕೆ ಧೋನಿ ಗೈರು ಹಾಜರಾಗಿದ್ದಕ್ಕೆ ಕಾರಣವನ್ನು ಕೂಡಾ ಹೇಳಿ ಕಳುಹಿಸುವ ಸೌಜನ್ಯ್ವನ್ನು ತೋರದಿರುವುದು ಎಲ್ಲರ ಹುಬ್ಬೇರಿಸಿದೆ.

English summary
Indian captain MS Dhoni won the Castrol Indian Cricketer of the Year award for 2011, here on Wednesday(Aug.29) night. However, Dhoni was conspicuous by his absence and Suresh Raina received the honour on his behalf.
ಅಭಿಪ್ರಾಯ ಬರೆಯಿರಿ