Englishहिन्दीമലയാളംதமிழ்తెలుగు

ವಿಶ್ವಕಪ್ ಯುವ ಹೀರೋ ಉನ್ಮುಕ್ತ್ ಚಂದ್

Posted by:
Updated: Monday, August 27, 2012, 13:11 [IST]
 

ಬೆಂಗಳೂರು, ಆ.27: ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಭಾರತಕ್ಕೆ ವಿಶ್ವಕಪ್‌ ಜಯ ತಂದಿತ್ತ ಉನ್ಮುಕ್ತ್ ಚಂದ್ ಈಗ ಕ್ರಿಕೆಟ್ ಜಗತ್ತಿನ ಹೊಸ ಹೀರೋ. ವಾಸಿಂ ಅಕ್ರಂ, ಇಯಾನ್ ಚಾಪೆಲ್ ರಂಥ ಖ್ಯಾತ ಕ್ರಿಕೆಟರ್ ಗಳು ಉನ್ಮುಕ್ತ್ ಸಾಧನೆ ಕಂಡು ಬೆರಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2000ರಲ್ಲಿ ಮಹಮ್ಮದ್ ಕೈಫ್ ಹಾಗೂ 2008ರಲ್ಲಿ ವಿರಾಟ್ ಕೊಹ್ಲಿ ಮಾಡಿದ ಸಾಧನೆಯನ್ನು 2012ರಲ್ಲಿ ಉನ್ಮುಕ್ತ್ ಚಂದ್ ಮಾಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್ ವಿರುದ್ಧವೇ ಭರ್ಜರಿ ಶತಕ ಸಿಡಿಸುವುದು ಸಾಮಾನ್ಯದ ಮಾತಲ್ಲ. ಉನ್ಮುಕ್ತ್ ಔಟಾಗದೆ 111 ರನ್ (130 ಎಸೆತ, 7 ಬೌಂಡರಿ, 6 ಸಿಕ್ಸರ್) ಬಾರಿಸಿ ಅಮೋಘ ಆಟ ಪ್ರದರ್ಶಿಸಿದರು.

ವಿಶ್ವಕಪ್ ಯುವ ಹೀರೋ ಉನ್ಮುಕ್ತ್ ಚಂದ್

U-19 ವಿಶ್ವಕಪ್ ನಲ್ಲಿ ಒಟ್ಟು 246 ರನ್ ಗಳಿಸಿದ್ದು 1 ಶತಕ, 1 ಅರ್ಧಶತಕ ಗಳಿಸಿದ್ದಾರೆ. ಒಟ್ಟಾರೆ 25 ಬೌಂಡರಿ, 9 ಸಿಕ್ಸರ್ ಸಿಡಿಸಿದ್ದಾರೆ. 49.20ರನ್ ಸರಾಸರಿಯಂತೆ ರನ್ ಗಳಿಕೆ ಮಾಡಿದ್ದಾರೆ.

ಕಳೆದ ಏಷ್ಯಾ ಕಪ್ 2012 ರಲ್ಲೂ ಉನ್ಮುಕ್ತ್ ಮಿಂಚಿದ್ದರು. ಸೆಮಿಸ್ ಹಾಗೂ ಫೈನಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ 370 ರನ್ ಚೆಚ್ಚಿದ್ದರು.

ಈವರೆಗೂ 11 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಉನ್ಮುಕ್ತ್ ಒಟ್ಟು 738 ರನ್ ಗಳಿಸಿದ್ದಾರೆ. 1 ಶತಕ ಹಾಗೂ 4 ಅರ್ಧ ಶತಕ ಇದರಲ್ಲಿ ಸೇರಿದೆ.

ಉನ್ಮುಕ್ತ್ ಪರಿಚಯ: ದೆಹಲಿಯ ಶಾಲಾ ಶಿಕ್ಷಕ ಭರತ್‌ ಚಾಂದ್‌ ಥಾಕುರ್‌ ಅವರ ಪುತ್ರ ಉನ್ಮುಕ್ತ್, ಆರರ ಹರೆಯದಲ್ಲಿಯೇ ಕ್ರಿಕೆಟ್‌ ಆಡಲು ಆರಂಭಿಸಿದ್ದರು. ಕ್ರಿಕೆಟ್‌ ಆಡುವಂತೆ ಪ್ರೋತ್ಸಾಹಿಸುವಲ್ಲಿ ಅವರ ಚಿಕ್ಕಪ್ಪ ಸುಂದರ್‌ ಚಾಂದ್‌ ಥಾಕುರ್‌ ಪ್ರಮುಖ ಪಾತ್ರ ವಹಿಸಿದ್ದರು.

ನೋಯ್ಡಾದ ದಿಲ್ಲಿ ಪಬ್ಲಿಕ್‌ ಶಾಲೆ ಮತ್ತು ದಿಲ್ಲಿಯ ಮಾಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಉನ್ಮುಕ್ತ್ ಅವರು ಸದ್ಯ ದಿಲ್ಲಿಯ ಸೈಂಟ್‌ ಸ್ಪೀಫ‌ನ್ಸ್‌ ಕಾಲೇಜ್‌ನ ವಿದ್ಯಾರ್ಥಿಯಾಗಿದ್ದಾರೆ.

ಭರತ್‌ ನಗರದಲ್ಲಿರುವ ಎಲ್‌.ಬಿ. ಶಾಸ್ತ್ರಿ ಕ್ಲಬ್‌ ಪರ ಉನ್ಮುಕ್ತ್ ಆಡುತ್ತಿದ್ದಾರೆ. ಗೌತಮ್‌ ಗಂಭೀರ್‌ ಅವರ ಕೋಚ್‌ ಆಗಿರುವ ಸಂಜಯ್‌ ಭಾರದ್ವಾಜ್‌ ಅವರು ಉನ್ಮುಕ್ತ್ ಅವರ ಕೋಚ್‌ ಆಗಿದ್ದಾರೆ. ಚಾಂದ್‌ ಅವರು ಅಂಡರ್‌ 15, 16 ಮತ್ತು 19 ವಿಭಾಗಗಳಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ, 2011ರಲ್ಲಿ ಉನ್ಮುಕ್ತ್ ದಿಲ್ಲಿ ಡೇರ್‌ ಡೆವಿಲ್ಸ್‌ ತಂಡದ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರೀಗ ಆ ತಂಡದ ಭಾಗವಾಗಿದ್ದಾರೆ.

ಎಲ್ಲರಿಗೂ ಇರುವಂತೆ ಉನ್ಮುಕ್ತ್ ಕೂಡ ಸಚಿನ್‌ ತೆಂಡುಲ್ಕರ್‌ ಅವರ ಅಭಿಮಾನಿಯಂತೆ. ಸ್ಕ್ವೇರ್‌ ಕಟ್‌ ಹೊಡೆತವನ್ನು ಭಾರತದ ರೈಸಿಂಗ್‌ ತಾರೆ ವಿರಾಟ್‌ ಕೊಹ್ಲಿ ಅವರ ಶೈಲಿಯನ್ನು ಹೋಲುತ್ತದೆ.

# ಜನನ: ಮಾರ್ಚ್ 26, 1993
# 19 ವರ್ಷ ವಯೋಮಿತಿಯೊಳಗಿನ ಟೀಂ ಇಂಡಿಯಾ ನಾಯಕ
# 2011ರಲ್ಲಿ ಅತ್ಯಂತ ಕಿರಿಯ ಐಪಿಎಲ್ ಆಟಗಾರ ಎಂಬ ಹೆಗ್ಗಳಿಕೆ
# ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಅಭಿಮಾನಿ
# ಬಲಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ಆಫ್ ಸ್ಪಿನ್ನರ್
# ದೆಹಲಿಯ ಸಂಜಯ್ ಭಾರಧ್ವಾಜ್ ಅವರ ಶಿಷ್ಯ
# ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡುತ್ತಾರೆ.
# ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟ.
# U-15, U-16 ಹಾಗೂ U-19 ಟೂರ್ನಿಗಳಲ್ಲಿ ಆಡಿದ ಅನುಭವ
# ಗುಜರಾತ್ ವಿರುದ್ಧ 2010ರಲ್ಲಿ ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ

Story first published:  Monday, August 27, 2012, 13:03 [IST]
English summary
Unmukt Chand became only the third Under-19 India player to lead the country to an Under-19 World Cup title. He did it in Townsville in Australia on Sunday (August 26).
ಅಭಿಪ್ರಾಯ ಬರೆಯಿರಿ