Englishहिन्दीമലയാളംதமிழ்తెలుగు

ಟ್ವೆಂಟಿ 20 : ಲಂಕಾ ದಹನ ಮಾಡಿದ ಕೊಹ್ಲಿ, ಪಠಾಣ್

Posted by:
Updated: Wednesday, August 8, 2012, 8:51 [IST]
 

ಪಲ್ಲೆಕೆಲೆ, ಆ.8: ಏಕೈಕ ಟ್ವೆಂಟಿ 20 ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಟೀಮ್ ಇಂಡಿಯಾ 39 ರನ್‌ಗಳಿಂದ ಸೋಲಿಸಿದೆ. ಗೆಲ್ಲಲು 156 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ 18 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟಾಯಿತು. ವಿರಾಟ್ ಕೊಹ್ಲಿ, ಇರ್ಫಾನ್ ಪಠಾಣ್ ಹಾಗೂ ದಿಂಡಾ ಭಾರತದ ಗೆಲುವಿನ ರುವಾರಿ ಎನಿಸಿದರು.

ಏಕದಿನ ಸರಣಿಯನ್ನು 4-1 ಅಂತರದಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ ಈ ಗೆಲುವಿನ ಮೂಲಕ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲೂ ಕೂಡಾ ಎರಡನೇ ಸ್ಥಾನಕ್ಕೇರಿದೆ.

ಟ್ವೆಂಟಿ 20 : ಲಂಕಾ ದಹನ ಮಾಡಿದ ಕೊಹ್ಲಿ, ಪಠಾಣ್

ಉಪನಾಯಕ ವಿರಾಟ್ ಕೊಹ್ಲಿ ಅರ್ಧಶತಕ (68), ವೇಗಿ ಅಶೋಕ್ ದಿಂಡಾ (4/19) ಮತ್ತು ಆಲ್‌ರೌಂಡರ್ ಇರ್ಫಾನ್ ಪಠಾಣ್(3/27) ನೆರವಿನಲ್ಲಿ ಏಕೈಕ ಟ್ವೆಂಟಿ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ತನ್ನದಾಗಿಸಿಕೊಂಡಿತು. [ಸ್ಕೋರ್ ಕಾರ್ಡ್ ನೋಡಿ]

ಲಂಕಾದ ಅಗ್ರ ಸರದಿಯ ದಾಂಡಿಗರಾದ ತಿಲಕರತ್ನೆ ದಿಲ್ಶನ್(0), ಉಪುಲ್ ತರಂಗ (5) ಮತ್ತು ನಾಯಕ ಮಹೇಲ ಜಯವರ್ಧನೆ(26) ಅವರನ್ನು ಪಠಾಣ್ ಪೆವಿಲಿಯನ್‌ಗೆ ಅಟ್ಟಿದರು. ಆರ್.ಅಶ್ವಿನ್ ಲಂಕಾದ ತಿರಿಮನ್ನೆ(20) ವಿಕೆಟ್ ಪಡೆದರು.

ಉಮೇಶ್ ಯಾದವ್ ಆಲ್‌ರೌಂಡರ್ ಜೀವನ್ ಮೆಂಡೀಸ್ (11)ಗೆ ಪೆವಿಲಿಯನ್ ಹಾದಿ ತೋರಿಸಿದರು. ಅಶೋಕ್ ದಿಂಡಾ ಅವರು ಏಂಜಿಲೊ ಮ್ಯಾಥ್ಯೂಸ್(31), ಚಾಂಡಿಮಾಲ್(7), ಈರಂಗ(6), ಮಾಲಿಂಗ(0)ವಿಕೆಟ್ ಉಡಾಯಿಸಿಬಿಟ್ಟರು.
ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದಕ್ಕೆ ಮೊದಲು ಕೊಹ್ಲಿ ಅರ್ಧಶತಕ(68) ನೆರವಿನಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 155 ರನ್ ಪೇರಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (6) ಔಟಾಗುವ ಮೂಲಕ ಮೊದಲ ವಿಕೆಟ್‌ನ್ನು ಕಳೆದುಕೊಂಡರೂ ಆ ಬಳಿಕ ಅಜಿಂಕ್ಯ ರಹಾನೆ ಮತ್ತು ಕೊಹ್ಲಿ 74 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದರು.

ರಹಾನೆ 21ರನ್ (25ಎ, 1ಸಿ) ಗಳಿಸಿ ಜೀವನ್ ಮೆಂಡಿಸ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಕೊಹ್ಲಿ ಮತ್ತು ಸುರೇಶ್ ರೈನಾ ಮೂರನೆ ವಿಕೆಟ್‌ಗೆ 48 ರನ್ ಸೇರಿಸಿ ತಂಡದ ಸ್ಕೋರ್‌ನ್ನು 129ಕ್ಕೆ ತಲುಪಿಸಿದರು. ಕೊಹ್ಲಿ 68 ರನ್(48ಎ, 11ಬೌ, 1ಸಿ) ಗಳಿಸಿ ಔಟಾದರು. ಅಂತಿಮವಾಗಿ ಸುರೇಶ್ ರೈನಾ ಔಟಾಗದೆ 34 ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಔಟಾಗದೆ 16 ರನ್ ಗಳಿಸಿ ತಂಡದ ಸ್ಕೋರ್‌ನ್ನು 155ಕ್ಕೆ ತಲುಪಿಸಿದರು.

Story first published:  Wednesday, August 8, 2012, 8:43 [IST]
English summary
Virat Kohli, Irfan Pathan and Ashok Dinda were the star performers as India won the one off Twenty20 International against Sri Lanka by 39 runs here on Tuesday night. With this success, India have catapulted to second from seventh in ICC T20I Rankings.
ಅಭಿಪ್ರಾಯ ಬರೆಯಿರಿ