Englishहिन्दीമലയാളംதமிழ்తెలుగు

ಟಿ 20: ಭಾರತಕ್ಕೆ ಸೆಹ್ವಾಗ್ ಗಿಂತ ರೋಹಿತ್ ಚಿಂತೆ

Posted by:
Updated: Friday, August 17, 2012, 12:15 [IST]
 

ಟಿ 20: ಭಾರತಕ್ಕೆ ಸೆಹ್ವಾಗ್ ಗಿಂತ ರೋಹಿತ್ ಚಿಂತೆ
 

ಪಲ್ಲೆಕೆಲೆ, ಆ.6: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡ ಮಂಗಳವಾರ(ಆ.7) ಇಲ್ಲಿ ನಡೆಯಲಿರುವ ಏಕೈಕ ಟ್ವೆಂಟಿ20 ಪಂದ್ಯದಲ್ಲಿ ಶ್ರೀಲಂಕವನ್ನು ಮಣಿಸುವ ಉತ್ಸಾಹದಲ್ಲಿದೆ. ಗಾಯಗೊಂಡು ಭಾರತಕ್ಕೆ ಮರಳಿರುವ ವೀರೇಂದರ್ ಸೆಹ್ವಾಗ್ ಹಾಗೂ ಜಹೀರ್ ಖಾನ್ ಅನುಪಸ್ಥಿತಿಗಿಂತ ರೋಹಿತ್ ಶರ್ಮ ಆಯ್ಕೆ ಟೀಂ ಇಂಡಿಯಾಗೆ ತಲೆ ನೋವಾಗಲಿದೆ.

ಮಂಗಳವಾರ ರಾತ್ರಿ 7.00 ಗಂಟೆಗೆ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ಪಂದ್ಯ ಮುಂಬರುವ ಐಸಿಸಿ ವಿಶ್ವ ಟ್ವೆಂಟಿ 20 ಟೂರ್ನಿಗೆ ಮುನ್ನುಡಿಯಾಗಲಿದೆ. ವಿಶ್ವ ಟ್ವೆಂಟಿ20 ಪಂದ್ಯಾವಳಿ ಸೆ.18ರಿಂದ ದ್ವೀಪ ರಾಷ್ಟ್ರದಲ್ಲಿ ನಡೆಯಲಿದೆ.

ಇತ್ತೀಚೆಗೆ ಮುಗಿದ ಏಕದಿನ ಸರಣಿಯನ್ನು 4-1 ಅಂತರದಿಂದ ಜಯ ಗಳಿಸಿರುವ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರು ಬ್ಯಾಟಿಂಗ್ ನಲ್ಲಿ ಆಸರೆಯಾಗಿದ್ದಾರೆ. ಇರ್ಫಾನ್ ಪಠಾಣ್ ಉತ್ತಮ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದಾರೆ. ಟಿ20 ಪಂದ್ಯದಲ್ಲೂ ಉತ್ತಮ ಪ್ರದರ್ಶನದ ಮೂಲಕ ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ಅವಕಾಶ ಹೆಚ್ಚಿಸಿಕೊಂಡಿದ್ದಾರೆ.

ರೋಹಿತ್ ಆಯ್ಕೆ ಗೊಂದಲ: ಏಕದಿನ ಸರಣಿಯ 5 ಇನ್ನಿಂಗ್ಸ್ ನಲ್ಲಿ ಕೇವಲ 13 ರನ್ ಗಳಿಸಿ 2.26 ರನ್ ಸರಾಸರಿ ಹೊಂದಿರುವ ಪ್ರತಿಭಾವಂತ ಆಟಗಾರ ರೋಹಿತ್ ಶರ್ಮ ಆಯ್ಕೆ ವಿಷಯದಲ್ಲಿ ನಾಯಕ ಧೋನಿ ಹಾಗೂ ತಂಡದ ವ್ಯವಸ್ಥಾಪಕರು ತಲೆ ಕೆಡಿಸಿಕೊಂಡಿದ್ದಾರೆ.

ಟಿ20 ಪಂದ್ಯದಲ್ಲಿ ರೋಹಿತ್ ಗೆ ಕಟ್ಟಕಡೆಯ ಅವಕಾಶ ನೀಡಲು ಧೋನಿ ಮನಸ್ಸು ಮಾಡಿದ್ದಾರೆ ಎಂದು ಲಭ್ಯ ಮೂಲಗಳಿಂದ ತಿಳಿದು ಬಂದಿದೆ. ಈ ಪಂದ್ಯದಲ್ಲಿ ರೋಹಿತ್ ಏನೇ ಸಾಧನೆ ತೋರಿದರೂ ಮುಂಬರುವ ದೇಶಿ ಕ್ರಿಕೆಟ್ ಋತುವಿನಲ್ಲಿ ಆಡಿ ನಂತರ ಟೀಂ ಇಂಡಿಯಾಗೆ ಮರಳಬೇಕಾಗುತ್ತದೆ.

ಉತ್ತಮ ಆಟ ಪ್ರದರ್ಶಿಸಿರುವ ಮನೋಜ್ ತಿವಾರಿ ಅವರು ಕೂಡಾ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಅಜಿಂಕ್ಯ ರಹಾನೆ ಮತ್ತೊಮ್ಮೆ ಪೆವಿಲಿಯನ್ ನಲ್ಲೇ ಕೂರಬೇಕಾಗುತ್ತದೆ. ಶ್ರೀಲಂಕಾ ತಂಡದಲ್ಲಿ ಸಂಗಕ್ಕಾರ ಅನುಪಸ್ಥಿತಿ ಕಾಡಲಿದೆ.

ಆದರೆ, ಏಂಜೆಲೋ ಮ್ಯಾಥ್ಯೂಸ್ ಹಾಗೂ ಥಿಸಾರಾ ಪೆರೆರಾ ಆಲ್ ರೌಂಡರ್ ಆಟ ಲಂಕಾಗೆ ಬೆನ್ನೆಲುಬಾಗಿದೆ. ಆದರೆ, ಉತ್ತಮ ಲಯದಲ್ಲಿರುವ ಭಾರತ ತಂಡವನ್ನು ತಡೆಗಟ್ಟುವುದು ಮಹೇಲ ಪಡೆಗೆ ಕಷ್ಟಸಾಧ್ಯ.

ತಂಡ: ಭಾರತ: ಎಂಎಸ್ ಧೋನಿ(ನಾಯಕ ಮತ್ತು ವಿಕೆಟ್ ಕೀಪರ್), ವಿರಾಟ್ ಕೊಹ್ಲಿ( ಉಪ ನಾಯಕ), ಗೌತಮ್ ಗಂಭೀರ್, ರೋಹಿತ್ ಶರ್ಮ, ಮನೋಜ್ ತಿವಾರಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಆರ್ ಅಶ್ವಿನ್, ಇರ್ಫಾನ್ ಪಠಾಣ್, ಪಿ ಓಜಾ, ಉಮೇಶ್ ಯಾದವ್, ಅಶೋಕ್ ದಿಂಡಾ ಹಾಗೂ ರಾಹುಲ್ ಶರ್ಮ

ಶ್ರೀಲಂಕಾ: ಮಹೇಲ ಜಯವರ್ದನೆ(ನಾಯಕ), ಏಂಜೆಲೊ ಮ್ಯಾಥ್ಯೂಸ್(ಉಪ ನಾಯಕ), ತಿಲಕರತ್ನೆ ದಿಲ್ಶನ್, ದಿನೇಶ್ ಚಂಡಿಮಾಲ್ (ವಿಕೆಟ್ ಕೀಪರ್), ನುವಾನ್ ಪ್ರದೀಪ್, ಲಸಿತ್ ಮಾಲಿಂಗ, ಚಮರ ಕಪುಗೆಡರ, ಥಿಸಾರಾ ಪೆರೆರಾ, ಜೀವನ್ ಮೆಂಡಿಸ್, ಸಚಿತ್ರಾ ಸೇನಾನಾಯಕೆ, ಉಪುಲ್ ತರಂಗ, ಲಹಿರು ತಿರುಮನ್ನೆ, ಇಶುರು ಉದಾನಾ, ರಂಗಣ ಹೆರಾತ್

ಮಂಗಳವಾರ ರಾತ್ರಿ 7 ಗಂಟೆಗೆ ಪಂದ್ಯ ನಡೆಯಲಿದೆ. ಪಂದ್ಯದ ಸ್ಕೋರ್ ಕಾರ್ಡ್, ಬಾಲ್ ಬೈ ಬಾಲ್ ಮಾಹಿತಿಗಾಗಿ ದಟ್ಸ್ ಕ್ರಿಕೆಟ್ ನೋಡುತ್ತೀರಿ.

Story first published:  Monday, August 6, 2012, 17:25 [IST]
English summary
India will look to extend their domination of Sri Lanka and wrap up their tour with yet another victory when the lone Twenty20 International takes place here at the Pallekele International Cricket Stadium on Tuesday (starts at 7.00 PM IST).
ಅಭಿಪ್ರಾಯ ಬರೆಯಿರಿ