Englishहिन्दीമലയാളംதமிழ்తెలుగు

ಕೊಹ್ಲಿ ಸೂಪರ್ ಶತಕ, ಭಾರತಕ್ಕೆ ಸರಣಿ ಜಯ

Posted by:
Updated: Wednesday, August 1, 2012, 5:16 [IST]
 

ಕೊಹ್ಲಿ ಸೂಪರ್ ಶತಕ, ಭಾರತಕ್ಕೆ ಸರಣಿ ಜಯ
 

ಕೊಲೊಂಬೊ, ಜು.31: ವಿರಾಟ್ ಕೊಹ್ಲಿ ಆಕರ್ಷಕ ಶತಕ, ಸುರೇಶ್ ರೈನಾರ ಸಮಯೋಚಿತ ಅರ್ಧಶತಕದ ನೆರವಿನಿಂದ ಅತಿಥೇಯ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು 3-1 ರ ಅಂತರದಲ್ಲಿ ಗೆದ್ದ ಭಾರತ ಮೈಕ್ರೋಮ್ಯಾಕ್ಸ್ ಕಪ್ ಗೆದ್ದಿದೆ.

119 ಎಸೆತದಲ್ಲಿ 128 ರನ್ ಪೇರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ 1 ಸಿಕ್ಸ್ ಸಿಡಿಸಿದರು. 2012ರಲ್ಲಿ 15 ಪಂದ್ಯಗಳಲ್ಲಿ 77.15 ರನ್ ಸರಾಸರಿಯಂತೆ 1003ರನ್ ಗಳಿಸಿರುವ ಕೊಹ್ಲಿ 3 ಅರ್ಧಶತಕ ಹಾಗೂ 5 ಶತಕ ಬಾರಿಸಿದ್ದಾರೆ. ಕೊಹ್ಲಿ ಹೊಡೆದಿರುವ 13 ಶತಕಗಳ ಪೈಕಿ 12 ಬಾರಿ ಭಾರತ ಜಯ ಗಳಿಸಿದೆ ಎಂದರೆ ಕೊಹ್ಲಿ ಟೀಂ ಇಂಡಿಯಾಕ್ಕೆ ಎಷ್ಟು ಲಕ್ಕಿ ಎಂಬುದು ತಿಳಿಯುತ್ತದೆ. [ಸ್ಕೋರ್ ಕಾರ್ಡ್ ನೋಡಿ]

ಶ್ರೀಲಂಕಾ ಒಡ್ಡಿದ್ದ 252 ರನ್ ಮೊತ್ತವನ್ನು ಚೇಸ್ ಮಾಡಲು ಆರಂಭಿಸಿದ ಭಾರತಕ್ಕೆ ಮೊದಲ ಓವರ್ ನಲ್ಲೇ ಆಘಾತ ಕಾದಿತ್ತು. ಮಲಿಂಗಾ ಬೌಲಿಂಗ್ ನಲ್ಲಿ ಗೌತಮ್ ಗಂಭೀರ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ವೀರೆಂದರ್ ಸೆಹ್ವಾಗ್ ಅವರ ವೀರಾವೇಶ ಕೂಡಾ ಹೆಚ್ಚು ಕಾಲ ನಡೆಯಲಿಲ್ಲ. 6 ಬೌಂಡರಿ ಇದ್ದ 34 ರನ್(29 ಎಸೆತ) ಬಾರಿಸಿ ಮ್ಯಾಥೂಸ್ ಗೆ ಬಲಿಯಾದರು.

ಹತ್ತು ಓವರ್ ಗಳಲ್ಲೇ ಆರಂಭ ಜೋಡಿಯನ್ನು ಕಳೆದುಕೊಂಡ ಭಾರತಕ್ಕೆ ವಿರಾಟ್ ಕೊಹ್ಲಿ ಆಸರೆಯಾದರು. ಆದರೆ, ನಂತರ ಕ್ರೀಸ್ ಗೆ ಬಂದ ರೋಹಿತ್ ಮತ್ತೊಮ್ಮೆ ವಿಫಲರಾದರು 14 ಎಸೆತದಲ್ಲಿ 4 ರನ್ ಗಳಿಸಿ ಔಟಾದರು.

ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮನೋಜ್ ತಿವಾರಿ 21 ರನ್ ಸೇರಿಸಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ತಂಡದ ಮೊತ್ತ ನೂರರ ಗಡಿ ದಾಟುವಂತೆ ನೋಡಿಕೊಂಡರು. ಮೆಂಡಿಸ್ ಗೆ ತಿವಾರಿ ಎಲ್ ಬಿ ಆಗಿ ಔಟಾದ ಮೇಲೆ ಸುರೇಶ್ ರೈನಾ ಹಾಗೂ ಕೊಹ್ಲಿ ಪಂದ್ಯದ ಗತಿ ಬದಲಿಸಿಬಿಟ್ಟರು. ಇಬ್ಬರ ಜೊತೆಯಾಟ ಬೇರ್ಪಡಿಸಲು ಮಹೇಲ ಜಯವರ್ಧನೆ ಎಲ್ಲಾ ರೀತಿ ಪ್ರಯತ್ನಪಟ್ಟು ಸೋತರು.

ರೈನಾ 51 ಎಸೆತದಲ್ಲಿ 58 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದು ಜಯದ ರನ್ ಗಳಿಸಿದರು. ಶ್ರೀಲಂಕಾ ಪರ ಮಾಲಿಂಗ, ಮ್ಯಾಥ್ಯೂಸ್, ಪ್ರದೀಪ್, ಮೆಂಡಿಸ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಉಪುಲ್ ತರಂಗಾ 51 ರನ್, ದಿಲ್ಶನ್ 42 ರನ್, ಥಿರಿಮನ್ನೆ 47 ರನ್ ಸಹಾಯದಿಂದ ಉತ್ತಮ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿತ್ತು.

ಆದರೆ, ಟೀಂ ಇಂಡಿಯಾ ಬೌಲರ್ ಗಳು ಲಂಕಾ ತಂಡ ಬೃಹತ್ ಮೊತ್ತ ಪೇರಿಸದಂತೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಚಂಡಿಮಾಲ್ ವಿಕೆಟ್ ಸೇರಿದಂತೆ 4 ವಿಕೆಟ್ ಗಳಿಸಿದ ಮನೋಜ್ ತಿವಾರಿ ಯಶಸ್ವಿ ಬೌಲರ್ ಎನಿಸಿದರು.

ಉಳಿದಂತೆ ಆರ್ ಅಶ್ವಿನ್ 2 ವಿಕೆಟ್ , ಸೆಹ್ವಾಗ್, ದಿಂಡಾ ತಲಾ 1 ವಿಕೆಟ್ ಪಡೆದರು. ಬ್ಯಾಟಿಂಗ್ ನಲ್ಲಿ ವೈಫಲ್ಯ ಕಾಣುತ್ತಿರುವ ರೋಹಿತ್ ಶರ್ಮ 2 ಓವರ್ ಎಸೆದು 6 ರನ್ ನೀಡಿದರು. ಜಹೀರ್, ಇರ್ಫಾನ್ ವಿಕೆಟ್ ಪಡೆಯುವಲ್ಲಿ ವಿಫಲರಾದರು.

Story first published:  Tuesday, July 31, 2012, 22:05 [IST]
English summary
India beat Sri Lanka by 6 wicket to lead the series 3-1. Virat Kohli unbeaten 128 and Raina's 58 guided India to easy victory. SL riding high on Upul Tharanga, Lahiru Thirimanne's knocks, the hosts post 251/8 in their quota of 50 overs after deciding to bat first in the 4th ODI against India on Tuesday.
ಅಭಿಪ್ರಾಯ ಬರೆಯಿರಿ