Englishहिन्दीമലയാളംதமிழ்తెలుగు

ಸಚಿನ್ ಎಂದಾದರೂ 300 ರನ್ ಗಡಿ ದಾಟುವರೆ?

Posted by:
Published: Tuesday, July 24, 2012, 13:52 [IST]
 

ಸಚಿನ್ ಎಂದಾದರೂ 300 ರನ್ ಗಡಿ ದಾಟುವರೆ?
 

ಬೆಂಗಳೂರು, ಜು.24: ಕ್ರಿಕೆಟ್ ಅಭಿಮಾನಿಗಳು ಭಾರತ ಹಾಗೂ ಶ್ರೀಲಂಕಾ ಒನ್ ಡೇ ಸೀರಿಸ್ ನತ್ತ ಆಕರ್ಷಿತರಾಗುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್ ನ ಸದ್ದಿಲ್ಲದೆ ಹಾಶಿಂ ಆಮ್ಲಾ 300 ರನ್ ಗಡಿ ದಾಟಿ ಸುದ್ದಿಯಾದರು. ಈಗ ಭಾರತ ಕ್ರಿಕೆಟ್ ಪ್ರೇಮಿಗಳಿ 300 ಕ್ಲಬ್ ಪಟ್ಟಿಯನ್ನು ನೋಡಿ ಆರಾಧ್ಯದೈವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಯಾವಾಗ ಸೇರ್ಪಡೆಯಾಗುತ್ತಾರೆ? ಎಂಬ ನಿರೀಕ್ಷೆ ಹೊತ್ತಿದ್ದಾರೆ.

* ತ್ರಿಶತಕ ಸಾಧಕರ ಸಂಪೂರ್ಣ ಪಟ್ಟಿ ನೋಡಿ
* ಸಚಿನ್ ತೆಂಡೂಲ್ಕರ್ 100 ಶತಕಗಳ ಪಟ್ಟಿ

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಅನೇಕಾನೇಕ ದಾಖಲೆಗಳನ್ನು ಮೆಟ್ಟಿ ನಿಂತಿರುವ ವಾಮನ ಮೂರ್ತಿ ಸಚಿನ್ ತೆಂಡೂಲ್ಕರ್ ಅವರು 22ಕ್ಕೂ ವಸಂತಗಳ ಅಧಿಕ ವೃತ್ತಿ ಜೀವನದಲ್ಲಿ ಒಮ್ಮೆ ಕೂಡಾ 300 ರನ್ ಬಾರಿಸಿಲ್ಲದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ತಂದಿದೆ. ವಿಶ್ವಕಪ್ ಗೆಲ್ಲುವ ಮಹಾ ಬಯಕೆ ತೀರಿಸಿಕೊಂಡಿರುವ ಸಚಿನ್ ತಮ್ಮ ಮುಂದಿನ ಗುರಿ 300 ರನ್ ಗಡಿಯತ್ತ ಇಟ್ಟಿರಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಹೊತ್ತಿದ್ದಾರೆ.

300 ರನ್ ಗಡಿ ದಾಟಿದ ಘಟಾನುಘಟಿ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ವೀರೇಂದ್ರ ಸೆಹ್ವಾಗ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬ್ರಾಡ್ಮನ್ ರಂತೆ ಎರಡು ಬಾರಿ ತ್ರಿಶತಕ ಗಳಿಸಿದ ದಾಖಲೆಯನ್ನು ಸೆಹ್ವಾಗ್ ಹೊಂದಿದ್ದಾರೆ.

2004ರಲ್ಲಿ ಪಾಕಿಸ್ತಾನದ ವಿರುದ್ಧ ಮುಲ್ತಾನ್ ನಲ್ಲಿ ಮೊದಲ ತ್ರಿಶತಕ ಬಾರಿಸಿದ ಸೆಹ್ವಾಗ್ ನಂತರ ಚೆನ್ನೈನಲ್ಲಿ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳಿಸಿ ಭಾರತ ಪರ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ತೆಂಡೂಲ್ಕರ್ ಒಟ್ಟು 188 ಟೆಸ್ಟ್ ಪಂದ್ಯಗಳನ್ನು ಆಡಿ 15,470 ರನ್ ಗಳಿಸಿದ್ದಾರೆ. ಇತ್ತೀಚೆಗೆ ಒಟ್ಟಾರೆ 100ನೇ ಶತಕ ದಾಖಲಿಸಿದ್ದಾರೆ. ಆದರೆ, ಐದು ದಿನಗಳ ಕ್ರಿಕೆಟ್ ಮಾದರಿಯಲ್ಲಿ ಈವರೆಗೂ ಸಚಿನ್ ಬ್ಯಾಟ್ ನಿಂದ ಸಿಡಿದಿದ್ದು 248 ರನ್ ಮಾತ್ರ. ಅದು 2004ರಲ್ಲಿ ಬಾಂಗ್ಲಾದೇಶದ ಮೇಲೆ ಹೊಡೆದ ವೈಯಕ್ತಿಕ ಅತ್ಯಧಿಕ ಮೊತ್ತ.

39 ವರ್ಷದ ಕ್ರಿಕೆಟರ್ ಈವರೆಗೂ 6 ಡಬ್ಬಲ್ ಸೆಂಚುರಿ ಬಾರಿಸಿದ್ದಾರೆ. ಒಟ್ಟಾರೆ ಟೆಸ್ಟ್ ನಲ್ಲಿ 51ಶತಕಗಳು ಬಂದಿದೆ. ಸಚಿನ್ ಸಾಧನೆಯ ಮೈಲಿಗಲ್ಲು ದಾಟಲು ಮತ್ತೊಬ್ಬ ಆಟಗಾರನಿಗೆ ತುಂಬಾ ಕಷ್ಟವಾಗಬಹುದು. ಅದರೆ, ಸಚಿನ್ ಅವರ ವೃತ್ತಿ ಜೀವನವನ್ನು ಮುಂದೊಂದು ದಿನ ಅವಲೋಕಿಸಿದರೆ 300 ರನ್ ಗಳಿಸಿಲ್ಲದಿರುವುದು ಎದ್ದು ಕಾಣುತ್ತದೆ.

ಈ ಮುಂಚೆ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಡಬ್ಬಲ್ ಸೆಂಚುರಿ ಬಾರಿಸುವ ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ಸಚಿನ್ ನಿರಾಶೆ ಮಾಡಲಿಲ್ಲ. ಒನ್ ಡೇ ಮ್ಯಾಚ್ ನಲ್ಲಿ ದ್ವಿಶತಕ ಸಿಡಿಸಿಬಿಟ್ಟರು. ನಂತರ ಕಳೆದ ವರ್ಷ ಈ ದಾಖಲೆಯನ್ನು ಸೆಹ್ವಾಗ್ ಮುರಿದರು.

ಈಗ ಸಚಿನ್ ಮೇಲೆ ಒತ್ತಡ ಹೇರಿ 300 ರನ್ ಗಳಿಸುವ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟ. ಸಚಿನ್ ಆಟದಲ್ಲಿ ಮೊದಲಿನ ವೇಗವಿಲ್ಲ, ವಯೋಸಹಜ ಸಮಸ್ಯೆಗಳು ಸಚಿನ್ ರನ್ನು ಕಾಡುತ್ತಿದೆ.

ಸಚಿನ್ ರೆ ಹೋಲಿಸಿದರೆ ಬ್ರಿಯಾನ್ ಲಾರಾ ರನ್ ದಾಹ ಅಧಿಕ ಎನ್ನಬಹುದು. 300ರನ್ ಗಡಿ ಎರಡು ಬಾರಿ ದಾಟಿ, 400 ರನ್ ಬಾರಿಸಿ ಔಟಾಗದೆ ಉಳಿದ ಲಾರಾ, ಪ್ರಥಮ ದರ್ಜೆ ಪಂದ್ಯದಲ್ಲಿ 501 ರನ್ ಗಳಿಸಿದ ವಿಶಿಷ್ಟ ದಾಖಲೆಯನ್ನು ಹೊಂದಿದ್ದಾರೆ. ಬ್ರಾಡ್ ಮನ್ ಕೂಡಾ ಎರಡು ತ್ರಿಶತಕ ಸಿಡಿಸಿದ್ದರು.

ಲಾರಾ, ಬ್ರಾಡ್ಮನ್ ಅಲ್ಲದೆ, ಗ್ಯಾರಿ ಸೋಬರ್ಸ್, ಲೆನ್ ಹಟನ್, ವ್ಯಾಲಿ ಹಮ್ಮಡ್, ಮಹೇಲ ಜಯವರ್ದನೆ ಮುಂತಾದ ಅದ್ಭುತ ಬ್ಯಾಟ್ಸ್ ಮನ್ ಗಳಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಸಚಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ದಿನಗಟ್ಟಲೆ ಕ್ರೀಸ್ ನಲ್ಲಿ ನಿಂತು 300 ರನ್ ಗಳಿಸುತ್ತಾರೆ ಎಂಬುದು ಕಲ್ಪಿಸಿಕೊಳ್ಳಲು ಖುಷಿಕೊಟ್ಟರೂ ಸದ್ಯಕ್ಕಂತೂ ಕಷ್ಟಸಾಧ್ಯ. ಆದರೆ, ಅಭಿಮಾನಿಗಳಿಗಂತೂ ಸಚಿನ್ ಅವರು ಈ ಪಟ್ಟಿಗೆ ಸೇರುವ ಆಶಯ ಇದ್ದೇ ಇದೆ

English summary
On Sunday(Jul.22), there was a new member in the Test 300-club. South African Hashim Amla was the latest and first from his country. Now, the elite club has 22 members. But most of the Indian fans want to see their favourite cricketing son Sachin Tendulkar in that group.
ಅಭಿಪ್ರಾಯ ಬರೆಯಿರಿ