Englishहिन्दीമലയാളംதமிழ்తెలుగు

ವಿರಾಟ್ ಹ್ಯಾಟ್ರಿಕ್ ಶತಕ, ಶ್ರೀಲಂಕಾಗೆ ಸೋಲು

Posted by:
Updated: Sunday, July 22, 2012, 15:31 [IST]
 

ವಿರಾಟ್ ಹ್ಯಾಟ್ರಿಕ್ ಶತಕ, ಶ್ರೀಲಂಕಾಗೆ ಸೋಲು
 

ಹಂಬಂಟೋಟಾ, ಜು.22: ವಿರಾಟ್ ಕೊಹ್ಲಿ ಅವರ ಹ್ಯಾಟ್ರಿಕ್ ಶತಕ(106)ದ ಅಬ್ಬರಕ್ಕೆ ಬೆಚ್ಚಿದ ಲಂಕಾ ಸಿಂಹಗಳು ಬಾಲ ಮುದುರಿವೆ. ಶ್ರೀಲಂಕಾ ವಿರುದ್ಧ ಸರಣಿಯ ಮೊದಲ ಏಕದಿನ ಪಂದ್ಯವನ್ನು ಗೆಲ್ಲಲು ಶತಕ ವಂಚಿತ ವೀರೇಂದ್ರ ಸೆಹ್ವಾಗ್(96) ಹಾಗೂ ಇರ್ಫಾನ್ ಪಠಾಣ್ ಬೌಲಿಂಗ್ ಕೂಡಾ ನೆರವಾಗಿದೆ.

315 ರನ್ ಗಳ ದೊಡ್ಡ ಸವಾಲು ಎದುರಿಸಿದ ಶ್ರೀಲಂಕಾ 21 ರನ್‌ಗಳಿಂದ ಸೋಲೊಪ್ಪಿಕೊಂಡಿದೆ. ಇಲ್ಲಿನ ಮಹೇಂದ್ರ ರಾಜಪಕ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು.[ಸ್ಕೋರ್ ಕಾರ್ಡ್]

ಕಠಿಣ ಗುರಿ ಪಡೆದ ಶ್ರೀಲಂಕಾ ತಂಡವನ್ನು ವಿಕೆಟ್ ಕೀಪರ್ ಕುಮಾರ ಸಂಗಕ್ಕರ (133) ಗೆಲುವಿನತ್ತ ಕೊಂಡೊಯ್ದು ಎಂಎಸ್ ಧೋನಿಗೆ ಆತಂಕ ತಂದಿದ್ದರು. ಆದರೆ, ಭಾರತದ ವೇಗಿ ಇರ್ಫಾನ್ ಪಠಾಣ್(37ಕ್ಕೆ2), ಉಮೇಶ್ ಯಾದವ್ (76 ಕ್ಕೆ 2), ಅಶ್ವಿನ್ (46ಕ್ಕೆ2) ಉತ್ತಮ ಬೌಲಿಂಗ್ ಪ್ರದರ್ಶಿಸಿ ಲಂಕಾಗೆ ಕಡಿವಾಣ ಹಾಕಿದರು.

ಜಹೀರ್ ಖಾನ್ (63ಕ್ಕೆ 1) ಮತ್ತು ಪ್ರಗ್ಯಾನ್ ಓಜಾ(44ಕ್ಕೆ1) ಉತ್ತಮ ಸಾಥ್ ನೀಡಿದರು. 125 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಲ್ಲಿ ತನ್ನ 331ನೆ ಏಕದಿನ ಪಂದ್ಯದಲ್ಲಿ 14ನೆ ಶತಕ ಪೂರೈಸಿದ ಸಂಗಕ್ಕಾರ ಹೋರಾಟದ ಆಟ ವ್ಯರ್ಥವಾಯಿತು.

ಸೆಹ್ವಾಗ್ ಅಬ್ಬರ: 46ನೆ ಪಂದ್ಯದಲ್ಲಿ 16ನೆ ಶತಕ ದಾಖಲಿಸುವ ಅವಕಾಶದಿಂದ ವಂಚಿತಗೊಂಡರು. 97 ಎಸೆತ ಗಳಲ್ಲಿ 10 ಬೌಂಡರಿಗಳ ನೆರವಿನಲ್ಲಿ 96 ರನ್ ಗಳಿಸಿದ ಸೆಹ್ವಾಗ್ ಅನಗತ್ಯವಾಗಿ ರನ್ ಕದಿಯಲು ಯತ್ನಿಸಿ ರನೌಟಾದರು.

ಆರಂಭಿಕ ಆಟಗಾರ ಗೌತಮ್ ಗಂಭೀರ್ ವಿಕೆಟನ್ನು ಬೇಗನೆ ಕಳಕೊಂಡಿತು. ನಂತರ ವಿರಾಟ್ ಕೊಹ್ಲಿ ಮತ್ತು ಸೆಹ್ವಾಗ್ ಲಂಕಾ ಬೌಲರ್ ಗಳನ್ನು ಮನಬಂದಂತೆ ಚಚ್ಚಿದರು. ಅವರಿಬ್ಬರು ಎರಡನೇ ವಿಕೆಟಿಗೆ 173 ರನ್ ಗಳ ಜತೆಯಾಟ ನಡೆಸಿದರು. ತುಂಬಾ ಸಮಯದ ಬಳಿಕ ತಂಡಕ್ಕೆ ಮರಳಿದ ಸೆಹ್ವಾಗ್ ಅಮೋಘವಾಗಿ ಆಡಿದರು.

ಕೊಹ್ಲಿ ಲಂಕಾ ವಿರುದ್ಧ ತನ್ನ ಹ್ಯಾಟ್ರಿಕ್ ಶತಕ ಪೂರೈಸಿದ ಬಳಿಕ ಪೆರಾರಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 113 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 106 ರನ್ ಬಾರಿಸಿದರು. ಕಳೆದ ಐದು ಏಕದಿನ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ 133,108,66,183 ಹಾಗೂ 106 ಬಾರಿಸಿದ್ದಾರೆ ಎಂದರೆ ಅವರ ಫಾರ್ಮ್ ಯಾವರೀತಿ ಇದೆ ಎಂಬುದು ಅರ್ಥವಾಗುತ್ತದೆ.

ಕೆಳಸರದಿಯಲ್ಲಿ ರೈನಾ ಅರ್ಧಶತಕ ಹಾಗೂ ಧೋನಿ ಚಿನಕುರುಳಿ ಆಟ ತಂಡದ ದೊಡ್ಡ ಮೊತ್ತಕ್ಕೆ ನೆರವಾದರು. ಮಲಿಂಗಾ ಸಹಿತ ಲಂಕಾದ ಬೌಲರ್ ಗಳು ದುಬಾರಿಯಾದರು. ಭಾರತ ಆರು ವಿಕೆಟ್ ನಷ್ಟಕ್ಕೆ 314 ರನ್ ಮಾಡಿತು.

ಸುರೇಶ್ ರೈನಾ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ಬಾರಿಸಿದರು. ರೈನಾ ನಿರ್ಗಮಿಸಿದ ಬೆನ್ನಲ್ಲೆ ಧೋನಿ 35 ರನ್(29 ಎಸೆತ, 3ಬೌಂಡರಿ, 1ಸಿಕ್ಸರ್) ಚೆಚ್ಚಿ ಪೆವಿಲಿಯನ್ ಸೇರಿದರು. ಆಲ್‌ರೌಂಡರ್ ಇರ್ಫಾನ್ ಪಠಾಣ್ ಔಟಾಗದೆ 7 ರನ್ ಗಳಿಸಿದರು. ಲಂಕಾದ ಪರ ತಿಸಾರ ಪೆರೆರಾ 70ಕ್ಕೆ 3 ವಿಕೆಟ್, ಕುಲಶೇಖರ 20ಕ್ಕೆ 1 ಮತ್ತು ಏಂಜೆಲೊ ಮ್ಯಾಥ್ಯೂಸ್ 58ಕ್ಕೆ 1 ವಿಕೆಟ್ ಹಂಚಿಕೊಂಡರು.

Story first published:  Sunday, July 22, 2012, 8:50 [IST]
English summary
There were two tons in Hambantota on Saturday night. But only one centurion ended up on the winning side. It was Virat Kohli's 106 that proved better than Kumar Sungakkara's 133 in the first One Day International between India and Sri Lanka.
ಅಭಿಪ್ರಾಯ ಬರೆಯಿರಿ