Englishहिन्दीമലയാളംதமிழ்తెలుగు

ಮಾರ್ಕ್ ಬೌಚರ್ ಕ್ರಿಕೆಟ್ ಜೀವನ ದುರಂತ ಅಂತ್ಯ

Posted by:
Updated: Wednesday, July 11, 2012, 13:25 [IST]
 

ಮಾರ್ಕ್ ಬೌಚರ್ ಕ್ರಿಕೆಟ್ ಜೀವನ ದುರಂತ ಅಂತ್ಯ
 

ಟೌಂಟನ್, ಜು.11: ದಕ್ಷಿಣ ಆಫ್ರಿಕಾದ ಖ್ಯಾತ ವಿಕೆಟ್‌ಕೀಪರ್, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮಾರ್ಕ್ ಬೌಚರ್ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನ ದುರಂತ ಅಂತ್ಯ ಕಂಡಿದೆ. ಕಣ್ಣು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾರ್ಕ್ ಬೌಚರ್ ಎಲ್ಲಾ ಬಗೆಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ. ಸೋಮವಾರ (ಜು.9) ಸಾಮರ್‌ಸೆಟ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ವಿಕೆಟ್‌ಕೀಪಿಂಗ್ ನಡೆಸುತ್ತಿದ್ದಾಗ ಬೇಲ್ ಹಾರಿ ಕಣ್ಣಿಗೆ ಗಂಭೀರ್ ಗಾಯವಾಗಿತ್ತು.

ಶಸ್ತ್ರಚಿಕಿತ್ಸೆಗೊಳಗಾಗಿರುವ ಬೌಚರ್, ನಿವೃತ್ತಿಯಾಗಲು ನಿರ್ಧರಿಸಿದ್ದಾರೆ ಎಂದು ಬೌಚರ್ ನಿವೃತ್ತಿಯ ಹೇಳಿಕೆಯನ್ನು ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಓದಿ ಹೇಳಿದರು. ಈಗಾಗಲೆ ಏಕದಿನ ಕ್ರಿಕೆಟ್‌ನಿಂದ ದೂರವುಳಿದಿದ್ದ ಬೌಚರ್ ಅವರು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ವೇಳೆ 150ನೆ ಪಂದ್ಯವನ್ನು ಆಡುವ ನಿರೀಕ್ಷೆಯಿತ್ತು. ಇದು ಅವರ ಕೊನೆಯ ಇಂಗ್ಲೆಂಡ್ ಪ್ರವಾಸವಾಗಿತ್ತು.

ಸೋಮವಾರ ನಡೆದ ಅಭ್ಯಾಸ ಪಂದ್ಯದ ವೇಳೆ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ ಬೌಲಿಂಗ್‌ನಲ್ಲಿ ಚೆಂಡು ಸ್ಟಂಪ್‌ಗೆ ತಾಗಿದಾಗ ವಿಕೆಟ್‌ಕೀಪರ್ ಬೌಚರ್‌ರ ಎಡಗಣ್ಣಿಗೆ ಬೇಲ್ ಅಪ್ಪಳಿಸಿ ಗಾಯವಾಗಿದೆ. ಮೂರು ಗಂಟೆಗಳ ಕಾಲ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬೌಚರ್ ಭವಿಷ್ಯದಲ್ಲಿ ಕ್ರಿಕೆಟ್ ಮೈದಾನಕ್ಕೆ ಮರಳುವುದು ಸಂಶಯವೆನಿಸಿತ್ತು. ಕಣ್ಣಿನ ಶಸ್ತ್ರಚಿಕಿತ್ಸೆ ಅವರ ಕ್ರಿಕೆಟ್ ಜೀವನವನ್ನು ಕೊನೆಗೊಳಿಸಿರುವುದು ವಿಷಾದನೀಯ. [ಮಾರ್ಕ್ ಬೌಚರ್ ಕ್ರಿಕೆಟ್ ಅಂಕಿ ಅಂಶ]

35 ವರ್ಷದ ಮಾರ್ಕ್ ಬೌಚರ್ ಅವರು ದಕ್ಷಿಣ ಆಫ್ರಿಕಾ ಪರ 147 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 150ನೇ ಕ್ರಿಕೆಟ್ ಪಂದ್ಯವಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 555 ಬಲಿ ಪಡೆದ ವಿಶ್ವದಾಖಲೆ ಬೌಚರ್ ಹೆಸರಿನಲ್ಲಿದೆ. 532 ಕ್ಯಾಚು ಹಾಗೂ 23 ಸ್ಟಂಪಿಂಗ್ ಮಾಡಿದ್ದಾರೆ.

296 ಏಕದಿನ ಪಂದ್ಯಗಳಲ್ಲಿ 425 ಬಲಿ ಪಡೆದಿದ್ದಾರೆ. ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 19 ವಿಕೆಟ್ ಉರುಳಿಸಿರುವ ಬೌಚರ್ ಅದ್ವೀತಿಯ ದಾಖಲೆ ಹೊಂದಿದ್ದಾರೆ. ಒಟ್ಟಾರೆ 998 ಅಂತಾರಾಷ್ಟ್ರೀಯ ವಿಕೆಟ್ ಗಳಿಸಿದ ಕೀರ್ತಿ ಬೌಚರ್ ಗೆ ಸಲ್ಲುತ್ತದೆ (ಇದರಲ್ಲಿ ಫೀಲ್ಡರ್ ಆಗಿ ಒಂದು ಕ್ಯಾಚ್ ತೆಗೆದುಕೊಂಡಿದ್ದು ಸೇರಿದೆ)

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ 905 ಬಲಿ ಪಡೆದಿದ್ದರು. ಇಯಾನ್ ಹೀಲಿ 628, ಕುಮಾರ್ ಸಂಗಕ್ಕಾರ 558 ಹಾಗೂ ಎಂಎಸ್ ಧೋನಿ 496 ಹೀಗಾಗಿ ಬೌಚರ್ ದಾಖಲೆ ಹಲವು ವರ್ಷಗಳ ಹಾಗೆ ಉಳಿಯುವ ಸಾಧ್ಯತೆಯಿದೆ.

ಮಂಗಳವಾರ ಮಾರ್ಕ್ ಬೌಚರ್ ಅವರ ನಿವೃತ್ತಿ ಪತ್ರವನ್ನು ಓದಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರಹಾಂ ಸ್ಮಿತ್ ಕೂಡಾ ಭಾವುಕರಾಗಿದ್ದರು. ' ಈ ಪತ್ರವನ್ನು ಓದಲು ತುಂಬಾ ದುಃಖವಾಗುತ್ತದೆ. ನಾನು ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಯುಕೆ ಪ್ರವಾಸಕ್ಕೆ ಅಣಿಯಾಗುತ್ತಿದೆ. ಯುಕೆ ಪ್ರವಾಸ ಕೈ ತಪ್ಪಬಹುದು ಎಂದು ಕೊಂಡಿದ್ದೆ ಆದರೂ ಇನ್ಮುಂದೆ ಯಾವ ಟೂರ್ನಿ ಆಡಲು ಸಾಧ್ಯವಾಗುವುದಿಲ್ಲ'

"I had never anticipated announcing my retirement now, but circumstances have dictated differently. I have a number of thank you's to make to people who have made significant contributions during my International career, which I will do in due course. For now I would like to thank the huge number of people, many of whom are strangers, for their heartfelt support during the past 24 hours. I am deeply touched by all the well wishes. I wish the team well in the UK, as I head home and onto a road of uncertain recovery."

ಪತ್ರ ಓದಿದ ನಂತರ ಮಾರ್ಕ್ ಬೌಚರ್ ಜೊತೆಗಿನ 14 ವರ್ಷಗಳ ಒಡನಾಟವನ್ನು ಗ್ರಹಾಂ ಸ್ಮಿತ್ ಸ್ಮರಿಸಿಕೊಂಡರು. ಮೈದಾನದಲ್ಲಿ ಆಫ್ರಿಕಾದ ನಿಜವಾದ ಯೋಧನಂತೆ ಮಾರ್ಕ್ ಮುನ್ನುಗ್ಗಿದ್ದರು ಎಂದು ಹೊಗಳಿದರು.

Story first published:  Wednesday, July 11, 2012, 11:54 [IST]
English summary
South Africa wicketkeeper Mark Boucher has announced his retirement from international cricket on Tuesday(Jul.10) after he underwent surgery on his eye on Monday(Jul.9).
ಅಭಿಪ್ರಾಯ ಬರೆಯಿರಿ