Englishहिन्दीമലയാളംதமிழ்తెలుగు

ದ್ರಾವಿಡ್ ಗೆ ಖೇಲ್ ರತ್ನ, ಯುವಿಗೆ ಅರ್ಜುನ: ವಿಶಿ ಸ್ವಾಗತ

Posted by:
Updated: Sunday, July 8, 2012, 16:27 [IST]
 

ದ್ರಾವಿಡ್ ಗೆ ಖೇಲ್ ರತ್ನ, ಯುವಿಗೆ ಅರ್ಜುನ: ವಿಶಿ ಸ್ವಾಗತ
 

ನವದೆಹಲಿ, ಜು.8: ಕೊನೆಗೂ ಕ್ರೀಡಾ ಸಚಿವಾಲಯ ಹಾಗೂ ಬಿಸಿಸಿಐ ನಡುವೆ ಸಂವಹನ ಸಂಪರ್ಕ ಏರ್ಪಟ್ಟಿದೆ. ಈ ಬಾರಿಯ ರಾಜೀವ್ ಗಾಂಪ್ಹಿ ಖೇಲ್ ರತ್ನ ಪ್ರಶಸ್ತಿ ಹಾಗೂ ಅರ್ಜುನ ಪ್ರಶಸ್ತಿಗೆ ಕ್ರೀಡಾಪಟುಗಳ ಹೆಸರನ್ನು ಬಿಸಿಸಿಐ ಸೂಚಿಸಿದೆ. ನಾಮ ನಿರ್ದೇಶನ ಮಾಡುವ ಕೊನೆ ದಿನಾಂಕವನ್ನು ಕ್ರೀಡಾ ಸಚಿವಾಲಯ ಜು.20ಕ್ಕೆ ವಿಸ್ತರಿಸಿದ್ದು ಅರ್ಹ ಕ್ರಿಕೆಟರ್ ಗಳಿಗೆ ಪ್ರಶಸ್ತಿ ಸಿಗುವ ಅವಕಾಶ ಲಭಿಸಿದೆ.

ಇತ್ತೀಚೆಗೆ ನಿವೃತ್ತಿ ಘೋಷಿಸಿದ ಕ್ರಿಕೆಟ್ ಜಗತ್ತಿನ ಮಹಾಗೋಡೆ ರಾಹುಲ್ ದ್ರಾವಿಡ್ ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಯುವರಾಜ್ ಸಿಂಗ್ ಅವರ ಹೆಸರನ್ನು ಅರ್ಜುನ್ ಪ್ರಶಸ್ತಿಗೆ ಬಿಸಿಸಿಐ ಸೂಚಿಸಿದೆ.

ಆದರೆ, ಅರ್ಜುನ ಪ್ರಶಸ್ತಿಗೆ ವಿಶೇಷವಾಗಿ ಏಕದಿನ ಕ್ರಿಕೆಟ್ ನಲ್ಲಿ ನವತಾರೆ ವಿರಾಟ್ ಕೊಹ್ಲಿ ಅವರಿಗೆ ಈ ಬಾರಿ ಅರ್ಜುನ ಪ್ರಶಸ್ತಿ ದೊರೆಯುವ ಎಲ್ಲಾ ನಿರೀಕ್ಷೆಗಳನ್ನು ಬಿಸಿಸಿಐ ಹುಸಿ ಮಾಡಿಬಿಟ್ಟಿದೆ. ವಿಶ್ವಕಪ್ ಹಾಗೂ ಅದಕ್ಕಿಂತ ಮೊದಲಿನ ಪ್ರದರ್ಶನವನ್ನು ಗಮನಿಸಿ ಯುವರಾಜ್ ಅವರ ಹೆಸರನ್ನು ಸೂಚಿಸಲಾಗಿದೆ. ಹೀಗಾಗಿ ಪ್ರತಿಭಾವಂತ ಆಟಗಾರ ವಿರಾಟ್ ಕೊಹ್ಲಿ ಅವರ ಹೆಸರು ಸೇರಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದಿನ ವಾರ ನಾವು ಕೇಂದ್ರ ಸರ್ಕಾರಕ್ಕೆ ರಾಹುಲ್ ದ್ರಾವಿಡ್ ಹೆಸರನ್ನು ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ್ ಪ್ರಶಸ್ತಿಗೆ ಯುವರಾಜ್ ಸಿಂಗ್ [ಸಂಪೂರ್ಣ ಅಂಕಿ ಅಂಶ ನೋಡಿ]ಅವರ ಹೆಸರನ್ನು ಸೂಚಿಸಿದ್ದೇವೆ ಎಂದು ಬಿಸಿಸಿಐ ಸಿಎಒ ಪ್ರೊ. ರತ್ನಾಕರ್ ಶೆಟ್ಟಿ ತಿಳಿಸಿದರು.

ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ಬಳಿಕ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದರು. 1996ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ರಾಹುಲ್ ದ್ರಾವಿಡ್ ಅವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟಿನಲ್ಲಿ 24 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. 164 ಟೆಸ್ಟ್ ಹಾಗೂ 344 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ದ್ರಾವಿಡ್ ಆಡಿದ್ದಾರೆ. [ಸಂಪೂರ್ಣ ಅಂಕಿ ಅಂಶ ನೋಡಿ]

ದ್ರಾವಿಡ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದರೆ, ಸಚಿನ್ ತೆಂಡೂಲ್ಕರ್(1997-98) ಮತ್ತು ಮಹೇಂದ್ರ ಸಿಂಗ್ ಧೋನಿ(2007-08) ಬಳಿಕ ಈ ಪ್ರಶಸ್ತಿ ಪಡೆದ ಮೂರನೇ ಕ್ರಿಕೆಟಿಗನಾಗಲಿದ್ದಾರೆ. ಇದುವರೆಗೆ 20 ಮಂದಿ ಕ್ರೀಡಾಳುಗಳು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇದುವರೆವಿಗೂ 44 ಕ್ರಿಕೆಟರ್ ಗಳಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿದೆ. ಇವರಲ್ಲಿ ಸುನಿಲ್ ಗವಾಸ್ಕರ್(1975), ಜಿಆರ್ ವಿಶ್ವನಾಥ್(1977-78), ಕಪಿಲ್ ದೇವ್ (1979-80), ಸೈಯದ್ ಕಿರ್ಮಾನಿ(1980-81), ಮೋಹಿಂದರ್ ಅಮರನಾಥ್ (1982), ರವಿಶಾಸ್ತ್ರಿ (1984), ಸಚಿನ್ ತೆಂಡೂಲ್ಕರ್ (1994), ಸೌರವ್ ಗಂಗೂಲಿ (1997), ರಾಹುಲ್ ದ್ರಾವಿಡ್ (1998), ವಿವಿಎಸ್ ಲಕ್ಷ್ಮಣ್ (2001), ವೀರೇಂದರ್ ಸೆಹ್ವಾಗ್ (2002), ಗೌತಮ್ ಗಂಭೀರ್ (2009), ಜಹೀರ್ ಖಾನ್ (2011) ಮತ್ತಿತ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿಶಿ ಸಂತಸ : 'ಖೇಲ್ ರತ್ನ ಪ್ರಶಸ್ತಿ ಗಳಿಸಲು ದ್ರಾವಿಡ್ ಸೂಕ್ತ ವ್ಯಕ್ತಿ. 17-18 ವರ್ಷಗಳ ಕಾಲದ ಕ್ರೀಡಾ ಜೀವನದಲ್ಲಿ ಕರ್ನಾಟಕ, ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. ರಾಹುಲ್ ದ್ರಾವಿಡ್ ಅವರಿಗೆ ರಾಜೀವ್ ಖೇಲ್ ರತ್ನ ಪ್ರಶಸ್ತಿ ಸಿಕ್ಕರೆ ತುಂಬಾ ಸಂತೋಷ' ಎಂದು ಮಾಜಿ ಕ್ರಿಕೆಟಿಗ ಜಿಆರ್ ವಿಶ್ವನಾಥ್ ಅವರು ದಟ್ಸ್ ಕ್ರಿಕೆಟ್ ಗೆ ತಿಳಿಸಿದ್ದಾರೆ.

ರಾಜೀವ್ ಖೇಲ್ ರತ್ನ: ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗೌರವಿಸಿ, ಪ್ರೋತ್ಸಾಹಿಸಲು ನೀಡಲಾಗುವ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ಇದಾಗಿದೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಪ್ರಶಸ್ತಿಯು ಪದಕ, ಸನ್ಮಾನ ಪತ್ರ ಹಾಗೂ 7 ಲಕ್ಷ 50 ಸಾವಿರ ರು ನಗದು ಬಹುಮಾನ ಹೊಂದಿದೆ. 1991-91ರಲ್ಲಿ ಪ್ರಪ್ರಥಮ ಖೇಲ್ ರತ್ನ ಪ್ರಶಸ್ತಿಯನ್ನು ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ನೀಡಲಾಗಿದೆ. 2010-11 ಸಾಲಿನಲ್ಲಿ ಶೂಟರ್ ಗಗನ್ ನಾರಂಗ್ ಗೆ ಈ ಸನ್ಮಾನ ಸಿಕ್ಕಿತ್ತು.

Story first published:  Sunday, July 8, 2012, 14:43 [IST]
English summary
The Indian Cricket Board has decided to recommend recently retired stalwart Rahul Dravid for the prestigious Rajiv Gandhi Khel Ratna award and Yuvraj Singh for the Arjuna Award. But Virat Kohli name is misses Arjuna Award. Government had recently extended the deadline for the nominations till July 20.
ಅಭಿಪ್ರಾಯ ಬರೆಯಿರಿ