Englishहिन्दीമലയാളംதமிழ்తెలుగు

ವಿಶ್ವಕಪ್ ಗೆಲುವಿಗೆ ಧೋನಿ ಕಾರಣವಲ್ಲ : ಸೆಹ್ವಾಗ್

Posted by:
Updated: Friday, July 6, 2012, 22:21 [IST]
 

ವಿಶ್ವಕಪ್ ಗೆಲುವಿಗೆ ಧೋನಿ ಕಾರಣವಲ್ಲ : ಸೆಹ್ವಾಗ್
 

ನವದೆಹಲಿ, ಜು.6: ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಸಂಭ್ರಮ ಜನ ಮರೆಯುವ ಮುನ್ನ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ಮತ್ತೊಮ್ಮೆ ಕಿಡಿ ಹಾರಿಸಿದ್ದಾರೆ. ಭಾರತದ ವಿಶ್ವಕಪ್ ಗೆಲುವಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಕಾರಣ ಎನ್ನುವುದು ಸರಿಯಲ್ಲ. ಭಾರತ ಕಪ್ ಗೆಲ್ಲಲು ಇಡೀ ತಂಡ ಶ್ರಮಿಸಿದೆ. ಯಶಸ್ಸಿನ ಫಲ ತಂಡಕ್ಕೆ ಸೇರಬೇಕು ನಾಯಕನಿಗೆ ಮಾತ್ರವಲ್ಲ ಎಂದು ಸೆಹ್ವಾಗ್ ಶುಕ್ರವಾರ(ಜು.6) ಹೇಳಿದ್ದಾರೆ.

ಇದರಿಂದಾಗಿ ಎಂಎಸ್ ಧೋನಿ ಹಾಗೂ ವೀರೇಂದ್ರ ಸೆಹ್ವಾಗ್ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಭುಗಿಲೆದ್ದಿದೆ. ಶ್ರೀಲಂಕಾ ಪ್ರವಾಸಕ್ಕೆ ಹೊರಟಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ವೀರೇಂದ್ರ ಸೆಹ್ವಾಗ್ ಅವರಿಂದ ಉಪ ನಾಯಕತ್ವ ಪದವಿಯನ್ನು ಕಿತ್ತುಕೊಂಡು ಯುವ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

'ವಿಶ್ವಕಪ್ ಗೆಲ್ಲಲು ಕೇವಲ ನಾಯಕತ್ವ ಮಾತ್ರ ಕಾರಣವಲ್ಲ, ಧೋನಿಗೆ ಅತ್ಯುತ್ತಮ ತಂಡ ಸಿಕ್ಕಿತ್ತು. ಕೇವಲ ನಾಯಕತ್ವದಿಂದಾಗಿ ನಾವು ವಿಶ್ವಕಪ್ ಗೆದ್ದಿಲ್ಲ' ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.

'ಆಸ್ಟ್ರೇಲಿಯಾದಲ್ಲಿನ ಸೋಲಿಗೆ ಹಿರಿಯ ಆಟಗಾರರ ನಡುವಿನ ಭಿನ್ನಾಭಿಪ್ರಾಯವೇ ಕಾರಣ ಎಂಬ ಸುದ್ದಿ ಮತ್ತೊಮ್ಮೆ ಜೀವ ಬಂದಿದೆ.

ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ಟೂರ್ನಮೆಂಟ್ ನಿಂದ ಸೆಹ್ವಾಗ್ ಅವರನ್ನು ಹೊರಗಿಡಲಾಗಿತ್ತು. ಇದಕ್ಕೆ ಕೂಡ ಧೋನಿಯೇ ಕಾರಣ ಎನ್ನಲಾಗಿತ್ತು. ಶ್ರೀಲಂಕಾ ಪ್ರವಾಸಕ್ಕೆ ಸೆಹ್ವಾಗ್ ಮತ್ತು ಜಹೀರ್ ಖಾನ್ ತಂಡಕ್ಕೆ ಮರಳಿದ್ದಾರೆ. ತಂಡದಲ್ಲಿ ಗೌತಮ್ ಗಂಭೀರ್ ಹಾಗೂ ಅಜಿಂಕ್ಯ ರಹಾನೆ ಕೂಡಾ ಆರಂಭಿಕ ಆಟಗಾರನ ಜವಾಬ್ದಾರಿ ನಿಭಾಯಿಸಲಿದ್ದಾರೆ.

2007ರಲ್ಲಿ ಟ್ವೆಂಟಿ20 ವಿಶ್ವಕಪ್ ಹಾಗೂ 2011 ಕ್ರಿಕೆಟ್ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದು ಎಂಎಸ್ ಧೋನಿ ಅವರ ನಾಯಕತ್ವವಲ್ಲವೇ? ಎಂದು ಪತ್ರಕರ್ತರು ಎಸೆದ ಪ್ರಶ್ನೆಯನ್ನು ಸಮರ್ಥವಾಗಿ ಎದುರಿಸಿದ ಸೆಹ್ವಾಗ್ ಖಡಕ್ ಉತ್ತರ ನೀಡಿದರು.

ಒಂದು ಕಾಲದಲ್ಲಿ ಆಸ್ಟ್ರೇಲಿಯಾ ತಂಡ ಎಲ್ಲಾ ಮಾದರಿ ಆಟಗಳಲ್ಲಿ ನಂ.1 ಎನಿಸಿತ್ತು. ಅದಕ್ಕೆ ಕಾರಣ ಸಮತೋಲನವಾದ ಶಕ್ತಿಯುತ ತಂಡ. ಧೋನಿ ವಿಷಯದಲ್ಲೂ ಅದೇ ಆಗಿದೆ. ಆಸ್ಟ್ರೇಲಿಯಾದಂತೆ ಧೋನಿಗೂ ಉತ್ತಮ ತಂಡ ಸಿಕ್ಕಿತ್ತು ಹೀಗಾಗಿ ಅದ್ಭುತ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂದು ಸೆಹ್ವಾಗ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಸರಣಿ ಸಂದರ್ಭದಲ್ಲಿ ಸೆಹ್ವಾಗ್ ಹೆಸರು ಹೇಳದೆ 'ಹಿರಿಯ ಆಟಗಾರರು ಸರಿಯಾಗಿ ಮೈ ಬಗ್ಗಿಸಿ ಆಟವಾಡಿದರೆ ಮಾತ್ರ ನಾವು ಉತ್ತಮ ಆಟ ಪ್ರದರ್ಶಿಸಲು ಸಾಧ್ಯ' ಎಂದಿದ್ದರು.

ಇದಕ್ಕೆ ಮೈದಾನದಲ್ಲಿ ಅತ್ಯುತ್ತಮ ಕ್ಯಾಚ್ ಹಿಡಯುವ ಮೂಲಕ ಸೆಹ್ವಾಗ್ ಪ್ರತಿಕ್ರಿಯಿಸಿದ್ದರು. ಆದರೆ, ಈಗ ಮತ್ತೊಮ್ಮೆ ಇಬ್ಬರ ನಡುವೆ ಶೀತಲ ಸಮರ ಮತ್ತೊಮ್ಮೆ ಆರಂಭವಾಗುವ ಸೂಚನೆ ಸಿಕ್ಕಿದೆ. ಧೋನಿ ನಾಯಕತ್ವದ ಬಗ್ಗೆ ಸೆಹ್ವಾಗ್ ಪ್ರಶ್ನಿಸಿರುವು ಹಲವರ ಹುಬ್ಬೇರಿಸಿದೆ.

Story first published:  Friday, July 6, 2012, 17:10 [IST]
English summary
India's dashing opener Virender Sehwag on Friday took a dig at skipper MS Dhoni, as he said that India's World Cup win was a team effort and cannot be credited to the captain alone.
ಅಭಿಪ್ರಾಯ ಬರೆಯಿರಿ