Englishहिन्दीമലയാളംதமிழ்తెలుగు

ಟೀಂ ಇಂಡಿಯಾ ಕೋಚ್ ಆಗಲು ರಾಹುಲ್ ಸಿದ್ಧ

Posted by:
Published: Monday, July 2, 2012, 23:20 [IST]
 

ಟೀಂ ಇಂಡಿಯಾ ಕೋಚ್ ಆಗಲು ರಾಹುಲ್ ಸಿದ್ಧ
 

ಮುಂಬೈ, ಜು.2: ಕ್ರಿಕೆಟ್ ಜಗತ್ತಿನ ಅತ್ಯಂತ ಭರವಸೆಯ ಆಟಗಾರ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಕೋಚ್ ಆಗಲು ರೆಡಿ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕೋಚ್ ಆಗುವ ಅವಕಾಶ ಸಿಕ್ಕರೆ ನಾನು ಸಿದ್ಧ ಎಂಬ ಸುಳಿವು ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಕೋಚ್ ಆದರೂ ಆಗಬಹುದು ಎಂದು ರಾಹುಲ್ ದ್ರಾವಿಡ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಐಪಿಎಲ್ ಐದನೇ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

'ನಾನು ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಜೊತೆಗೆ 1, 2, 3 ಮಟ್ಟದ ಕೋಚಿಂಗ್ ಪ್ರಮಾಣಪತ್ರವನ್ನು ಹೊಂದಿಲ್ಲ. ಆದರೆ, ಅವಕಾಶ ಸಿಕ್ಕರೆ ಸಿದ್ಧ' ಎಂದಿದ್ದಾರೆ.

ರಾಹುಲ್ ಗೂ ಕೋಪ ಬರುತ್ತೆ: '16 ವರ್ಷಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವು ಬಾರಿ ತುಂಬಾ ಸಿಟ್ಟಾಗಿದ್ದೂ ಇದೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದೆ. ಸಿಟ್ಟಿನಿಂದ ಬ್ಯಾಟ್ ಎಸೆದಿದ್ದೆ. ಈ ರೀತಿ ನನ್ನ ಕ್ರಿಕೆಟ್ ಜೀವನದದಲ್ಲಿ ಒಂದೆರಡು ಬಾರಿ ಆಗಿರಬಹುದು ಅಷ್ಟೆ. ಬ್ಯಾಟಿಂಗ್ ವೇಳೆ ಕೆಟ್ಟ ಹೊಡೆತಕ್ಕೆ ಮುಂದಾಗಿ ಔಟ್ ಆದರೆ ಈ ರೀತಿ ಆಗುತಿತ್ತು. ಆದರೆ ನನಗೆ ಸಿಟ್ಟು ಬರುವುದು ತುಂಬಾ ಕಡಿಮೆ' ಎಂದು ಮಾಜಿ ನಾಯಕ ರಾಹುಲ್ ವಿವರಿಸಿದ್ದಾರೆ.

ಜಿ.ಆರ್.ವಿಶ್ವನಾಥ್ ಹಾಗೂ ಸುಧಾಕರ್ ರಾವ್ ಅವರು ನಿವೃತ್ತರಾದ ಬಳಿಕವೂ ಆಡುತ್ತಿದ್ದರು. ನನ್ನ ಕ್ರಿಕೆಟ್‌ನ ಆರಂಭದ ದಿನಗಳಲ್ಲಿ ಅವರೊಂದಿಗೆ ಲೀಗ್‌ನಲ್ಲಿ ಆಡಿದ್ದೆ. ಈಗ ಮತ್ತೆ ಲೀಗ್‌ನಲ್ಲಿ ಆಡಲು ಖುಷಿಯಾಗುತ್ತಿದೆ ಎಂದು ರಾಹುಲ್ ಹೇಳಿದರು.

'ಅಜರ್, ಸಚಿನ್, ಅಜರ್, ಸೌರವ್, ಲಕ್ಷ್ಮಣ್, ಸೆಹ್ವಾಗ್, ಗೌತಮ್ ಜೊತೆ ಆಡುವ ಸುವರ್ಣ ಅವಕಾಶ ನನಗೆ ಲಭಿಸಿದ್ದು ನನ್ನ ಪುಣ್ಯ. ಲಕ್ಷ್ಮಣ್ ಜೊತೆ ಟೆಸ್ಟ್ ಆಡಿದ್ದು ಖುಷಿ ಕೊಟ್ಟಿದೆ. ಆಸ್ಟ್ರೇಲಿಯಾದ ವಿರುದ್ಧ 233 ರನ್ ಹೊಡೆದಿದ್ದು ನನ್ನ ಶ್ರೇಷ್ಠ ಆಟ ಎನ್ನಬಹುದು' ಎಂದು ದ್ರಾವಿಡ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತ್ಯುತ್ತಮ ಆಟಗಾರ ಎನಿಸಿದ್ದ ರಾಹುಲ್ ದ್ರಾವಿಡ್ 164 ಟೆಸ್ಟ್ ಗಳಿಂದ 13,288 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 344 ಏಕದಿನ ಕ್ರಿಕೆಟ್ ಆಡಿ 10,889ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ.

ಭಾರತದ ನಾಯಕನಾಗಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಿದ್ದ ದ್ರಾವಿಡ್ ಉತ್ತಮ ಸಾಧನೆಯನ್ನು ತೋರಿರಲಿಲ್ಲ. ಆದರೆ, ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ನಂತರ ಇಂಡಿಯನ್ ಪ್ರಿಮಿಯರ್ ಲೀಗ್ ನ ಐದನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಭಾರಿ ಪ್ರಶಂಸೆಗೆ ಒಳಗಾಗಿದ್ದರು. ರಾಹುಲ್ ಈಅಗ್ ಕೋಚ್ ಆಗಲು ಸಿದ್ದ ಎಂದಿದ್ದಾರೆ ಆದರೆ, ಬಿಸಿಸಿಐ ಈ ಬಗ್ಗೆ ಯಾವಾಗ ನಿರ್ಧರಿಸುವುದೋ ಕಾದು ನೋಡಬೇಕಿದೆ.

English summary
The Wall of Indian Cricket, Rahul Dravid who recently retired from international cricket hinted that he was open to coaching the Indian cricket team in the future.
ಅಭಿಪ್ರಾಯ ಬರೆಯಿರಿ