Englishहिन्दीമലയാളംதமிழ்తెలుగు

ನಿಷೇಧಿತ 5 ಆಟಗಾರರ ಕ್ರಿಕೆಟ್ ಜೀವನ ಹಿನ್ನೋಟ

Posted by:
Published: Sunday, July 1, 2012, 11:45 [IST]
 

ಮುಂಬೈ, ಜು.1: ಐಪಿಎಲ್ 5 ಟೂರ್ನಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸ್ಪಾಟ್-ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಬಿಸಿಸಿಐ ಇತಿಶ್ರೀ ಹಾಡಿದೆ. ಯುವ ಕ್ರಿಕೆಟಿಗರ ವಿರುದ್ಧ ಬಿಸಿಸಿಐ ಶನಿವಾರ (ಜೂ.30) ಕಠಿಣ ಕ್ರಮ ಜರುಗಿಸಿದೆ.

ವೇಗಿ ಟಿ.ಪಿ. ಸುಧೀಂದ್ರಗೆ ಜೀವಾವಧಿ ನಿಷೇಧ ವಿಧಿಸಿದ್ದರೆ, ಇತರ ನಾಲ್ವರು ಆಟಗಾರರಿಗೆ ಕಡಿಮೆ ಪ್ರಮಾಣದ ಶಿಕ್ಷೆ ನೀಡಿದೆ. ಟಿವಿ ಚಾನೆಲೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸ್ಪಾಟ್ ಫಿಕ್ಸಿಂಗ್ ಬಹಿರಂಗ ಗೊಂಡಿತ್ತು.

ನಿಷೇಧಿತ 5 ಆಟಗಾರರ ಕ್ರಿಕೆಟ್ ಜೀವನ ಹಿನ್ನೋಟ

ಹಗರಣದ ಬಗ್ಗೆ ತನಿಖೆ ನಡೆಸಿದ್ದ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ರವಿ ಸವಾನಿ ವರದಿ ಸಲ್ಲಿಸಿದ್ದರು. ಅಧ್ಯಕ್ಷ ಎನ್. ಶ್ರೀನಿವಾಸನ್ ನೇತೃತ್ವದಲ್ಲಿ ಸಭೆ ವರದಿಯ ಬಗ್ಗೆ ಚರ್ಚೆ ನಡೆಸಿದ ಬಿಸಿಸಿಐ ಶಿಸ್ತು ಸಮಿತಿ, ಆಟಗಾರರಿಗೆ ನಿಷೇಧ ಹೇರುವ ನಿರ್ಧಾರ ಕೈಗೊಂಡರು.

ಐಸಿಸಿ, ಬಿಸಿಸಿಐ ಆಯೋಜಿಸುವ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ 28 ವರ್ಷ ಪ್ರಾಯದ ಸುಧೀಂದ್ರ ಜೀವನ ಪರ್ಯಂತ ಆಡುವಂತಿಲ್ಲ. ಶಲಭ್ ಶ್ರೀವಾಸ್ತವ್ ವಿರುದ್ಧ ಐದು ವರ್ಷಗಳ ನಿಷೇಧ ವಿಧಿಸಿದ್ದರೆ, ಮೊಹ್ನಿಶ್ ಮಿಶ್ರಾ, ಅಮಿತ್ ಯಾದವ್ ಮತ್ತು ಅಭಿನವ್ ಬಾಲಿ ಅವರನ್ನು ತಲಾ ಒಂದು ವರ್ಷದ ಅವಧಿಯ ನಿಷೇಧಕ್ಕೆ ಗುರಿಪಡಿಸಲಾಗಿದೆ.

ಈ ಆಟಗಾರರನ್ನು ಮೇ 15ರಂದು ಅಮಾನತುಗೊಳಿಸಲಾಗಿತ್ತು. ಅಂದಿನಿಂದ ನಿಷೇಧ ಜಾರಿಗೆ ಬರುತ್ತದೆ. ಈ ಹಿಂದೆ ಫಿಕ್ಸಿಂಗ್ ಆರೋಪ ಹೊತ್ತು ನಿಷೇಧಕ್ಕೆ ಒಳಗಿದ್ದ ಆಟಗಾರರಲ್ಲಿ ಅಜರುದ್ದೀನ್(ಆಜೀವ ನಿಷೇಧ), ಅಜಯ್ ಶರ್ಮ(ಆಜೀವ ನಿಷೇಧ), ಮನೋಜ್ ಪ್ರಭಾಕರ್(5 ವರ್ಷ), ಅಜಯ್ ಜಡೇಜ (5 ವರ್ಷ) ಪ್ರಮುಖರಾಗಿದ್ದರು.

ನಿಷೇಧಕ್ಕೆ ಒಳಗಾಗಿರುವ ಆಟಗಾರರ ಕ್ರಿಕೆಟ್ ಜೀವನದ ಅಧ್ಯಾಯ ಮುಗಿಯುವ ಮುನ್ನ ಅವರ ಪರಿಚಯದ ಪುಟ ಮತ್ತೊಮ್ಮೆ ತಿರುವಿ ಬಿಡೋಣ....

ಟಿಪಿ ಸುಧೀಂದ್ರ(ಮಧ್ಯಪ್ರದೇಶ, 28 ವರ್ಷ): ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ಪರ ಆಡುವ ತಡೂರಿ ಪ್ರಕಾಶ್ ಚಂದ್ರ ಸುಧೀಂದ್ರ, ಬಲಗೈ ಮಧ್ಯಮ ವೇಗಿ. ಎಡಗೈ ಬ್ಯಾಟ್ಸ್ ಮನ್. ಈಗ ನಾಶವಾಗಿರುವ ಇಂಡಿಯನ್ ಕ್ರಿಕೆಟ್ ಲೀಗ್(ICL) ನಲ್ಲಿ ಕಾಣಿಸಿಕೊಂಡಿದ್ದ ಆಟಗಾರ.

ಐಸಿಎಲ್ ನಲ್ಲಿ ಡೆಲ್ಲಿ ಜೈಂಟ್ಸ್ ಪರ ಆಡಿದ್ದ. 27 ಪ್ರಥಮ ದರ್ಜೆ ಪಂದ್ಯಗಳಿಂದ 108 ವಿಕೆಟ್ ಗಳಿಸಿದ್ದಾನೆ. ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿ 2012ರಲ್ಲಿ ಈತನನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು. ಐಪಿಎಲ್ ಐದನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಕೇವಲ ಮೂರು ಪಂದ್ಯಗಳನ್ನು ಸುಧೀಂದ್ರ ಆಡಿದ್ದಾನೆ.

2005ರಲ್ಲಿ ಇಂದೋರ್ ನಲ್ಲಿ ಜಾರ್ಖಂಡ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ಸುಧೀಂದ್ರ, 21 ಏಕದಿನ ಪಂದ್ಯಗಳಿಂದ 31 ವಿಕೆಟ್ ಕಬಳಿಸಿದ್ದ.

ಶಲಭ್ ಶ್ರೀವಸ್ತಾವ್ ( ಉತ್ತರ ಪ್ರದೇಶ, 30 ವರ್ಷ): ಶಲಭ್ ಜಗದೀಶ್ ಪ್ರಸಾದ್ ಶ್ರೀವಾಸ್ತವ್, ಗೆಳೆಯರ ಪಾಲಿಗೆ ಸೋನು. ಎಡಗೈ ವೇಗಿ ಹಾಗೂ ಬಲಗೈ ಬ್ಯಾಟ್ಸ್ ಮನ್. ಭಾರತ 19 ವರ್ಷ ವಯೋಮಿತಿಯೊಳಗಿನ ತಂಡದ ಸದಸ್ಯನಾಗಿ ವಿಶ್ವಕಪ್ ಎತ್ತಿದ ಕೀರ್ತಿವಂತ.

2000ರಲ್ಲಿ ಈ ಸಾಧನೆ ಕಂಡಿದ್ದ ಶಲಭ್ ಜೊತೆ ತಂಡದಲ್ಲಿ ಯುವರಾಜ್ ಸಿಂಗ್, ಮಹಮ್ಮದ್ ಕೈಫ್ ಹಾಗೂ ರಿತೆಂಧರ್ ಸಿಂಗ್ ಸೋಧಿ ಇದ್ದರು. ಇವರೆಲ್ಲರೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 1999-2000 ಸಾಲಿನಲ್ಲಿ ಉತ್ತರ ಪ್ರದೇಶ ಪರ ಶಲಭ್ ಕ್ರಿಕೆಟ್ ಜೀವನ ಆರಂಭಿಸಿದ.

41 ಪ್ರಥಮ ದರ್ಜೆ ಪಂದ್ಯಗಳಲ್ಲಿ 130 ವಿಕೆಟ್ ಕಬಳಿಸಿದ್ದ ಶಲಭ್ ಕೂಡಾ ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಟಿಪಿ ಸುಧೀಂದ್ರ ಜೊತೆ ಡೆಲ್ಲಿ ಜೈಂಟ್ಸ್ ತಂಡದಲ್ಲಿದ್ದರು. 33 ಏಕದಿನ ಪಂದ್ಯಗಳಲ್ಲಿ 44 ವಿಕೆಟ್ ಗಳಿಸಿದ ಶಲಭ್, ಇಂಡಿಯನ್ ಪ್ರಿಮಿಯರ್ ಲೀಗ್ ನಾಲ್ಕನೇ ಆವೃತ್ತಿಯಲ್ಲಿ 2011ರಲ್ಲಿ ಕಿಂಗ್ಸ್ XI ಪಂಜಾಬ್ ಪರ ಆಡಿದ್ದ.

ಅಮಿತ್ ಯಾದವ್(ಗೋವಾ, 22 ವರ್ಷ): ಅಮಿತ್ ರಾಮ್ ಕುಮಾರ್ ಯಾದವ್ ಒಬ್ಬ ಆಲ್ ರೌಂಡರ್, ಆಫ್ ಸ್ಪಿನ್ ಬೌಲರ್ ಹಾಗೂ ಬಲಗೈ ಬ್ಯಾಟ್ಸ್ ಮನ್. ಗೋವಾ ರಾಜ್ಯದ ಪರ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅಮಿತ್, 435 ರನ್ ಬಾರಿಸಿ 41 ವಿಕೆಟ್ ಗಳಿಸಿದ್ದಾನೆ. ದೇಶಿ ಏಕದಿನ ಪಂದ್ಯಗಳಲ್ಲೂ ಉತ್ತಮ ಸಾಧನೆ ತೋರಿದ್ದಾನೆ. 20 ಪಂದ್ಯಗಳಲ್ಲಿ 356 ರನ್ ಗಳಿಸಿ,21 ವಿಕೆಟ್ ಕಿತ್ತಿದ್ದಾನೆ, ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಜೊತೆ ಸಹಿ ಹಾಕಿದ್ದರು. ಈ ವರೆಗೂ ಯಾವುದೇ ಐಪಿಎಲ್ ಪಂದ್ಯಗಳನ್ನು ಆಡಿಲ್ಲ.

ಅಭಿನವ್ ಬಾಲಿ(ದೆಹಲಿ ಮತ್ತು ಹಿಮಾಚಲ್ ಪ್ರದೇಶ, 27 ವರ್ಷ): ಬಾಲಿ ಬಲಗಿ ಬ್ಯಾಟ್ಸ್ ಮನ್ ಹಾಗೂ ಎಡಗೈ ಸಾಂಪ್ರದಾಯಿಕ ಶೈಲಿ ಸ್ಪಿನ್ನರ್. 13 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾನೆ. 16 ದೇಶಿ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾನೆ. 592 ರನ್ ಹಾಗೂ 13 ವಿಕೆಟ್ ಕಬಳಿಸಿದ್ದಾನೆ. 2004ರಲ್ಲಿ ಡೆಲ್ಲಿ ಪರ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ನಂತರ ಹಿಮಾಚಲ ಪ್ರದೇಶ ತಂಡಕ್ಕೆ ಸೇರ್ಪಡೆಗೊಂಡಿದ್ದ. ಸುಧೀಂದ್ರ ಹಾಗೂ ಶಲಭ್ ರಂತೆ ಅಭಿನವ್ ಕೂಡಾ ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಡೆಲ್ಲಿ ಜೈಂಟ್ಸ್ ಪರ ಆಡಿದ್ದ.

ಮೊಹ್ನಿಶ್ ಮಿಶ್ರಾ(ಮಧ್ಯಪ್ರದೇಶ, 28 ವರ್ಷ): ಮೊಹ್ನಿಶ್ ಮಿಶ್ರಾ ಬಲಗೈ ಬ್ಯಾಟ್ಸ್ ಮನ್, ಮಧ್ಯಪ್ರದೇಶ ಪರ ಆಡುವ ಮೊಹ್ನಿಶ್, ಸುಧೀಂದ್ರನ ಸಹ ಆಟಗಾರ. ಸುಮಾರು 31 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮೊಹ್ನಿಶ್ 1,929 ರನ್ ಗಳನ್ನು ಪೇರಿಸಿದ್ದು, 214 ರನ್ ಅತ್ಯಧಿಕ ಮೊತ್ತ ಹೊಂದಿರುವ ಪ್ರತಿಭಾವಂತ ಆಟಗಾರ. ದೇಶಿ ಆಟದಲ್ಲಿ 5 ಶತಕಗಳನ್ನು ಬಾರಿಸಿದ್ದಾನೆ.

ಮೊದಲಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ಮೊಹ್ನಿಶ್ ನಂತರ ಪುಣೆ ವಾರಿಯರ್ಸ್ ತಂಡ ಸೇರಿಕೊಂಡಿದ. ಐಪಿಎಲ್5ರಲ್ಲಿ ಪುಣೆ ಪರ ಆಡಿದ್ದ.

English summary
The Board of Control for Cricket in India (BCCI), on Saturday, imposed bans on 5 Indian cricketers after accused of spot-fixing in domestic matches. TP Sudhindra was handed a life ban, Shalabh Srivastava was banned for five years while Amit Yadav, Abhinav Bali and Mohnish Mishra got one-year bans.
ಅಭಿಪ್ರಾಯ ಬರೆಯಿರಿ