Englishहिन्दीമലയാളംதமிழ்తెలుగు

ಸಚಿನ್ ಸಾಧನೆ: ಲಿಲ್ಲಿ ಹೊರಬಿಟ್ಟ ಸಿಲ್ಲಿ ರಹಸ್ಯ

Posted by:
Published: Tuesday, June 26, 2012, 23:05 [IST]
 

ಸಚಿನ್ ಸಾಧನೆ: ಲಿಲ್ಲಿ ಹೊರಬಿಟ್ಟ ಸಿಲ್ಲಿ ರಹಸ್ಯ
 

ಚೆನ್ನೈ, ಜೂ.26: 'ನೀವು ಈ ಫೀಲ್ಡ್ ನಲ್ಲಿರದಿದ್ದರೆ ಏನಾಗ್ತಾ ಇದ್ರಿ?' ಎಂಬ ಪ್ರಶ್ನೆ ಶ್ರೇಷ್ಠ ಸಾಧನೆಗೈದ ಎಲ್ಲಾ ಕ್ರೀಡಾಪಟುಗಳಿಗೆ ಸಾಮಾನ್ಯವಾಗಿ ಎದುರಿಸಬೇಕಾಗುತ್ತದೆ. ಸಚಿನ್ ತೆಂಡೂಲ್ಕರ್ ಅವರು ಶ್ರೇಷ್ಠ ಬ್ಯಾಟ್ಸ್ ಮನ್ ಆಗಿರದಿದ್ದರೆ ಏನಾಗುತ್ತಿದ್ದರು ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾ ಮಾಜಿ ವೇಗಿ ಡೆನ್ನಿಸ್ ಲಿಲ್ಲಿ ಸಿಲ್ಲಿ ಉತ್ತರ ನೀಡಿ ಕಿಡಿ ಹಾರಿಸಿದ್ದಾರೆ.

ಎಂಆರ್ ಎಫ್ ಪೇಸ್ ಫೌಂಡೇಷನ್ ಗೆ ಬೌಲರ್ ಆಗಲು ಬಂದಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ನಾನು 'reject' ಮಾಡಿದ್ದೇ ಅವರು ಶ್ರೇಷ್ಠ ಬ್ಯಾಟ್ಸ್ ಮನ್ ಆಗಿ ಮೆರೆಯಲು ಸಾಧ್ಯವಾಯಿತು. ಹೀಗಾಗಿ ಸಚಿನ್ ಅವರನ್ನು ಆಯ್ಕೆ ಮಾಡದೇ ನಾನು ಮಹದುಪಕಾರ ಮಾಡಿದ್ದೀನಿ ಎಂದು ಲಿಲ್ಲಿ ನಗೆಯಾಡಿದ್ದಾರೆ.

ಸುಮಾರು 25 ವಸಂತಗಳನ್ನು ಚೆನ್ನೈನ ಉರಿಬಿಸಿಲಿನಲ್ಲಿ ಕಳೆದಿರುವ ಡೆನ್ನಸ್ ಲಿಲ್ಲಿ ಎಂಆರ್ ಎಫ್ ಫೌಂಡೇಷನ್ ನ ಕೋಚಿಂಗ್ ನಿರ್ದೇಶಕ ಹುದ್ದೆಯನ್ನು ತೊರೆಯುವ ಹಂತದಲ್ಲಿದ್ದಾರೆ.

'1987ರಲ್ಲಿ 5 ಅಡಿ ಎತ್ತರದ 14 ವರ್ಷದ ಬಾಲಕ ಬಂದು ವೇಗದ ಬೌಲರ್ ಆಗಬೇಕು ಎಂದಾಗ ನಾನು ಬಿಲ್ ಕುಲ್ ಇಲ್ಲ. ಬ್ಯಾಟ್ ಹಿಡಿದು ನಿನ್ನ ಸಾಧನೆ ತೋರು ಹೋಗು' ಎಂದು ಸಚಿನ್ ರನ್ನು ಕಳುಹಿಸಿದ್ದೆ ಇದು ಅವರ ವೃತ್ತಿ ಜೀವನಕ್ಕೆ ತಿರುವು ನೀಡಿದ್ದಂತೂ ನಿಜ. ಅವರ ಸಾಧನೆಗೆ ನನ್ನ ತಿರಸ್ಕಾರ ಕಾರಣ ಎಂದರೆ ತಪ್ಪಾಗಲಾರದು ಅಲ್ವ?' ಎಂದು ಸುದ್ದಿಗಾರರತ್ತ ಪ್ರಶ್ನೆ ಎಸೆದು ಮತ್ತೊಮ್ಮೆ ನಗೆಯಲ್ಲಿ ಮುಳುಗಿದರು.

1989ರಲ್ಲಿ ಭಾರತ ಪರ ಆಡಲು ಶುರು ಮಾಡಿದ ಸಚಿನ್ ತೆಂಡೂಲ್ಕರ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಟೆಸ್ಟ್, ಏಕದಿನ, ಟ್ವೆಂಟಿ ಎಲ್ಲಾ ಮಾದರಿಯಲ್ಲೂ ಅಭೂತಪೂರ್ವ ಸಾಧನೆ ಮಾಡಿ ಕ್ರಿಕೆಟ್ ದೇವರು ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಎತ್ತರಕ್ಕೆ ಈ ವಾಮನ ಮೂರ್ತಿ ಬೆಳೆದಿದ್ದಾರೆ.

ಬೌಲಿಂಗ್ ನಲ್ಲಿ ರಿಜೆಕ್ಟ್ ಎನಿಸಿಕೊಂಡ ಸಚಿನ್ ಮತ್ತೊಮ್ಮೆ ಅದೇ ಎಂಆರ್ ಎಫ್ ಫೌಂಡೇಶನ್ ಗೆ ಮುಂದಿನ ವರ್ಷ ದಾಪುಗಾಲಿಡುತ್ತಾರೆ.

ಬ್ಯಾಟಿಂಗ್ ಕ್ರೀಸ್ ನಲ್ಲಿ ನಿಂತ ಛೋಟಾ ಮಾಸ್ಟರ್ ಕಡೆಗೆ ದೈತ್ಯ ವೇಗಿ ಲಿಲ್ಲಿ ಬೆಳೆಸಿದ ವೇಗಿಗಳು ಬೌಲ್ ಮಾಡತೊಡಗುತ್ತಾರೆ.

ಮೊದಲ ಎಸೆತವನ್ನು ಬೌಲರ್ ತಲೆ ಮೇಲೆ ನೇರವಾಗಿ ಬಾರಿಸಿ ಸಚಿನ್ ಬೌಂಡರಿ ಗಿಟ್ಟಿಸುತ್ತಾರೆ. ಲಿಲ್ಲಿ ಅದು ಫ್ಲೂಕ್ ಶಾಟ್ ಎಂದು ಮತ್ತೊಬ್ಬ ಬೌಲರ್ ಗೆ ಬಾಲ್ ಎಸೆಯಲು ಹೇಳುತ್ತಾರೆ.

ಸಚಿನ್ ಆ ಎಸೆತವನ್ನು ಸುಲಭವಾಗಿ ಫ್ಲಿಕ್ ಮಾಡಿ ಮತ್ತೆ ಬೌಂಡರಿ ಗೆರೆ ದಾಟಿಸುತ್ತಾರೆ. ಮುಂದಿನ ಎಸೆತವನ್ನು ಮೈದಾನದ ಆಚೆಗೆ ಕಳಿಸಿದ ಸಚಿನ್ ಆಟದ ವೈಖರಿಗೆ ಬೆರಗಾದ ಲಿಲ್ಲಿ, ನೇರ ಅಗಿನ ಮುಖ್ಯ ಕೋಚ್(ಅಕಾಡೆಮಿ)ಟಿಎ ಶೇಖರ್ ಬಳಿಗೆ ತೆರಳಿ 'ಯಾರಿತ?' ಎಂದು ಪ್ರಶ್ನಿಸುತ್ತಾರೆ.

ಅದಕ್ಕೆ ನಗುತ್ತಾ ಉತ್ತರಿಸಿದ ಶೇಖರ್ 'He is someone you rejected. His name is Sachin.' ಎನ್ನುತ್ತಾರೆ. ತಕ್ಷಣವೇ ಖುಷಿಗೊಂಡ ಲಿಲ್ಲಿ,

‘Mark my words, this lad will not only search for runs he will also go on to get many during his search.' ಎನ್ನುತ್ತಾರೆ.

ಇಂಥ ಲಿಲ್ಲಿ ಈಗ ಚೆನ್ನೈನ ಎಂಆರ್ ಎಫ್ ಫೌಂಡೇಶನ್ ತೊರೆದು ತಮ್ಮ ಊರಿಗೆ ತೆರಳುತ್ತಿದ್ದಾರೆ. ತಮ್ಮ ಮುಂದಿನ ಜೀವವನ್ನು ಸಂಸಾರದೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ದಾರೆ.

English summary
It was in 1987 when former Australian fast bowling great Dennis Lillee "rejected" Sachin Tendulkar when the Master Blaster had arrived at the MRF Pace Foundation to become a bowler. Recalling that incident, Lillee joked that he did him a "huge favour."
ಅಭಿಪ್ರಾಯ ಬರೆಯಿರಿ