Englishहिन्दीമലയാളംதமிழ்తెలుగు

ಜೂನ್ 25: ಭಾರತ ಕ್ರಿಕೆಟ್ ನ ಸ್ಮರಣೀಯ ದಿನ

Posted by:
Published: Monday, June 25, 2012, 18:19 [IST]
 

ಜೂನ್ 25: ಭಾರತ ಕ್ರಿಕೆಟ್ ನ ಸ್ಮರಣೀಯ ದಿನ
 

ಬೆಂಗಳೂರು, ಜೂ.25: ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಜೂ.25 ರಂದು ಹೊಸ ಇತಿಹಾಸ ನಿರ್ಮಾಣವಾಯಿತು. 1983 ಜೂನ್ 25 ಭಾರತದ ಕ್ರಿಕೆಟ್ ಇತಿಹಾಸಲ್ಲಿ ಅವಿಸ್ಮರಣೀಯ ದಿನವಾಗಿ ದಾಖಲಾಯಿತು. ವಿಂಡೀಸ್ ದೈತ್ಯರನ್ನು ಸಂಹರಿಸಿ ದೈತ್ಯ ಸಂಹಾರಿಗಳಾಗಿ ಕಪಿಲ್ ದೇವ್ ಅವರ ತಂಡ ವಿಶ್ವಕಪ್ ಎತ್ತಿ ವಿಜೃಂಭಿಸಿದರು.

ಕಪಿಲ್ ದೇವ್ ನಾಯಕತ್ವದ ದುರ್ಬಲ ತಂಡದ ಮೇಲೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಸುಲಭವಾಗಿ ಸವಾರಿ ಮಾಡಲಿದೆ ಎಂದು ಎಲ್ಲರೂ ಊಹಿಸಿದ್ದರು. ವಿಂಡೀಸ್ ತಂಡದ ಹ್ಯಾಟ್ರಿಕ್ ವಿಶ್ವಕಪ್ ಗೆಲುವಿನ ನಿರೀಕ್ಷೆ ಎಲ್ಲೆಡೆ ಮನೆ ಮಾಡಿತ್ತು. ಆದರೆ, ಕಪಿಲ್ ಡೆವಿಲ್ಸ್ 11 ಜನರ ತಂಡ ಸೂಪರ್ ಸಾಟರ್ಡೇ ಆಚರಿಸಿದರು. ವಿಶ್ವದ ಅತ್ಯಂತ ಜನಪ್ರಿಯ ಬಾಲ್ಕನಿಯಲ್ಲಿ ನಿಂತು ಭಾರತ ತಂಡ ಹೆಮ್ಮೆಯಿಂದ ಅಭಿಮಾನಿಗಳತ್ತ ಕೈ ಬೀಸಿತ್ತು.

ದಿ ಪ್ರುಡೆನ್ಶಿಯಲ್ ವಿಶ್ವಕಪ್ ಎಂದು ಕರೆಯಲ್ಪಟ್ಟ 1983ರ ವಿಶ್ವಕಪ್ ನಲ್ಲಿ 60 ಓವರ್ ಗಳ ಏಕದಿನ ಪಂದ್ಯವಾಡಲಾಗಿತ್ತು. ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೆ. ಲಾಯ್ಡ್ ಆಯ್ಕೆಯನ್ನು ಸಮರ್ಥಿಸಿಕೊಂಡ ವಿಂಡೀಸ್ ವೇಗಿಗಳು ಭಾರತ ತಂಡವನ್ನು 54.4 ಓವರ್ ಗಳಲ್ಲಿ 183 ರನ್ ಗಳಿಗೆ ನಿಯಂತ್ರಿಸಿಬಿಟ್ಟರು.[1983ರ ವಿಶ್ವಕಪ್ ಸ್ಕೋರ್ ಕಾರ್ಡ್]

ಭಾರತದ ಇನ್ನಿಂಗ್ಸ್ : ಸುನಿಲ್ ಗವಾಸ್ಕರ್ ಕೇವಲ 2 ರನ್ ಗಳಿಸಿ ಆಂಡಿ ರಾಬರ್ಟ್ಸ್ ಗೆ ಬಲಿಯಾದರು. ರಾಬರ್ಟ್ಸ್, ಜೋಲ್ ಗಾರ್ನರ್, ಮಾಲ್ಕಂ ಮಾರ್ಷಲ್ ಹಾಗೂ ಮೈಕಲ್ ಹೋಲ್ಡಿಂಗ್ ದಾಳಿಗೆ ಸಿಲುಕಿದ ಭಾರತದ ಬ್ಯಾಟ್ಸ್ ಮನ್ ಗಳು ಥರಗುಟ್ಟಿದರು.

ಬಿರುಗಾಳಿ ವೇಗದ ರಾಬರ್ಟ್ ಅವರು ಅದ್ಭುತ ಬೌಲಿಂಗ್ ಪ್ರದರ್ಶಿಸಿ 10 ಓವರ್ ಗಳಲ್ಲಿ 32 ರನ್ನಿತ್ತು 3 ವಿಕೆಟ್ ಕಬಳಿಸಿ ಭಾರತದ ಬೆನ್ನೆಲುಬು ಮುರಿದಿದ್ದರು. ರಾಬರ್ಟ್ ಸ್ಪೆಲ್ ನಲ್ಲಿ ಮೂರು ಮೇಡನ್ ಓವರ್ ಗಳಿತ್ತು. ಗಾರ್ನರ್ ಒಂದು ವಿಕೆಟ್ ಗಳಿಸಿದ್ದರೆ, ಮಾರ್ಷಲ್ ಹಾಗೂ ಹೋಲ್ಡಿಂಗ್ ತಲಾ 2 ವಿಕೆಟ್ ಪಡೆದಿದ್ದರು.

ಅಲ್ಪ ಮೊತ್ತಕ್ಕೆ ಕುಸಿದ ಭಾರತದ ಪಾಲಿಗೆ 38 ರನ್ ಗಳಿಸಿ ಕ್ರಿಸ್ ಶ್ರೀಕಾಂತ್ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಎನಿಸಿದರು. ಮೊದಲ ಇನ್ನಿಂಗ್ಸ್ ನಂತರ ಭಾರತ ಗೆಲ್ಲುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ, ಕಪಿಲ್ ದೇವ್ ತಂಡ ಮಾತ್ರ ವಿಶ್ವಾಸದಿಂದ ಕಣಕ್ಕಿಳಿದಿತ್ತು.

ಉತ್ತಮ ಫಾರ್ಮ್ ನಲ್ಲಿದ್ದ ವಿಂಡೀಸ್ ಆರಂಭಿಕ ಆಟಗಾರ ಗಾರ್ಡನ್ ಗ್ರೀನಿಡ್ಜ್ ಅವರು ಕೇವಲ 1 ರನ್ ಗಳಿಸಿ ಬಲ್ವಿಂದರ್ ಸಂದುಗೆ ಬೋಲ್ಡ್ ಆಗಿದ್ದು ಭಾರತದ ಅಭಿಮಾನಿಗಳಿಗೆ ಕಿಚ್ಚು ಎಬ್ಬಿಸಿಬಿಟ್ಟಿತು.

ವಿವ್ ರಿಚರ್ಡ್ಸ್ ಅವರ ಕ್ಯಾಚನ್ನು ಕಪಿಲ್ ದೇವ್ ಅವರು ಹಿಂಬದಿ ಓಡುತ್ತಾ ಕ್ಯಾಚ್ ತೆಗೆದುಕೊಂಡಿದ್ದು, ಪಂದ್ಯಕ್ಕೆ ರೋಚಕ ತಿರುವು ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ ಭಾರತದ ಬೌಲರ್ ಗಳು ತಮ್ಮ ದಾಳಿ ಮುಂದುವರೆಸಿ, ಯಶ ಕಂಡರು.

ಮೋಹಿಂದರ್ ಅಮರನಾಥ್ ಅವರು 7 ಓವರ್ ನಲ್ಲಿ 12 ರನ್ನಿತ್ತು 3 ಮಹತ್ವದ ವಿಕೆಟ್ ಗಳಿಸಿ ಟೀಕಾಕಾರರ ಬಾಯಿ ಮುಚ್ಚಿದ್ದಲ್ಲದೆ ಪಂದ್ಯಶ್ರೇಷ್ಠ ಎನಿಸಿದರು. ಮದನ್ ಲಾಲ್ ಕೂಡಾ 3 ವಿಕೆಟ್ ಕಬಳಿಸಿ ವಿಂಡೀಸ್ ತಂಡಕ್ಕೆ ಆಘಾತ ನೀಡಿದರು.

ಅಂತಿಮವಾಗಿ ಭಾರತಕ್ಕೆ ಶರಣಾದ ದೈತ್ಯ ವಿಂಡೀಸ್ ಪಡೆ 43 ರನ್ ಗಳಿಂದ ಪಂದ್ಯ ಹಾಗೂ ವಿಶ್ವಕಪ್ ಅನ್ನು ಕಳೆದುಕೊಂಡಿತು. ಭಾರತ ತಂಡದ ಈ ಸಾಧನೆ ಮತ್ತೊಮ್ಮೆ ಪುನಾರವರ್ತನೆಯಾಗಲು 28 ವರ್ಷಗಳೇ ಬೇಕಾಯಿತು.

ಆದರೆ, ಈಗಲೂ 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸಾಧನೆಯನ್ನು ಕಣ್ಮುಂದೆ ನಡೆದಂತೆ ಈಗಲೂ ಕತೆ ಹೇಳುವವರು ಭಾರತದೆಲ್ಲೆಡೆ ಸಿಗುತ್ತಾರೆ. ಮೊಟ್ಟಮೊದಲ ಬಾರಿಗೆ ಕ್ರಿಕೆಟ್ ಜಗತ್ತಿನಲ್ಲಿ ದುರ್ಬಲ ತಂಡವೊಂದು ದೈತ್ಯ ಪಡೆಯನ್ನು ಹೊಡೆದುರಳಿಸಿ ಇತಿಹಾಸ ನಿರ್ಮಿಸಿತ್ತು. ಜೂ.25 ಭಾರತ ಕ್ರಿಕೆಟ್ ಪಾಲಿಗೆ ಅವಿಸ್ಮರಣೀಯ ದಿನವಾಗಿ ದಾಖಲಾಯಿತು. (ದಟ್ಸ್ ಕ್ರಿಕೆಟ್)

English summary
Indian did the unthinkable at Lord's on this day, June 25 in 1983. In a fight dubbed as David Vs Goliath, the mighty West Indies were stunned by India in the World Cup final at the Lord's.
ಅಭಿಪ್ರಾಯ ಬರೆಯಿರಿ