Englishहिन्दीമലയാളംதமிழ்తెలుగు

ಜೋಶಿ ಕರ್ನಾಟಕದ ಕ್ರಿಕೆಟ್ ರತ್ನ: ರಾಹುಲ್ ದ್ರಾವಿಡ್

Posted by:
Published: Friday, June 22, 2012, 16:01 [IST]
 

ಬೆಂಗಳೂರು, ಜೂ.22 : ಭಾರತದ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ಗುರುವಾರ ಅಧಿಕೃತವಾಗಿ ನಿವೃತ್ತಿಯಾಗಿದ್ದಾರೆ. ಜೂ.21 ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಹಾಗೂ ರೋಜರ್ ಬಿನ್ನಿ ಸಮ್ಮುಖದಲ್ಲಿ ಜೋಶಿ ಕ್ರಿಕೆಟ್ ಗೆ ವಿದಾಯ ಹೇಳಿದರು.


ಸುನಿಲ್ ಜೋಶಿ ಅವರನ್ನು ಹಾಡಿ ಹೊಗಳಿದ ರಾಹುಲ್ ದ್ರಾವಿಡ್, 'ಕರ್ನಾಟಕದ ಕ್ರಿಕೆಟ್ ರತ್ನ' ಎಂದು ಬಣ್ಣಿಸಿದರು. ಜೋಶಿ ಅವರ ಚಲ, ಕಠಿಣ ಪರಿಶ್ರಮದಿಂದ ನಾನು ಬೆರಗಾಗಿದ್ದೇನೆ.

ಪಂದ್ಯದ ಆರಂಭದಲ್ಲಿ ಬೌಲ್ ಮಾಡಲು 'ಜೋ'ಗೆ ಹೇಳಿದರೆ, ಪಂದ್ಯದ ಕೊನೆವರೆಗೂ ಅದೇ ಸ್ಥಿರ ಪ್ರದರ್ಶನ ನೀಡಿ ಬೌಲ್ ಮಾಡುತ್ತಿದ್ದದ್ದು ಆಶ್ಚರ್ಯ ಹುಟ್ಟಿಸುತ್ತಿತ್ತು. ಅನಿಲ್ ನಂತರ ಜೋ ನಲ್ಲಿ ಆ ಸಾಮರ್ಥ್ಯ ನಾನು ಕಂಡೆ. ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲು ಜೋಶಿ ಸಾಕಷ್ಟು ನೆರವು ನೀಡಿದ್ದಾರೆ. ಜೋ ಇನ್ನಷ್ಟು ಕಾಲ ಭಾರತವನ್ನು ಪ್ರತಿನಿಧಿಸಬೇಕಿತ್ತು ಎಂದು ರಾಹುಲ್ ಹೇಳಿದರು.

ಮುಂಜಾನೆ ಎದ್ದು ಬಿಡ್ತಿದ್ದ: 'ಸುಧಾಕರ್ ರಾವ್ ನಾಯಕತ್ವದಲ್ಲಿ ಹಳೆ ಕೆಎಸ್ ಸಿಎ ಕಟ್ಟಡದಲ್ಲಿ ಒಂದು ಡಾರ್ಟ್ಮೆಂಟರಿ ಥರಾ ರೂಮ್ ನಲ್ಲಿ ನಾನು ಜೋಶಿ ಇದ್ದೆವು. ಅಫ್ ಕೋರ್ಸ್ ಬೆಂಗಳೂರಿನಂಥ ದೊಡ್ಡ ನಗರಕ್ಕೆ ಬಂದಾಗ ನಮಗೆ ಮೊದಮೊದಲು ತುಂಬಾ ಕಷ್ಟವಾಗಿತ್ತು.

ನನಗಿಂತ 'ಜೋ' ಗೆ ಇಲ್ಲಿ ಹೊಂದಿಕೊಳ್ಳಲು ಒದ್ದಾಡುತ್ತಿದ್ದ. ಬೆಳಗ್ಗೆ 4 ಗಂಟೆಗೆ ಎದ್ದು ರೆಡಿ ಆಗಿ ಕೂತಿರುತ್ತಿದ್ದ. ನಾನು ಕಣ್ಣುಜ್ಜಿಗೊಂಡು 'ಮಲಕೋ ಬಾಪ್ಪ ಇದು ನಿಮ್ಮ ಗದಗ್ ಅಲ್ಲ. ಇಷ್ಟು ಬೇಗ ಎದ್ದು ಏನು ಮಾಡ್ತೀಯ' ಎಂದು ಹೇಳುತ್ತಿದ್ದೆ. ಆದರೆ, ಜೋ ಗೆ ಅದು ಅಭ್ಯಾಸ ಬಲದಿಂದ ಬಂದಿದ್ದು.. ಹಾಗೆ ಮುಂದುವರೆಯಿತು. ನಾನು ಅವನನ್ನು ಕರೆದುಕೊಂಡು ಕಬ್ಬನ್ ಪಾರ್ಕ್ ನಲ್ಲಿ ಲಾಗ್ ವಾಕ್ ಹೋಗ್ತಾ ಇದ್ದೆ.

ಇನ್ನೊಮ್ಮೆ ಯಾವುದೋ ರಣಜಿ ಪಂದ್ಯಕ್ಕಾಗಿ ಬೆಳಗ್ಗೆ ಅಭ್ಯಾಸ ಮಾಡ್ತಾ ಇದ್ದೆವು. ಅಭ್ಯಾಸ ಮಾಡುತ್ತಿದ್ದ ಜೋಶಿ ಸಡನ್ ಆಗಿ ಕುಸಿದು ಬಿದ್ದು ಬಿಟ್ಟಿದ್ದ. ನಾವು ಸ್ಪಿನ್ನರ್ ಕತೆ ಏನಪ್ಪ ಎಂದು ಯೋಚನೆ ಮಾಡುತ್ತಿದ್ದರೆ, ಆ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಅಚ್ಚರಿ ಮೂಡಿಸಿಬಿಟ್ಟಿದ್ದ.

ಇದಲ್ಲದೆ, ಜೋಶಿ ಅದ್ಭುತ ಅಡುಗೆ ಮಾಡುತ್ತೇನೆ ಕೂಡಾ. ಅವನ ನಳಪಾಕ ತಿನ್ನಲು ನಾವು ಹುಡುಕಿಕೊಂಡು ಬರುತ್ತಿದ್ದೆವು ಎಂದು ಜಾವಗಲ್ ಶ್ರೀನಾಥ್ ನೆನಪಿಸಿಕೊಂಡರು.

ಶ್ರೀ ಹಾಗೂ ಜೋ ಮುನಿಸು: ಅಜರ್ ನಾಯಕತ್ವದ ಒಂದು ಟೆಸ್ಟ್ ಪಂದ್ಯ. ಸಾಮಾನ್ಯವಾಗಿ ಸ್ಪಿಪ್ ನಲ್ಲಿ ಯಾವತ್ತು ಫೀಲ್ಡ್ ಮಾಡದ ಶ್ರೀನಾಥ್, ಜೋ ಬೌಲಿಂಗ್ ನಲ್ಲಿ ಸ್ಪಿಪ್ ನಲ್ಲಿ ನಿಂತಿದ್ದ ಶ್ರೀನಾಥ್ ಸುಲಭ ಕ್ಯಾಚ್ ಕೈ ಚೆಲ್ಲಿಬಿಟ್ಟರು.

ತಕ್ಷಣ ಸಿಟ್ಟಿಗೆದ್ದ ಜೋ'ಯಾರು ಎಲ್ಲಿ ಇರಬೇಕೋ ಅಲ್ಲಿರಬೇಕು. ನಿನ್ನ ಫೀಲ್ಡಿಂಗ್ ಸ್ಥಾನಕ್ಕೆ ಹೋಗು' ಎಂದು ಶ್ರೀನಾಥ್ ಮೇಲೆ ಗದರಿದ್ದರಂತೆ. ಈ ಘಟನೆ ಬಳಿಕ ಕೆಲ ದಿನಗಳ ಇಬ್ಬರು ಮಾತಾಡಿರಲಿಲ್ಲವಂತೆ.

ಆದರೆ, ವಾಚಾಳಿ ಶ್ರೀನಾಥ್, ಸಹೃದಯಿ ಜೋ ಗೆಳೆತನ ಗಟ್ಟಿಯಾಗಿತ್ತು. ಇಂದಿಗೂ ಗಟ್ಟಿಯಾಗೇ ಉಳಿದಿದೆ.

ರಾಹುಲ್ ಗೆ ಥ್ಯಾಂಕ್ಸ್: 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎಲ್‌ಜಿ ಕಪ್‌ನಲ್ಲಿ ಜೋಶಿ ಶ್ರೇಷ್ಠ ಬೌಲಿಂಗ್(10-6-6-5) ಪ್ರದರ್ಶನ ನೀಡಲು ದ್ರಾವಿಡ್ ಕಾರಣ. ಎರಡು ಅದ್ಭುತ ಕ್ಯಾಚ್ ತೆಗೆದುಕೊಂಡ ಮೇಲೆ ಅದರಿಂದ ಸ್ಪೂರ್ತಿಗೊಂಡು ನಾನು ಉತ್ತಮ ಬೌಲಿಂಗ್ ಮಾಡಿದೆ ಎಂದು ಜೋಶಿ ಹೇಳಿದರು. ಬಿಷನ್ ಸಿಂಗ್ ಬೇಡಿ ಅವರ ಮಾರ್ಗದರ್ಶನ ನನ್ನ ಸ್ಥಿರ ಪ್ರದರ್ಶನಕ್ಕೆ ಕಾರಣ ಎಂದರು.

ರಣಜಿಯಲ್ಲಿ ಮಧ್ಯಪ್ರದೇಶ ವಿರುದ್ಧ ಮಳೆಗೆ ಆಹುತಿಯಾದ ಪಂದ್ಯ, ಮೊದಲ ಇನ್ನಿಂಗ್ ಲೀಡ್ ಕೊಟ್ಟಿದ್ದೆವು. ಕೊನೆ ದಿನ ದೊಡ್ಡ ಗಣೇಶ್ ಬೌಲಿಂಗ್ ಮಾಡುತ್ತಿದ್ದಂತೆ ಮಂದ ಬೆಳಕು ಆವರಿಸಿತು. ಪಂದ್ಯ ನಡೆಯುವುದೇ ಅನುಮಾನ ಎನ್ನಿಸಿತ್ತು. ವಿಜಯ್ ಬ್ಯಾಟಿಂಗ್ ಹಾಗೂ ದೇವರ ಕೃಪೆ ಪಂದ್ಯ ಗೆದ್ದು, ಕಪ್ ಎತ್ತಿದ್ದು ನನಗೆ ಇಂದಿಗೂ ಕಣ್ಣಿಗೆ ಕಟ್ಟಿದ್ದಂತ್ತಿದೆ ಎಂದು ಜೋಶಿ ಹರ್ಷದಿಂದ ಹೇಳಿದರು.

ಕರ್ನಾಟಕದ ಗದಗ್‌ನಲ್ಲಿ ಜೂ.6, 1970ರಲ್ಲಿ ಜನಿಸಿದ ಜೋಶಿ ಎಡಗೈ ಸ್ಪಿನ್ನರ್ ಹಾಗೂ ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾರೆ. 1996ರಿಂದ 2001ರ ನಡುವೆ ಭಾರತ ತಂಡದಲ್ಲಿ ಏಕದಿನ ಹಾಗೂ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಜೋಶಿ ಸಾಧನೆ:

* ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಹಾಗೂ ಏಕಲವ್ಯ ಪ್ರಶಸ್ತಿ
* ರಣಜಿಯಲ್ಲಿ ಕರ್ನಾಟಕ ಪರ ಅತಿಹೆಚ್ಚು ವಿಕೆಟ್ ಗಳಿಸಿದ್ದಾರೆ.
* ರಣಜಿಯಲ್ಲಿ 4000 ರನ್ ಹಾಗೂ 400 ವಿಕೆಟ್ ಗಳಿಸಿದ ಸಾಧನೆ
* ಭಾರತ ಮತ್ತು ಬಾಂಗ್ಲಾದೇಶ ಸರಣಿ ಶ್ರೇಷ್ಠ 2000(92 ರನ್ ಹಾಗೂ 8 ವಿಕೆಟ್)
* 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎಲ್‌ಜಿ ಕಪ್‌ನಲ್ಲಿ ಜೋಶಿ ಶ್ರೇಷ್ಠ ಬೌಲಿಂಗ್(10-6-6-5) ಪ್ರದರ್ಶನ
* ವಿಸ್ಡನ್ ನಿಂದ ಏಳನೆ ಶ್ರೇಷ್ಠ ಏಕದಿನ ಪ್ರದರ್ಶನ ಎಂದು ಗುರುತಿಸಲ್ಪಟ್ಟಿದೆ.
* ಜೋಶಿ 2008 ಹಾಗೂ 2009ರ ಋತುವಿನಲ್ಲಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.

* ಭಾರತದ ಪರ 15 ಟೆಸ್ಟ್ ಪಂದ್ಯಗಳನ್ನು ಆಡಿ 41 ವಿಕೆಟ್ ಗಳಿಸಿದ್ದಾರೆ. 142 ರನ್ನಿತ್ತು 5 ವಿಕೆಟ್ ಪಡೆದಿದ್ದು ಅವರ ಶ್ರೇಷ್ಠ ಪ್ರದರ್ಶನವಾಗಿದೆ.

* ಭಾರತ ಪರ 69 ಏಕದಿನ ಪಂದ್ಯಗಳನ್ನು ಆಡಿ 69 ವಿಕೆಟ್ ಕಬಳಿಸಿದ್ದಾರೆ.
* ಪ್ರಥಮದರ್ಜೆ ಪಂದ್ಯಗಳಲ್ಲಿ 160 ಪಂದ್ಯಗಳಲ್ಲಿ 615 ವಿಕೆಟ್ ಗಳನ್ನು ಗಳಿಸಿದ್ದಾರೆ.
* ಜನವರಿ 2011ರಲ್ಲಿ ಕೊನೆ ಬಾರಿಗೆ ಬರೋಡಾ ವಿರುದ್ಧ ಕರ್ನಾಟಕ ಪರ ಆಡಿದ್ದರು.

* ಪ್ರಥಮ ದರ್ಜೆ ಪಂದ್ಯಗಳಲ್ಲಿ 4 ಶತಕ ಹಾಗೂ 26 ಅರ್ಧಶತಕಗಳುಳ್ಳ 5,129 ರನ್ ಪೇರಿಸಿದ್ದಾರೆ.

* 1992-93ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಾಲಿಟ್ಟ ಜೋಶಿ, ಟೆಸ್ಟ್ ಕ್ರಿಕೆಟರ್ ಆಗಲು 1996ರವರೆಗೂ ಕಾಯಬೇಕಾಯಿತು.
* 1996ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಟೀಂ ಇಂಡಿಯಾದ ಪ್ರಮುಖ ಎಡಗೈ ಸ್ಪಿನ್ನರ್ ಆಗಿ ಜೋಶಿ ಗುರುತಿಸಿಕೊಂಡರು. ಅದೇ ವರ್ಷ ಕೊಲೊಂಬೊದಲ್ಲಿ ಜಿಂಬಾಬ್ವೆ ವಿರುದ್ಧ ಪ್ರಥಮ ಏಕದಿನ ಕ್ರಿಕೆಟ್ ಪಂದ್ಯವಾಡಿದರು.

* ಕಟ್ಟ ಕಡೆಯ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು 2000ರಲ್ಲಿ ನಾಗಪುರದಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ್ದರು.
* ಕೊನೆಯ ಏಕದಿನ ಪಂದ್ಯ ಅದೇ ವರ್ಷ ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

English summary
Retiring Sunil Joshi was showered with rich tributes by his Karnataka mates and former India great Rahul Dravid described him as an "ornament" of the game and Indian cricket.Javagal Srinath remembered sharing room with him and said Jo is also a good cook.
ಅಭಿಪ್ರಾಯ ಬರೆಯಿರಿ